Wednesday 19 September 2012

ಚೂಡಾರತ್ನ ಶತಕ [ಸಂಗ್ರಹ]

"ಚೂಡಾರತ್ನ ಶತಕ"ವು ಒಂದು ಅಪೂರ್ವವಾದ ನೀತಿಪ್ರಭೋಧಕ ಕಾವ್ಯ. ಇದನ್ನು ಬರೆದ ಕವಿ,ಕಾಲ,ಜಾಗಗಳ ಬಗ್ಗೆ ಯಾವುದೇ ವಿವರಗಳು ಲಭ್ಯವಿಲ್ಲ.ಜ್ಞಾನೇಶ್ವರನೆಂಬ ಪಂಡಿತರಿಂದ ಇದು ಪರಿಷ್ಕರಿಸಲ್ಪಟ್ಟಿದೆ ಎಂದು ತಿಳಿದುಬರುತ್ತದೆ.ಈ ಶತಕದ ಪದ್ಯಗಳು ಜನಮಾನಸದಿಂದ ಅಳಿದು ಹೋಗು ಹಂತದಲ್ಲಿದೆ. ಈ ಶತಕದ ಕೆಲವು ಪದ್ಯಗಳು ಹಿಂದೆ ಪ್ರಾಥಮಿಕ ಶಾಲಾ ಪಠ್ಯ ಪುಸ್ತಕಗಳಲ್ಲಿ ಬಳಸಲಾಗಿತ್ತು.ಒಬ್ಬ ಅಜ್ಞಾತ ಕವಿಯ ಕಾವ್ಯವು ಅಳಿನ ಅಂಚಿನಲ್ಲಿದೆ ಎಂಬ ಕಾರಣಕ್ಕಾಗಿ ಅವುಗಳನ್ನು ಸಂಗ್ರಹಿಸಿ ಒಂದೆಡೆ ಮುಂದಿನ ಪೀಳಿಗೆಗಾಗಿ ಉಳಿಸುವುದು ವಿಹಿತವೆಂಬ ಉದ್ದೇಶದಿಂದ ಇಲ್ಲಿ ಅವುಗಳನ್ನು ಸಂಗ್ರಹಿಸಿ ಇಡುವ ಕಾರ್ಯಕ್ಕೆ ಕೈ ಹಾಕಿರುತ್ತೇನೆ.ಈ ಶತಕ ಸಂಗ್ರಹವು ಜನಮಾನಸದಲ್ಲಿ ಸದಾ ಉಳಿಯಲಿ ಎಂಬುದು ನನ್ನ ಹಾರೈಕೆ.
*********************************************************************************************
                                        || ಶ್ರೀ ಗುರುಭ್ಯೋ ನಮ: ||
=============================================================================================

ಶ್ರೀ ಗುರುವಂ ನೆನೆಯಲ್ಕೆಡ| 
ರಾಗದು ಕಂಡದೆ ಭವಂಗಳೋಡುವುವಲ್ತನು
ರಾಗದಿ ಚರಣಾಶ್ರಯ ಕೊಂ|
ಡಾಗಳಮಿಹಪರಕೆ ಸೌಖ್ಯ ಚೂಡಾರತ್ನಾ ೧ ]


    [ ಭವ=ಹುಟ್ಟು/ಜನ್ಮ; ಎಡರು=ತೊಂದರೆ; ಅಲ್ತೇ=ಅಲ್ಲವೇ.]



"ಸುರನಾಕರ್ಷಣ ಮಂತ್ರಂ

ವರ ಮುಕ್ತ್ಯಂಗನೆಗೆ ತಾನೆ ಮೋಹನ ಮಂತ್ರಂ|
ದುರಿತೋಚ್ಚಾಟನ ಮಂತ್ರಂ|
ಗುರು ನಾಮದ ಮಹಿಮೆಯಲ್ತೆ ಚೂಡಾರತ್ನಾ||   [  ]


ನೀತಿಯಲಿ ನಡೆಯಬಲ್ಲಡೆ

ಮಾತಂ ಪರಹಿತವ ನುಡಿಯ ಬಲ್ಲಡೆ ಸುಜನ
ಪ್ರೀತಿಯನು ಮಾಡಬಲ್ಲಡೆ
ಯಾತಂಗರಿದುಂಟೆ
ಕೇಳು ಚೂಡಾರತ್ನಾ||  ೩ ]


        [ಅರಿದು=ಅಸಾಧ್ಯ.]



ನೀತಿಗಳು ಸಕಲ ಶಾಸ್ತ್ರ|

ಖ್ಯಾತಿಗಳರಿವುಳ್ಳ ರಸಿಕ ಬುಧಜನಮನ ಸಂ|
ಪ್ರೀತಿಗಳು ದು:ಖ ತಿಮಿರ|
ಜ್ಯೋತಿಗಳೆಂದೆನಿಸುತಿಹವು ಚೂಡಾರತ್ನಾ||  [ ೪ ]


      [ಅರಿವು=ತಿಳುವಳಿಕೆ,ವಿವೇಕ]



 ಮಕ್ಕಳಿಗೆ ತಂದೆ ಬಾಲ್ಯದೊ|

 ಳಕ್ಕರ ವಿದ್ಯೆಗಳನರಿಪದಿರ್ದೊಡೆ ಕೊಂದಂ|
 ಲಕ್ಕ ಧನಮಿರಲು ಕೆಡುಗುಂ|
 ಚಿಕ್ಕಂದಿನ ವಿದ್ಯೆ ಪೊರೆಗು ಚೂಡಾರತ್ನಾ ||  [ ೫ ]


         [ಲಕ್ಕ= ಲಕ್ಷ ]



 ಓದದ ಬಾಯ್ ಅಮೃತಾನ್ನವ|

 ಮೋದದ ಬಾಯ್ ಸಜ್ಜನರ್ಕಳಂ ಪ್ರಿಯದಿಂದಂ|
 ಆದರಿಸದ ಬಾಯದು ತಾಂ| 
 ಮೇದಿನಿಯೊಳು ಬಿಲದ ಬಾಯಿ ಚೂಡಾರತ್ನಾ||  [ ೬ ]


           [ಮೋದ= ಸವಿ; ಸಂತೋಷಪಡು.]



 ಓದಿನೊಳಲ್ಲದೆಯಿಹಪರ|

 ಸಾಧನ ಸಂಪತ್ತುಮಾಗದದು ಕಾರಣದಿಂ|
 ಓದುವುದು ಸಕಲ ಶೃತಮಂ|
 ಭೇಧಿಸಲಳವಪ್ಪುದಲ್ತೇ ಚೂಡಾರತ್ನಾ||  [ ೭ ]


     [ಅಳವು = ಸಾಮರ್ಥ್ಯ, ಶಕ್ತಿ ]



ಬರೆಯದ ಕೈ ಬಂಧುಗಳಂ|

ಪೊರೆಯದ ಕೈ ಸುತರನೆತ್ತಿ ಕೊಂಡಾಡದ ಕೈ|
ಕರೆದು ಬುಧರ್ಗೀಯದ ಕೈ|
ಮರಗೈ ಮರುಳ್ಗೈಗಳಂತೆ ಚೂಡಾರತ್ನಾ||  [೮ ]


         [ಬುಧರು=ವಿದ್ವಾಂಸರು;ಬುಧ್ಧಿವಂತರು ]



ವಿದ್ಯೆಯೆ ಮಾತಾಪಿತರುಂ| 

ಬುದ್ಧಿಯೆ ಸೋದರರು ವಿನಯ ವಚನಮೆ ನೆಂಟಂ|
ಅಧ್ವಾನ ಹಿಂಗಿ ಸುಖದಿಂ|
ದಿದ್ದುದೆ ತನ್ನೂರು ಕೇಳು ಚೂಡಾರತ್ನಾ||  [೯ ]


       [ಅಧ್ವಾನ= ಕಷ್ಟ,ತೊಂದರೆಗಳು.]



 ಸ್ತ್ರೀಯರನೊಲಿಸುವೊಡಂ ಕವಿ |

 ನಾಯಕನೆನಿಸುವೊಡೆ ತನ್ನ ಕೃತಿ ಚಂದ್ರಾರ್ಕ |
 ಸ್ಥಾಯಿಯೆನಿಸುವೊಡೆ ಬಲ್ಲರ |
 ಬಾಯಂ ಪೊಕ್ಕೋದಿ ಕಲಿಗೆ ಚೂಡಾರತ್ನಾ || [೧೦ ]


            [ಚಂದ್ರಾರ್ಕ= ಚಂದ್ರ, ಸೂರ್ಯ ]



 ತಪ್ಪುತ್ತೆಡಹುತ್ತೋದು|

 ತ್ತಿಪ್ಪನ ಬಾಯ್ ಕತ್ತೆ ವಾಯಿ ಕಾನನವಾಯ್ತಾಂ |
 ಕಪ್ಪುರ ಕರಡಿಗೆ ಬಾಯಿಂ|
 ತಪ್ಪದೆ ಓದುವನ ಬಾಯಿ ಚೂಡಾರತ್ನಾ||  [ ೧೧ ]


ಎಡರದೆ ತಡೆಯದೆ ತಲೆಯಂ | 

ಕೊಡಹದೆ ಕಡುವಹಿಲಜಾಡ್ಯವೆನಿಸದೆ ರಸಮಂ | 
ಕೆಡಿಸದೆ ಸರ್ವರ ಚಿತ್ತ | 
ಕ್ಕೊಡಬಡಲೋದುವನೆ ಗಮಕಿ ಚೂಡಾರತ್ನಾ||   [೧೨ ]


      [ಕಡು=ಕರ್ಕಶ; ವಹಿಲ=ವೇಗ,ರಭಸ,ಚಪಲತೆ; ಒಡಬಡು= ಒಡಂಬಡು, ಮೆಚ್ಚು ]



 ಅಕ್ಕರ ಹೊರಗೆ ಛಂದಸು|

 ತರ್ಕಂ ವ್ಯಾಕರಣದರಿವನರಿತೋದದ ಬಾಯ್ |
 ಲೆಕ್ಕಕ್ಕೋದುವನೋದುಂ |
 ಸೊಕ್ಕಿದ ನರಿಯಾಡುವಂತೆ  ಚೂಡಾರತ್ನಾ|| [ ೧೩ ]


     [ಅಕ್ಕರ ಹೊರಗೆ =ಅಕ್ಷರದ ಹೊರಗಿನ; ಅರಿವು=ತಿಳಿವು,ಅರ್ಥ ]



  ವಕ್ಕಲಿಗನೋದು ಹೆಳವನ|

  ವಿಕ್ರಮ ಮುಂಬೆಂದ ಸೀರೆ ಸಲ್ಲದ ಧರ್ಮಂ |
  ಪಕ್ಕಲೆಯ ನೀರು ಮನಕಂ | 
  ಕೊಕ್ಕರಿಕೆಯ ತಾರದಿಹುದೆ ಚೂಡಾರತ್ನಾ || [೧೪ ]


     [ ಪಕ್ಕಲೆ=ಕೊಚ್ಹೆ,ಅಸಹ್ಯ,ಕೊಳಕು; ಕೊಕ್ಕರಿಕೆ= ಅಸಹ್ಯ, ಹೇಸಿಗೆ ]



 ಉಕ್ಕದೆ ಬಿಕ್ಕದೆ ಲಿಪಿಯಂ ನಕ್ಕದೆ|

 ತಡವರಿಸದೆಡಹದೆ ಪದವಿ|
 ಟ್ಟಕ್ಕರ ಬಣಿತೆಯೋಳುವು |
 ದಕ್ಕರಿಗರ ಮಾರ್ಗವಲ್ತೆ ಚೂಡಾರತ್ನಾ || [೧೫ ]


        [ ಅಕ್ಕರಿಗ =ವಿದ್ವಾಂಸ; ಬಣಿತೆ= ಬಣ್ಣನೆ, ವರ್ಣನೆ. ]



 ತಮತಮಗೆ ಬುಧ್ಧಿವಂತರು | 

 ತಮತಮಗೆಯು ವಿದ್ಯೆಯಲ್ಲಧಿಕರು ಚೆಲುವರು |
 ತಮತಮಗೆ ಗುಣಿಗಳಲ್ಲದೆ | 
 ತಮತಮಗವಗುಣಗಳುಂಟೆ ಚೂಡಾರತ್ನಾ|| [೧೬ ] 


 ನಾರಿಯ ಮನಮಂ ಕವಿತಾ |

 ಸಾರತೆಯಂ ದಿವ್ಯ ತಪಸಿಯಂ ಸಜ್ಜನರಂ |
 ಭಾರಿಯ ಜಾಣರು ಬಲ್ಲರು | 
 ಊರುಗರೇಂ ಬಲ್ಲರೆಂದ ಚೂಡಾರತ್ನಾ ||   [೧೭ ]


     [ ಊರುಗರು = ಹಳ್ಳಿಗರು ;ಸಾರತೆ= ತಿರುಳು, ಕವಿತಾ ಸಾರ; ಭಾರಿಯ= ಹೆಚ್ಚಿನ.]



 ಅರಿಯದರ ಮುಂದೆ ಕಳೆಗಳು |

 ಮೆರೆವವೆ ನಿಷ್ಕಳೆಗಳಹವು ಅಲ್ಲದೆ ನಸು ಮಾ|
 ತರಿಯದ ಬಾಲಕಿಯೊಳ್ವಿಟ|
 ನರಿತವದೇನುರಿವುದೆಂದ ಚೂಡಾರತ್ನಾ || [೧೮ ]


    [ ಅರಿಯದರ= ಅರಿಯದವರ; ಕಳೆ= ಕಲೆ;ಲಲಿತ ಕಲೆ; ಉರಿವುದು= ಸುಡುವುದು ]



 ಮದ್ದಳೆಯ ಗತಿಗೆ ಜಘನಗ|

 ಳೆದ್ದಾಡಲು ನಗುತ ಕಂಡು ಲಾಲಿಪರಲ್ಲದೆ |
 ಪದ್ಯ ಪದ ಕಾವ್ಯದರ್ಥವ |
 ದೊದ್ದಗರೇಂ ಬಲ್ಲರೆಂದ ಚೂಡಾರತ್ನಾ ||  [೧೯ ]


     [ಜಘನ= ಸೊಂಟದ ಹಿಂಭಾಗ; ದೊದ್ದಗರು= ಬಲಹೀನರು, ಅಸಮರ್ಥರು ]



 ಜಾತಿಯನುಸುರ್ವನೆ ಕವಿ ರಸ |

 ರೀತಿಯಲೋದುವನೆ ಗಮಕಿ ಪರರೆಂದುದನುಂ |
 ಘಾತಿಪನೆ ವಾದಿ ವಾಕ್ ನೆರೆ |
 ವಾತಂ ವಾಗ್ಮಿಕನು ಧರೆಗೆ ಚೂಡಾರತ್ನಾ ||"  [ ೨೦ ]


     [ ಜಾತಿ= ಗುಣ; ಘಾತಿಪ=ವಿರೋಧಿಸುವವ; ಗಮಕಿ= ಭೋಧಕ; ವಾಗ್ಮಿಕ= ವಾಕ್ಪಟು. ]



   ಬಲ್ಲಿದರುಳ್ಳೆಡೆ ವಿದ್ಯೆಗ |

  ಳೆಲ್ಲಂ ಪಲ್ಲವಿಸುತಿರ್ಕುವೆಂತೆನೆ ಪೇಳ್ವೆಂ |
  ಸಲ್ಲಲಿತ ಸೌಖ್ಯಲತೆಯುಂ |
  ಪಲ್ಲವಿಸುವ ತೆರದಿಂದಲೆ ಚೂಡಾರತ್ನಾ || [೨೧ ] 


     [ ಪಲ್ಲವಿಸು= ಚಿಗುರೊಡೆ, ಅರಳುವಿಕೆ; ಸಲ್ಲಲಿತ= ಮನೋಹರವಾದ,ಸುಂದರವಾದ; ಸೌಖ್ಯಲತೆ= ಆರೋಗ್ಯಸ್ಥಿತಿ ಯಲ್ಲಿರುವ ಬಳ್ಳಿ ] 



 ಅರಿವೆಡೆಯೊಳುರಿವನುರಿವಂ |

 ಅರಿಯದ ಠಾವಿಂಗೆ ಹೊಡೆದು ನೂಕುವರೆ ವಲಂ |
 ಕಿರುಗೂಸಾಗಿರೆ ಕೃಷ್ಣನ |
 ಕರುಗಾಯಿಸರೇ ಪಳ್ಳೆಯವರು ಚೂಡಾರತ್ನಾ ||  [೨೨ ]


     [ ಅರಿವ= ಶತೃವಿನ; ಅರಿಯದ= ತಿಳಿಯದ; ಠಾವು = ಬಿಡಾರ, ಜಾಗ; ವಲಂ =ದಿಟವಾಗಿ, ನಿಶ್ಚ್ಚಯವಾಗಿ; ಪಳ್ಳೆಯವರು=ಹಳ್ಳಿಗರು ]



 ಇಲ್ಲದ ವಿದ್ಯೆಯ ಗರ್ವಂ |

 ಬಲ್ಲಿದರೊಳು ಸೆಣಸಿ ಹಿಂಗಿ ಕಂದುವ ಭಂಗಂ |
 ಒಲ್ಲದ ಸತಿಯೊಡನಾಟಂ |
 ಕೊಲ್ಲದೆ ಮಾಣ್ದಪುದು ಚೂಡಾರತ್ನಾ ||[ ೨೩ ]


     [ ಹಿಂಗಿ= ಹಿಂದೆ ಸರಿ; ಕಂದುವ= ಬಾಡುವ; ಭಂಗಂ=ಸೂಲು, ಅಪಮಾನ, ಅಪಜಯ; ಮಾಣ್ದಪು= ನಿವಾರಿಸು, ತ್ಯಜಿಸು.]



 ಗೀತದ ಗೋಷ್ಟಿಯ ಮೇಳದ |

 ಮಾತಿನ ಸಂಭ್ರಮದ ಬಿನದೋಲಗವಬಲಾ |
 ವ್ರಾತದೊಳು ಸಂದಡಾತಂ | 
 ಆತನೆ ಬದಿ ವಿಷ್ಣು ಜಿಷ್ಣು ಚೂಡಾರತ್ನಾ ||  [ ೨೪ ]


      [ ಬಿನದ =ವಿನೋದ, ವಿಲಾಸ, ಉತ್ಸವ; ವ್ರಾತ= ಸಮೂಹ;  ಬದಿ =ಮಗ್ಗುಲು,ಸಮೀಪ;  ಜಿಷ್ಣು= ವಿಷ್ಣು. ]



  ಸಂಗೀತದ ಸಾಹಿತ್ಯದ| 

  ಅಂಗನೆಯರನಂಗ ಸುಖವನರಿಯದ  ಮನುಜಂಗೆ |
  ಭಂಗವು ಬೇರಿಲ್ಲ ಅವರವ |
  ರಂಗವನರಿಯದುದೆ  ಭಂಗ ಚೂಡಾರತ್ನಾ || [ ೨೫ ]


         [ಅನಂಗ= ಕಾಮ;   ಅಂಗವ= ಮನಸ್ಸು;ರೀತಿ. ]



   ಕಿರಿದಾದ ವಿದ್ಯೆಯಾಗಲಿ|

  ಮೆರೆವುದು ತನ್ನಲ್ಲಿ ಗುಣಗಳುಳ್ಳೊಡೆ ಮತ್ತಾ |
  ಒರತೆಯ ನೀರಾದೊಡೆ ತಾಂ | 
  ಬರನಂ ಪಿಂಗಿಸದೆ ನೋಡು ಚೂಡಾರತ್ನಾ ||  [ ೨೬ ]


  ಕೊಲ್ವುದು ಧರ್ಮವೆ ಪರವಧು |

  ಗೊಲ್ವುದದೇ ಸೊಬಗೆ ಪಾಪಹೇತುಗಳೊಂದಂ | 
  ಕಳ್ವುದು ನೀತಿಯನುಜರ | 
  ಗೆಲ್ವುದದೇಂ ಚದುರೆ ಕೇಳು ಚೂಡಾರತ್ನಾ  ||  [ ೨೭ ]


 ಚಂದನ ಹಿಮ ಪನ್ನೀರಿಂ |

 ಚಂದಿರ ಕಿರಣಂ ವಿಶೇಷ ಶೈತ್ಯಂ ಮತ್ತಾ |
 ಚಂದನ ಹಿಮ ಪನ್ನೀರ್ ಶಶಿ |
 ಯಿಂದಂ ಮೃದುವಚನ ಶೈತ್ಯ ಚೂಡಾರತ್ನಾ ||  [ ೨೮ ]


 ಆವುದು ಸಮಯೋಚಿತವದು |

 ಭಾವಂ ಬೆರಸಿರ್ದ ಹೃದಯದನುವರಿದಳವರಿ |
 ದಾವವ ನುಡಿವವನವನಂ |
 ದೇವರೆನಲ್ತಿರದೆ ನೋಡು ಚೂಡಾರತ್ನಾ || [ ೨೯ ]


   [ ಹೃದಯದನುವರಿದಳವರಿದಾವವ =ಹೃದಯದ ಒಳಗಿನ ತುಮುಲ {ಹೊಯ್ದಾಟ }ವನ್ನು ಯಾರು ಅರಿತು ]



 ಸಾರಾಸಾರ ವಿವೇಕ ವಿ | 

ಚಾರವನರಿಯದರ ಕೂಡೆ ಸುಜನರು ನುಡಿಯ |
ಲ್ಕಾರಯ್ಯದೆ ಹೊನ್ನಂಬಂ | 
ನೀರೊಳಗೆಚ್ಚಂತೆ ನೋಡು ಚೂಡಾರತ್ನಾ ||  [೩೦ ]


     [ ಆರಯ್ಯದೆ= ವಿಚಾರಿಸದೆ; ಎಚ್ಚಂತೆ= ಪ್ರಯೋಗಿಸಿದಂತೆ ]



ಓರಂತಿದಿರಿನ ಹೃದಯದ |

ಸಾರಾಸಾರತೆಯನರಿದು ನುಡಿವಂಗಿಳೆಯೊಳು |
ಕೂರದರಾರ್ ಮೆಚ್ಚದರಾರ್ |
ಆರಾಧಿಸದಿರ್ಪರಾರು ಚೂಡಾರತ್ನಾ || [ ೩೧ ]


     [ಓರು = ವಿಚಾರಿಸು, ಆಲೋಚಿಸು; ಕೂರದರು =ಮನಸ್ಸಿಗೆ ಹಿಡಿಸದವರು. ]



 ರಾಗರಸ ಮಿಗಿಲು ಸಭೆ ತಲೆ |

 ದೂಗಲು ತಾಂ ನುಡಿಯ ಬಲ್ಲೊಡದು ನುಡಿಯೆನಿಸೊಂ | 
 ದಾಗದಿರೆ ಸೈತು ಮಾಗಿಯ | 
 ಕೋಗಿಲೆಯಂತಿಹುದು ನೋಡು ಚೂಡಾರತ್ನಾ ||   [ ೩೨ ]


    [ ಸೈತು=ಒಪ್ಪಿ. ]



 ಆಡಿದ ಜಾಣ್ಣುಡಿಯಂ ಕೊಂ |

 ಡಾಡಿ ಕರಂ ಮೆಚ್ಚಬಲ್ಲ ಸಜ್ಜನರೊಳು ಮಾ |
 ತಾಡುವುದಲ್ಲದೆ ಪುರುಷಂ |
 ಮೂಡರೊಳಾಡುವರೆ ಕೇಳು ಚೂಡಾರತ್ನಾ ||  [ ೩೩ ] 


 ಹಡದೊಡವೆ ಹೋದ ಬಳಿಕಂ |

 ಉಡದೋದೆನು ಉಣ್ಣದೋದೆನಾರ್ಗೊಂದೆಡರಿಗೆ |
 ಕೊಡದೋದೆನೆಂದು ಮರುಗುವ |
 ಜಡಮತಿಗಳ ಕೇಡ ನೋಡು ಚೂಡಾರತ್ನಾ ||  [ ೩೪ ]


      ಆರ್ಗೊಂದಂ = ಯಾರಿಗೂ ಸ್ವಲ್ಪ; ಎಡರಿಗೆ= ಬಡವವರಿಗೆ. ]



 ಆರಾರುಂ ರಕ್ಷಿಪರಿಂ |

 ಆರಾರುಂ ಕಾಯ್ವ ಕೊಲ್ವರೆಂಬುದು ಪುಸಿ ಮುಂ |
 ನ್ನಾರಾಧಿಸಿ ಪಡೆದುದನಿ |
 ನ್ನಾರಾರುಂ ಕಳೆಯಬಹುದೆ ಚೂಡಾರತ್ನಾ || [ ೩೫ ]


ಕುಲವಾವುದು ಸುಚರಿತ್ರಂ |

ಚೆಲುವಾವುದು ಸಕಲ ಕಲೆಯನರಿವುದು ಯೋಗದ | 
ನೆಲೆ ಯಾವುದು ಕ್ಷಮೆ ಜೀವಕೆ | 
ಫಲವಾವುದು ಪರಹಿತಾರ್ಥ ಚೂಡಾರತ್ನಾ ||  [ ೩೬ ]


ಸತ್ಯದಲಿ ಸಹಜ ಧರ್ಮದ |

ಲುತ್ತ ವ್ಯವಸಾಯದಿಂದ ಲೇಸಿಂ ದಯದಿಂ |
ಪೆತ್ತ ಧನಂ ಗುರುಹಿರಿಯರಿ |
ಗಿತ್ತ ಧನಂ ತನ್ನ ಧನವು ಚೂಡಾರತ್ನಾ ||  [ ೩೭ ]


        [ ಲೇಸಿಂ = ತಕ್ಕುದಾದುದು.]



  ಆಗುಂಬುದಾಗಲುಡುವುದು |

  ಆಗಳೆ ಕರೆದೀವುದುಚಿತಮಾಗಳಿಗಾಗಂ |
  ಬೇಗ ಬೇಗೆಂಬ ಜವನೊಳ |
  ಗಾಗನು ಮುನ್ನರಿವ ಜಾಣ ಚೂಡಾರತ್ನಾ  ||   [ ೩೮ ]


         [ಜವನ = ಯಮನ ]



 ಎಲ್ಲಿ ಸುಶೀಲಂ ಸದ್ಗುಣ |

 ಮೆಲ್ಲಿ ದಯೆ ಧರ್ಮಮೆಸೆವ ಸತ್ಯಂ ನೆಲೆಗೊಂ |
 ಡಲ್ಲಿಯೆ ಆಯುಂ ಸಿರಿಯುಂ |
 ಸಲ್ಲೀಲೆಯೊಳಿಪ್ಪುವಲ್ತೆ ಚೂಡಾರತ್ನಾ  ||  [ ೩೯ ]


        [ ಎಸೆವ=ತಿಳಿಸುವ; ಆಯುಂ = ಆಯುಷ್ಯ. ]



ಸುಳಿಗಡಲೊಳಗುದಿಸಿದ ಸಿರಿ |

ಸುಳಿಸುಳಿದಾಡುವಳು ನಿಲ್ಲಳೆಲ್ಲಿಯುಮತ್ತಾ |
ಸುಳಿಯುಳ್ಳಲ್ಲಿಯೆ ಕೂಡದಿರೆ |
ಸುಳಿಯೊಳು ತನ್ನತ್ತ ಲಕ್ಷ್ಮಿ ಚೂಡಾರತ್ನಾ ||  [ ೪೦ ]


 ಉಂಬುದುಮುಡುವುದು ಮಿಕ್ಕುದ |

 ನಿಂಬಿಡುವುದು ಧರ್ಮದೆಡೆಯೊಳುತ್ತಮ ಪುರುಷಂ |
 ನಂಬು ಮುನಿಯಲ್ಕೆ ಪೋಗದು | 
 ಬೆಂಬಳಿಯಲಾತನೆ ಬಹುದು ಚೂಡಾರತ್ನಾ ||  [೪೧ ]


       [ ಬೆಂಬಳಿಯಲು= ಅನುಸರಿಸಲು, ಹಿಂಬಾಲಿಸಲು.]



 ಸಿರಿತನವೊಲಿದಲ್ಲಿಯೆ ಕರೆ | 

 ಕರೆದೀವುದು ಬಂಧುಜನಕಮಾಶ್ರಿತಜನಕಂ |
 ಕರೆದೀಯದಿರ್ದೆಯಾದೊಡೆ |
 ಸಿರಿ ಸಂಧ್ಯೆಯ ನೆರವಿಯಂತೆ ಚೂಡಾರತ್ನಾ ||   [ ೪೨ ]


           [ ನೆರವಿ =ಸಮೂಹ, ಗುಂಪು, ಕೂಟ. ]



 ತಾನುಂಬುದು ಪೆರರ್ಗೀವುದು |

 ಮಾನಿನಿಯನೊಲಿಸಿ ಸುಖದೊಳಿರ್ಪುದು ಮನುಜಂ | 
 ದೀನತೆಯಂ ಬಿಡು ಬಿಡು ಸಿರಿ | 
 ಮಾನವರಿಗೆ ನೆಲೆಯದಲ್ಲ ಚೂಡಾರತ್ನಾ ||   [ ೪೩ ]


  ತ್ಯಾಗಿಗೆ ಧನ ತೃಣ ಪರತರ |

  ಯೋಗಿಗೆ ತೃಣವೀ ಜಗತ್ತು ಕಲಿಗಂ ಸಮರೋ |
  ದ್ಯೋಗಂ ತೃಣ ಮಾತರಿಯದ |
  ಹಗೆಗೆ ತೃಣ ನೀತಿ ಶಾಸ್ತ್ರ ಚೂಡಾರತ್ನಾ  ||   [ ೪೪ ]


        [ ಕಲಿಗಂ = ಕಾದಾಳುವಿಗೆ, ಶೂರನಿಗೆ. ]



 ಸಿರಿಯೊಳು ದಾನಂ ವಿದ್ಯಾ |

 ಪರಿಣತಿಯೊಳ್ವಿನಯಮಧಿಕ ಪದದೊಳು ಪರಹಿತ |
 ಪುರುಷಂಗಿಂತಿವು ಸರ್ವಾ |
 ಭರಣಂಗಳ್ ಬೇರೆ ತೊಡವೆ ಚೂಡಾರತ್ನಾ ||  [ ೪೫ ]


        [ ತೊಡವೆ= ಅಲಂಕಾರ, ಲೇಪನ, ಉಡುಗೆ.]



  ಸುರತರುವದಾವುದೀವನ | 

  ಕರತಳಮರೇಂದ್ರವಾಸವಾವುದು ಪುಣ್ಯಾ |
  ತ್ಮರ ಸಂಗಮಮರನಾವಂ |
  ಪರಹಿತ ಚರಿತಂ ವಿವೇಕ ಚೂಡಾರತ್ನಾ ||  [೪೬ ]


 ತಕ್ಕುಚಿತಂಗಳ ಮಾಡದ |

 ಬಿಕ್ಕಿದರಿಗೆ ನೀರೆರೆಯದ ಪಸಿದರ್ಗನ್ನವ |
 ನಿಕ್ಕದ ಲೋಭಿಯ ಧನವಾ |
 ಮೆಕ್ಕೆಯ ಹಣ್ಣಂತೆ ನೋಡು ಚೂಡಾರತ್ನಾ ||  [ ೪೭ ]


       [ ಬಿಕ್ಕಿದ= ಬಿಕ್ಷುಕ;  ಮೆಕ್ಕೆಯ ಹಣ್ಣು= ಇಬ್ಬುಳು, ಚಿಬ್ಬುಳು, ಇಬ್ಬುಡುಲು{ಇದು ಮಗೆಕಾಯಿಅಥವಾ ಸೌತೆಕಾಯಿ ವರ್ಗಕ್ಕೆ ಸೇರಿದ ಒಂದು ಹಣ್ಣು, ಕರಾವಳಿ ಮತ್ತು ಮಲೆನಾಡಿನ ಕೆಲವು ಕಡೆ ಬೆಳೆಯುತ್ತಾರೆ. ]



 "ಕೊಟ್ಟರಿಯನಿದಿರ್ಗೆ ತಾನುಂ |

 ಡುಟ್ಟಲೀಯಂ ಧರ್ಮವರಿಯನವನೀ ಬುವಿಯೊಳ್ | 
ಪುಟ್ಟಿದೊಡೇಂ ಸತ್ತೊಡದೇಂ |
ಪುಟ್ಟದೆ ತಾಂ ಮಾಣ್ದೊಡೇನು ಚೂಡಾರತ್ನಾ ||"  [ ೪೮ ]


ತನಗುಪಭೋಗಿಸಲುಂ ಸ|

ಜ್ಜನರ್ಗೀಯಲುಮಿಲ್ಲದೋಡವೆಗೊಡೆಯಂ ಗಡ ಕಾಂ |
ಚನ ಗಿರಿಯು ತನ್ನ ಪಿತೃಗಳ |
ಧನವೆಂಬಾ ಮರುಳನಂತೆ ಚೂಡಾರತ್ನಾ  ||  [ ೪೯ ]


 ಕರೆಕರೆದು ಬಿಡಲು ಪಶುವು |

 ತೊರೆವುದು ಕೆಚ್ಚಲಲ್ಲಿ ಹಾಲು ಬಳಿಕದ ತಿಳಿದುಂ |
 ತೊರೆವುದು ಸಿರಿ ಮರೆಯದೆ ಕೊಡು | 
 ಕರೆವಾಕಳ ನೋಡಿ ನಂಬು ಚೂಡಾರತ್ನಾ  ||  [ ೫೦ ]


  ದೀನರು ದಯಹೀನರು ಗುಣ |

  ಹೀನರುಗಳು ಲಕ್ಷಸಂಖ್ಯೆಯಿದ್ದೇಂ ಬಂದೇಂ | 
 ದಾನಿ ಜಗದೊಳಗೆ ಸಂತತ |
 ಭಾನುವಿನಂತೊಬ್ಬನಿಹನು ಚೂಡಾರತ್ನಾ  ||  [ ೫೧ ]


     [ಸಂತತ= ಎಡೆಬಿಡದೆ, ನಿರಂತರ:  ಭಾನು= ಸೂರ್ಯ, ಒಡೆಯ, ಸ್ವಾಮಿ.]



 ಆರಿತ್ತು ಬಡವರಾದರು |

 ಆರೀಯೆ ಧನಿಕರಾಗಿ ಜಗದೊಳಗೆ ಬಾಳ್ದರು |
 ಊರುಂಬ ಕೆರೆಯುಮಡವಿಯ |
 ನೀರುಂ ಕಾಲಕ್ಕೆ ಸರಿಯೇ ಚೂಡಾರತ್ನಾ ||  [ ೫೨ ]


 ವಿನಯದೊಳಿತ್ತಾ ದಾನಂ |

 ಕನಕಾದ್ರಿಗೆ ತತ್ಸಮಾನ ಕನಲುತ ಮುನಿಯುತ |
 ಜಿನುಗುತ್ತಿತ್ತಾ ದಾನಂ | 
 ಮೊನೆಯಿಲ್ಲದ ಘಾಯದಂತೆ ಚೂಡಾರತ್ನಾ ||  [ ೫೩ ]


       [ ಕನಕಾದ್ರಿ= ಮೇರುಪರ್ವತ; ಹಿಮಾಲಯ;. ಕನಲು=ಕೋಪಗೊಳ್ಳು,ರೇಗು, ಸಿಡಿದೇಳು; ಜಿನುಗು= ಹಲಬು, ಒಸರುವುದು,ಸೋರುವುದು, ಗುನು ಗುಟ್ಟುವುದು ; ಮೊನೆ= ತುದಿ,ಹರಿತವಾದ, ಚೂಪಾದ]



 ಶ್ರೀಗೆ ನೆಲೆಯಾವುದಧಿಕೋ |

 ದ್ಯೋಗಂ ಧರ್ಮಕ್ಕೆ ನೆಲೆಯಾವುದು ಸತ್ಯಂ |
 ತ್ಯಾಗಕ್ಕೆ ನೆಲೆಯಾವುದು ದಯೆ |
 ಬೇಗದೊಳೀವುದು ವಿವೇಕ ಚೂಡಾರತ್ನಾ ||   [ ೫೪ ]


ಇರಿಯದ ಭಟನೀಯದ ನೃಪ | 

ಓಡದ ಹಯನೊಲಿಸದಬಲೆ ಓದದ ಪಾರ್ವಂ | 
ತೆರದೊಕ್ಕಲು ಬೆಳೆಯದ ಹೊಲ |
ನರಿವರೆ ಧರಣಿಯೊಳು ಚೂಡಾರತ್ನಾ  ||"   [ ೫೫ ]


      [ ಹಯ= ಕುದುರೆ; ಅಬಲೆ= ಸ್ತ್ರೀ ; ಪಾರ್ವ= ಬ್ರಾಹ್ಮಣ; ತೆರೆ= ಬಿಚ್ಚು, ಅರಳು, ಮುಸುಕು }



 ವಿತ್ತಾನುಂ ಸತ್ಪುರುಷ |

 ರ್ಗಿತೊಡೆ  ಫಲ ತಪ್ಪದಕ್ಕುದೆಂತೆನೆ ತೆಂಗಂ | 
 ಬಿತ್ತಿಯೆ ನೀರೆರೆಯಮೃತವ | 
 ಹೊತ್ತಿರದೇ ನೆತ್ತಿಯೊಳು  ಚೂಡಾರತ್ನಾ ||"   [ ೫೬ ]


ಕನಕಂ ಪುಣ್ಯದಿ ಸಾರ್ದೊಡೆ | 

ಘನಮುನಿ ಸಜ್ಜನರಿಗಿತ್ತು ಭೋಗಿಸೆ ಸಫಲಂ | 
ತನಗಿಲ್ಲ ದಾನಕಿಲ್ಲದ | 
ಮನುಜನ ಕನಸಿನಂತೆ ಚೂಡಾರತ್ನಾ ||  [ ೫೭ ]


     [ ಸಾರು =ಬಳಿ ಸೇರು; ಘನ= ಶ್ರೇಷ್ಟ ]



 ವಿತರಣೆಯಿಲ್ಲದೆ ತನ್ನಾ |

 ಶ್ರಿತರಂ ಪಾಲಿಸದ ವಿನಯಪರದಲ್ಲವಂ |
 ಸ್ತುತಿಸುವಡವನೇಂ ಕುಲದೇ |
 ವತೆಯೇ ಧಾರಿಣಿಗೆ ನೋಡು  ಚೂಡಾರತ್ನಾ  ||    [ ೫೮ ]


 ಆವಾವ ತೆರದ ಜೀವದ |

 ನೋವೇಲ್ಲಂ ತನ್ನ ನೋವದೆಂಬಾ ಮನುಜಗೆ | 
 ಆವುದು ಜಪವಾವುದು ತಪ |
 ವಾವುದು ದೇವಾರ್ಚನೆಗಳ್ ಚೂಡಾರತ್ನಾ ||  [ ೫೯ ]


 ಉಟ್ಟೊಡೆ ಮಾಸುಗು ಕಪ್ಪಡ |

 ತೊಟ್ಟೊಡೆ ತಾಂ ಸವೆವುದಖಿಳ ಹೇಮಾಭರಣಂ | 
 ನೆಟ್ಟನೆ ತನುವಳಿವುದು ಮೇಣ್ | 
 ಕೊಟ್ಟವನೊಡಲೊಡಮೆ ಕೆಡದು ಚೂಡಾರತ್ನಾ ||  [ ೬೦ ]


      [ ಕಪ್ಪಡ = ಉಡುಪು; ಒಡಮೆ= ಒಡವೆ.]



 ಕೊಲಲಾಗದು ಧರ್ಮಿಗಳಂ |

 ಗೆಲಲಾಗದು ನಂಬಿದವರ ಸತ್ಯಕೆ ಮಿಥ್ಯಾ|
 ಛಲ ಬೇಡ ಹಿರಿಯರೆಡೆಯೊಳು   | 
 ಬಲುಹಾಗದು ಬಂಧುಗಳೊಳು ಚೂಡಾರತ್ನಾ ||  [ ೬೧ ] 


    [ ಬಲುಹು= ಶಕ್ತಿ, ಸಾಮರ್ಥ್ಯ, ಒತ್ತಾಯ, ಬಲಾತ್ಕಾರ.]



ವಿನಯ ವಿರಹಿತನ ತಪಮುಂ | 

ಧನಮುಂ ಸತ್ಪಾತ್ರವರಿದು ಕೊಡದನ ಸಿರಿಯುಂ |
ಮನವರಿದೊಲಿಸದ ಸತಿಯುಂ |
ತೆನೆಯಾಗದ ಶಾಲಿಯಂತೆ ಚೂಡಾರತ್ನಾ ||   [ ೬೨ ]


     [ ಶಾಲಿ= ಭತ್ತ; ಧಾನ್ಯ]



 ಕರ್ಮವ ಕೆಡಿಪನೆ ಗುರು ಸ |

 ತ್ಕರ್ಮದಿ ನಡೆದವನೆ ಮಾರ್ಗಿ ಕಾಲೋಚಿತ ದಯ | 
 ಧರ್ಮವ ಪಡೆವನೆ ಹಿರಿಯಂ | 
 ಮರ್ಮವನರಿವನೇ ಸುಮಿತ್ರ ಚೂಡಾರತ್ನಾ ||"  [ ೬೩ ]


 ಆನೆ ಹಸಿದೆಳೆಯ ಮೊಳೆಯಂ |

 ತಾನಳುಪಿಂ ಮೇಯಲದರ ಹಸು ಪೋದಪುದೇ |
 ಹೀನರನಾಶ್ರಯಿಸಿದೊಡಪ | 
 ಮಾನದ ಕೇಡು ಅರ್ಥ ಹಾನಿ ಚೂಡಾರತ್ನಾ ||  [ ೬೪ ]


         [ ಮೊಳೆ= ಚಿಗುರು; ಅಳುಪು= ದುರಾಶೆ ಪಡು; ಹಸು= ಹಸಿವು. ]



  ಹಂದಿ ಹದಿನೈದು ನೀಡುಂ |

  ಒಂದುಹಯನಲ್ಲದೆಂದು ಲೋಭಿಯ ಧನವುಂ |
  ಸಂದಿರದು ದಾನ ಧರ್ಮಕೆ |
  ವಿಂಧ್ಯದ ಬೊಬ್ಬುಲಿಯ ತೆರದಿ ಚೂಡಾರತ್ನಾ ||   [ ೬೫ ]


         [ ಬೊಬ್ಬುಲಿ= ಹೆಬ್ಬುಲಿ ]



  ತುಚ್ಛಗೆ ನೀಚಗೆ ಧನವತಿ | 

 ಹೆಚ್ಚಿದೊಡೇನಾತ್ಮ ಭೋಗ ಪರಹಿತಕಿಲ್ಲಂ |
 ಬಚ್ಚಲ ನೀರ್ ಕದಡಿದೊಡೇಂ | 
 ನಿಚ್ಚಳದಿಂ ತಿಳಿದೊಡೇನು ಚೂಡಾರತ್ನಾ ||  [ ೬೬ ]


  ಅಸಮಯವಿದು ಸಮಯವಿದೆಂ |

  ಬೆಸಕವು ದಾನಿಗಳಿಗುಂಟೆ ಕರ್ಣಂ ರಣದೊಳು | 
  ಬಸವಳಿವುತಿರ್ದೀಯನೆ |
  ಬಿಸರುಹನೇತ್ರಂಗಂದು ಚೂಡಾರತ್ನಾ ||   [ ೬೭ ]


    [ ಎಸಕ= ಇರುವಿಕೆ; ಬಸವಳಿಯು= ಆಯಾಸಗೊಳ್ಳು; ಬಿಸರುಹ ನೇತ್ರ= ಸೂರ್ಯ. ]



  ಪುಲಿದೊವಲುಂ ಫಣಿಶಿರದೊಳ್ |

  ನೆಲಸಿದ ಮಾಣಿಕ್ಯವಧಿಕ ಲೋಭಿಯ ಧನವುಂ |
  ತ್ವರಿತಗತಿಯಿಂದ ಬಾರವು | 
  ಕೊಲಲಾರ್ಪಂಗಲ್ಲದಿಲ್ಲ  ಚೂಡಾರತ್ನಾ ||   [ ೬೮ ]


     [ ಪುಲಿ= ಹುಲಿ; ತೊವಲು= ತೊಗಲು, ಚರ್ಮ ]



 ಸಿರಿ- ಬಡತನ ಸುಖ- ದು:ಖಂ |

 ಪರಿಣಾಮಂ ಶೋಕ- ಮೋಹ ಜನನಂ-ಮರಣಂ |
 ಕರುಣವು ಮನ್ನಣೆಯೆಂಬಿವು | 
 ಸರಿಸರಿ ನರರಿಂಗೆ ಸುಕವಿ ಚೂಡಾರತ್ನಾ ||   [ ೬೯ ]


 ದುರಿತಾತ್ಮರ ಕಿವಿಗೆ ಮಹಾ |

 ಪುರುಷರ ನುಡಿ ವಿಷಮವಾಗಿ ತೋರ್ಕುಂ ನಿರ್ಭಾ |
 ಗ್ಯರ ಕಣ್ಗೆ ನಿಧಿಯೆ ತಾ ಬಿಡ | 
 ದುರಿಯಾಗಿಯೆ ತೋರುವಂತೆ ಚೂಡಾರತ್ನಾ ||   [ ೭೦ ]




ತೇಜಸ್ವಿಯ ಧರ್ಮಜ್ಞನ | 

ರಾಜಸಮೀಪಸ್ಥ ನಪ್ಪನಂ ದುರ್ಜನನಂ |
ಓಜೆಯೊಳುಪಾಯ ಮಳ್ಳರ |
ನೀಜಗದೊಳು ಸೆಣಸಬೇಡ ಚೂಡಾರತ್ನಾ ||   [ ೭೧ ]


     [ ಓಜೆ= ಔಚಿತ್ಯ, ರಾಶಿ, ಜಂಗುಳಿ, ಗುಂಪು; ಉಳ್ಳರ= ಉಳ್ಳವರ ]



ಆರಾರುಂ ರಕ್ಷಿಪರಿ |

ನ್ನಾರಾರುಂ ಕಾಯ್ದುಕೊಲ್ವರೆಂಬುದು ಪುಸಿ ಮು | 
ನ್ನಾರಾಧಿಸಿ ಪಡೆದುದನಿ |
ನ್ನಾರಾರುಂ ಕಳೆಯಬಹುದೆ ಚೂಡಾರತ್ನಾ ||   [೭೨ ]


        [ ಪುಸಿ= ಹುಸಿ, ಸುಳ್ಳು. ]



ಅತಿವ್ಯಸನದಿಂ ದಶಶಿರ |

ನತಿ ಚಾಗದಿನತನೂಜನತಿ ಲೋಭತೆಯಿಂ | 
ಧೃತರಾಷ್ಟ್ರಸೂನು ಕೆಟ್ಟರು | 
ಅತಿರೇಕದಿಂ ಕೆಡದರಾರು ಚೂಡಾರತ್ನಾ  ||   [ ೭೩ ]


      [ ಚಾಗ= ತ್ಯಾಗ; ಇನತನೂಜ= ಸೂರ್ಯಪುತ್ರ. ಕರ್ಣ.]



ನಡುಗಡಲ ಜಲವ ಹೊಕ್ಕರೆ | 

ಮಡನೆನೆಯದು ತನ್ನ ಮುನ್ನ ಮಾಡಿದ ಸುಕೃತಂ |
ಎಡೆಯಲ್ಲರಸಿದರುಂಟೇ | 
ಮೃಡ ಬರೆದುದ ತೊರೆಯಬಹುದೆ ಚೂಡಾರತ್ನಾ ||   [ ೭೪ ]


     [ ಮಡ= ಹಿಮ್ಮಡಿ;ಎಡೆ= ಮಧ್ಯ, ಮೂಲಸ್ಥಾನ   ಮೃಡ= ಈಶ್ವರ; ತೊರೆ= ಬಿಟ್ಟುಬಿಡು, ಅಳಿಸಿಹಾಕು. ]



ಕನಕದ ಸಿಂಹಾಸನದೊಳು |

ಶುನಕನ ಕುಳ್ಳಿರಿಸಿ ಸೇಸೆದಳಿಯಲು ಮತ್ತಂ |
ತದು ಕೆರಳಿ ಬಗುಳ್ವುದಲ್ಲದೆ |
ಘನತೆಯದಕುಂಟೆ ವಿವೇಕ ಚೂಡಾರತ್ನಾ ||  [ ೭೫ ]


     [ ಶುನಕ= ನಾಯಿ; ಸೇಸೆ= ಮಂಗಲಾಕ್ಷತೆ ] 



  ಹಿಂದಂ ನೆನೆದವನೇ ಸುಖಿ |

  ಮುಂದಂ ನೆನೆದವನೆ ದು:ಖಿಯಿಂತೆರಡೊಳಂ |
 ಬಂದುದನನುಭವಿಪನೇ ಬುಧ |
 ನೆಂದುಂ ಸಾಯದನೆ ದೇವ ಚೂಡಾರತ್ನಾ ||  [ ೭೬ ]


  [ ಬುಧ= ವಿದ್ವಾಂಸ, ಪಂಡಿತ, ಜ್ಞಾನಿ.]



 ಕಲ್ಪಿತವ ಮೀರಬಾರದು| 

 ತಪ್ಪದು ಕೇಳ್ ನೆಲನ ಬಿಗಿದು ಹೊಕ್ಕೊಡೆ ಮತ್ತಾ | 
 ಬಪ್ಪದು ತಪ್ಪದು ಹಣೆಯಲಿ |
 ತಪ್ಪಂಬರೆದನೆ ವಿಧಾತೃ ಚೂಡಾರತ್ನಾ ||  [ ೭೭ ]


         [ ಕಲ್ಪಿತ = ವ್ಯವಸ್ಥೆಗೊಳಿಸಲ್ಪಟ್ಟ, ಕೃತ್ರಿಮ, ವಿಚಾರ, ಭಾವನೆ; ನೆಲ= ಭೂಮಿ, ತಳ ನಾಡು; ವಿಧಾತೃ= ಬ್ರಹ್ಮ. ]



ಅಳಲುಂ ನೋವುಂ ಕೇಡುಂ |

ಘಳಿಲನೆ ತನಗಡಸಿದಲ್ಲಿ ಅರಿವಿನ ಮೊರೆವೊ |
ಕ್ಕುಳಿದನೆ ಚದುರಂ ಮತ್ತಾ | 
ತಿಳಿವಿನ್ನಾವೆಡೆಗೆ ಸುಕವಿ ಚೂಡಾರತ್ನಾ ||   [ ೭೮ ]


         [ ಘಳಿಲ= ಬೇಗನೆ, ತೀವ್ರವಾಗಿ, ಸಪ್ಪಳಮಾಡುತ್ತಾ; ಅಡಸು= ಉಂಟಾಗು, ಅಂಟಿಕೊಳ್ಳು; ಆವ= ಯಾವ, ಏನು; ಎಡೆ= ಆಸ್ಪದ, ಜಾಗ, ಕೀಳು,ಮೂಲ ಸ್ಥಾನ, ಸುಕವಿ= ವರಕವಿ, ಒಳ್ಳೆಯ ಕವಿ. ]



 ಚಿಂತಿಪನೆ ನರಕಿ ಸಲೆ ನಿ|

 ಶ್ಚಿಂತನೆ ಸುಖಿ ಕೋಪಮುಳ್ಳೊಡಾತನೆ ಪಾಪಿಯು | 
 ಸಂತೋಷಿಯೆ ಸಿರಿವಂತಂ |
 ಭ್ರಾಂತನಳಿದನೆ ಪರಮಯೋಗಿ ಚೂಡಾರ‍ತ್ನಾ ||  [ ೭೯ ]


 [ಸಲೆ=ಚೆನ್ನಾಗಿ,ಸರಿಯಾಗಿ, ಅತಿಶಯವಾಗಿ;ಅಳಿ=ನಾಶಹೊಂದು,ಸಾಯು;ಭ್ರಾಂತ= ಉನ್ಮತ್ತ,ಮಂಕ, ಮರುಳ.]



ಯಮನಾರ ನೆಂಟ ತನ್ನಯ |

ಸಮಸುತನೆಂದೆನಿಪ ಧರ್ಮರಾಯನವೊಯ್ದಂ |
ಭ್ರಮೆ ಬೇಡ ಬೇಡ ಮಾನವ |
ನಿಮಿಷದಿ ಧರ್ಮವನೆ ಮಾಡು   ಚೂಡಾರತ್ನಾ |  [ ೮೦ ]


 ಜಾತಸ್ಯ ಮರಣ ತಪ್ಪದು|

 ಯೇತಕೆ ಚಿಂತಿಸುವೆ ಬರಿದೆ ಹಣೆಯಲಿ ಬರೆದಿರೆ| 
 ಕಾತರಿಸಬೇಡ ಮಾನವ |
 ಭೀತಿಯ ಬಿಡು ಹರಣದೆಡೆಗೆ ಚೂಡಾರತ್ನಾ ||  [೮೧]


        [ಹರಣ= ಪ್ರಾಣ]


ಸಾವಿನ ಭಾದೆಗೆ ಸಿಲುಕದ|
ನಾವಂ ದಿಕ್ಪಾಲರನಾಳುಗೆಲಸಂಭೊಗಿಸಿದ |
ರಾವಣನನೊಯ್ದನೆನೆ ಮನು|
ಜಾವಳಿಗಂಜುವನೆ ಯಮನು ಚೂಡಾರತ್ನಾ ||    [೮೨ ]

        [ಕೆಲಸಂಭೊಗಿಸು=  ಕೆಲಸದ ಆಳುಗಳನ್ನಾಗಿಸುವುದು; ಮನುಜಾವಳಿ =ಮನುಷ್ಯರ ಗುಂಪು ]
 ಆಳುಂ ಪೆಂಡಿರು ಸುತರುಂ| 
 ಮೇಳದವರ್ ನೆಂಟರಿಷ್ಠರೊಡಹುಟ್ಟಿದರುಂ |
 ಕಾಲಾಳ್ಗಳು ರಥವಶ್ವಂ| 
 ಕೇಳಳಿಪವೆ ಜವನ ಮುಳಿಸ ಚೂಡಾರತ್ನಾ ||    [ ೮೩ ]


         [ಮೇಳದವರು= ವಾದ್ಯಗಾರರು; ಅಳಿಪವೆ= ಅಳಿಸುವವೇ; ಮುಳಿಸ= ಮುನಿಸ, ಕೋಪವನ್ನು. ]



ಭೂಷಣವಾವುದು ಘನ ಸಂ |

ತೋಷವತಿ ಸ್ನೇಹವಾವುದರಿದರೊಳಿಹ ಸಂ|
ಭಾಷಣ ಮತಿಯಾವುದು ಪರ |
ದೂಷಣವುಳಿದುದು ವಿವೇಕ ಚೂಡಾರತ್ನಾ ||    [೮೪ ]


         [ ಅರಿದರು= ಅರಿತವರು, ಬಲ್ಲವರು, ತಿಳಿದವರು ]



 ಚೂಣಿಯೊಳೀಡಾಡಿದೊಡಂ |

 ಕೋಣೆಯೊಳಡಗಿರ್ದೊಡಂ ಲಲಾಟ ಲಿಖಿತಂ | 
 ಮಾಣದಿದನರಿತು ಜಾಣಂ |
 ಪೂಣಿಸಿ ಕಾದುವುದು ರಣದಿ ಚೂಡಾರತ್ನಾ ||   [ ೮೫ ]


         [ ಚೂಣಿ=ಸೈನ್ಯದ ಮುಂಭಾಗ; ಲಲಾಟ =ಹಣೆ ; ಮಾಣ್= ಬಿಡು; ಪೂಣಿಸಿ=ಭಾಷೆ ಕೊಟ್ಟು.]



ಮೋಹಮದಾವುದು ಧನ ಸ |

ಮ್ಮೋಹಂ ಭ್ರಮೆಯಂಧಕಾರಾವಾವುದು ಯುವತೀ | 
ಮೋಹಂ ಗತಿಮತಿಯಾವುದು |
ಸೋಹಂ ಭಾವಂ ವಿವೇಕ ಚೂಡಾರತ್ನಾ ||  [೮೬]


      [ಸೋಹಂ ಭಾವ= ನಾನೇ ದೇವರು ಎಂಬ ತಿಳುವಳಿಕೆ]



ಪಳಿವಾವುದು ಕುಲಭಂಗಂ |

ತಿಳಿವಾವುದು ಸಮತೆ ಬಂಧವಾವುದು ಮೋಹಂ |
ಕಳವಾವುದನೃತವೆಡರಿಂ |
ದುಳಿವಾವುದು ಧೃತಿ ವಿವೇಕ ಚೂಡಾರತ್ನಾ ||  [ ೮೭ ]


      [ ಪಳಿವು= ಹೀನೈಸು,ತಿರಸ್ಕರಿಸು; ಕಳವು=ನೀಚತ್ವ; ಅನೃತ= ಸುಳ್ಳು; ಎಡರು= ಪ್ರತಿಬಂಧ,ಅಡ್ಡಿ, ಮುಗ್ಗರಿಸುವುವಿಕೆ.]



 ಒತ್ತುವ ಕೆರ ಹೊಲ್ಲದ ಸತಿ| 

 ಮುತ್ತಿಗೆಗೊಳಗಪ್ಪ ದುರ್ಗಮಧಮನ ಕೆಳೆಯುಂ | 
 ಸತ್ತವರಿಂದತಿಕಷ್ಟದ |
 ಹತ್ತಿರೆ ಸಾರುವವನೆಗ್ಗ ಚೂಡಾರತ್ನಾ ||  [ ೮೮ ]


         [ ಕೆರ= ಪಾದ ರಕ್ಷೆ ,ಎಕ್ಕಡ; ಮುತ್ತಿಗೆ= ಆಕ್ರಮಣ, ಮೈಮೇಲೆ ಏರುವಿಕೆ; ದುರ್ಗಮ=ಕಷ್ಟ ಸಾದ್ಯವಾದ;  ಸಾರು= ಬಳಿ ಹೋಗು; ಎಗ್ಗ= ಹೆಡ್ಡ,ದಡ್ಡ,ಮೂರ್ಖ.]



ತಾಗಿ ತಲೆಯೊಡೆದ ಬಳಿಕಂ |

ಬಾಗುವುದತಿ  ಬುಧ್ಧಿಯಲ್ಲವದು ಕಾರಣದಿಂ | 
ತಾಗದ ವೊಡೆಯದ ಮುನ್ನವ |
ನಾಗತವನರಿತವನೆ ಜಾಣ ಚೂಡಾರತ್ನಾ ||  [ ೮೯ ]


        [ ಆಗತ= ಪ್ರಾಪ್ತವಾದ ]



ಶ್ರೀಯಿಲ್ಲದವನ ರೂಪುಂ |

ತಾಯಿಲ್ಲದ ಸುತನು ಸತಿಯುಮಿಲ್ಲದ ನರನುಂ | 
ಪ್ರಾಯದೊಳಿಲ್ಲದ ಪದಪುಂ | 
ಮಾಯಾವಿಯ ತೆರನದಲ್ತೆ ಚೂಡಾರತ್ನಾ ||   [ ೯೦ ]
      [ ಶ್ರೀ= ಸಂಪತ್ತು; ಪದಪು= ಪ್ರೀತಿ ]


 ಕಣ್ಣೊಳಗಣ ಕರಿಗುಡ್ಡೆಯು |

 ಸಣ್ಣಹುದೆಂದೆನಲು ಬೇಡ ಜಗಮಂ ಕಾಂಬುದು |
 ತನ್ನೊಳು ವಿವೇಕಮುಳ್ಳೊಡೆ | 
 ಬಿನ್ನಣಮಂ ನೆರೆಯಲೇಕೆ ಚೂಡಾರತ್ನಾ ||  [ ೯೧ ]


     [ ಬಿನ್ನಣ= ವಿದ್ವತ್, ಪಾಂಡಿತ್ಯ; ನೆರೆ= ಉಕ್ಕುವಿಕೆ,ಸಂಭ್ರಮ.]



 ಮಸಿಬಿಳಿದಹುದೇ ತೊಳೆದೊಡೆ |

 ವಿಷ ಬಿಡುವುದೆ ಹಾವಿಗೆಷ್ಟು ಹಾಲೂಡಿದೊಡಂ |
 ವಸುದೆಯೊಳು ನಾಯ ಬಾಲಂ | 
 ಸಸಿನಹುದೇ ಕಟ್ಟಿಬಿಡಲು ಚೂಡಾರತ್ನಾ || [ ೯೨ ]
      [ ಸಸಿನ= ನೇರ ]
  ಆರುಂ ದುರ್ಜನಕುಪ | 
  ಕಾರಂ ಮಾಡಿದೊಡೆ ಸುಣ್ಣಕಲ್ಗಳ ಬಿಸಿಯ ನಿ |
  ವಾರಿಪೆನೆಂದದರೊಳು ತ |
  ಣ್ಣೀರಂ ಪೊಯ್ದಂತೆ ಸುಗುಣ ಚೂಡಾರತ್ನಾ ||  [ ೯೩ ]


 ಆರವೆಯಿಲ್ಲದ ಕೆರೆಯಂ |

 ನೀರಿಲ್ಲದ ಭಾವಿಯರ್ಕನಿಲ್ಲದ ಪಗಲಂ |
 ಸಾರ ಕಲೆಯಿಲ್ಲದವರಂ |
 ಸಾರದಿರು ಸೌಖ್ಯವಿಲ್ಲವು ಚೂಡಾರತ್ನಾ ||   [ ೯೪ ]


     [ ಆರವೆ= ತೋಟ, ಅರ್ಕ= ಸೂರ್ಯ,ಪಗಲ್= ಹಗಲು ಸಾರ= ಶ್ರೇಷ್ಠ, ಕಲೆ= ಚಾತುರ್ಯ, ಸಾರದಿರು= ನಿಜಾಂಶ ಅರುಹದಿರು ]

ಹಲ್ಲು ವಿಷಂ ಫಣಿಪತಿಗಂ | 
ಎಲ್ಲ ವಿಷಂ ದುರ್ಜನಂಗದೆಂತೆನೆ ಪೇಳ್ವೆಂ | 
ಹಲ್ಲಿಂ ಹದುರಿಂ ಸೊಲ್ಲಿಂ 
ಕೊಲ್ಲದೆಮಾಣ್ದಪನೆ ಸುಜನ ಚೂಡಾರತ್ನಾ ||  [ ೯೫ ]


         [ ಫಣಿಪತಿ= ಮಹಾಶೇಷ, ಸರ್ಪಗಳ ರಾಜ; ಹದುರು= ರೀತಿ,ಪದ್ದತಿ,ಅಣಕದ ಮಾತು, ವ್ಯಂಗ್ಯ ನುಡಿ; ಸೊಲ್ಲು= ಮಾತು, ನುಡಿ; ಮಾಣ್= ಬಿಡು, ತ್ಯಜಿಸು, ನಿವಾರಿಸು. ]



 ಆರವೆಯ ನೆಳಲು ಪಳ್ಳದ |

 ನೀರುಂ ಬೆಳದಿಂಗಳುಂ ಪಥಾಶ್ರಮದೆಲರುಂ |
 ನಾರಿಯರು ಧರಣಿ ಧನವು ವಿ | 
 ಚಾರಿಸೆಯೆಲ್ಲರೊಳು ಸಮವು ಚೂಡಾರತ್ನಾ ||   [ ೯೬ ]


          [ ಪಥಾಶ್ರಮ=ದಾರಿ ತೋರುವ ಗುರುಗಳ ನೆಲೆ, ಮುನಿಗಳ ಆಶ್ರಮ; ಎಲರು= ಗಾಳಿ,ವಾಯು,ಪವನ,ಉಸಿರು. ]



 ಸಲಿಲದಿ ವನರುಹಮಿರಲದ |

 ನಲರಿಸುವಂ ದಿನಪ ತನ್ನ ನಿಜಕಿರಣದಿ | 
 ಜಲ ತಪ್ಪಿದರೊಣಗಿಸುವಂ |
 ನೆಲೆಗೆಟ್ಟಗಿರ್ಷ್ಟರುಂಟೆ ಚೂಡಾರತ್ನಾ || [ ೯೭ ]


     { ಸಲಿಲ= ನೀರು; ವನರುಹ= ತಾವರೆ, ಕಮಲ; ಇರಲ್= ಬದುಕು; ಅಲರು= ವಿಕಾಸಗೊಳ್ಳು , ಅರಳು;}



 ರಕ್ಷಿಪನೆ ತಂದೆ ಹಸಿದರೆ |

 ಕುಕ್ಷಿಯ ತುಂಬುವಳೆ ತಾಯಿ ಕಡು ದುರ್ಜನರಂ |
 ಶಿಕ್ಷಿಪನೆ ನೃಪತಿ ಪುರುಷನ | 
 ಪಕ್ಷದೊಪ್ಪವಳೆ ಸುದತಿ ಚೂಡಾರತ್ನಾ ||   [ ೯೮ ]


       [ ಕುಕ್ಷಿ= ಹೊಟ್ಟೆ, ಉದರ; ಸುದತಿ= ಸುಂದರಿ, ಚೆಲುವೆ. ]



ವಾಣಿಜ್ಯವನತಿ ಕೃಷಿಯಂ | 

ಪ್ರಾಣವನೊಪ್ಪಿಸುವ ಸೇವೆಯಂ ಯಾತನೆಯಂ | 
ಮಾಣದೆ ಮಾಡಿಸುತಿಪ್ಪುದು |
 ಗೇಣುದ್ದದ ಹೊಟ್ಟೆಯು ಸಲೆ ಚೂಡಾರತ್ನಾ  ||  [ ೯೯ ]


        [ ಮಾಣ್= ತ್ಯಜಿಸು,ನಿವಾರಿಸು; ಸಲೆ= ಚೆನ್ನಾಗಿ,ಅತಿಷಯವಾಗಿ,ಸರಿಯಾಗಿ. ]



 ಮಜ್ಜಿಗೆಯಿಲ್ಲದವೂಟಂ | 

 ಸಜ್ಜನ ಸತ್ಪಾತ್ರವರಿದು ಕೊಡದನ ದಾನಂ |
 ದುರ್ಜನರೊಡನೆ ಸಮೇಳಂ | 
 ಹೆಜ್ಜೆಗೆ ಹರಳೊತ್ತಿದಂತೆ ಚೂಡಾರತ್ನಾ || [ ೧೦೦]


       [ ಸಮೇಳ= ಕೂಡುವಿಕೆ, ಕೂಟ ]



 ಲಲನೆಯರು ಬಂದರೆಂದರೆ |

 ಕೆಲಬಲನಂ ನೋಡಿ ಬೇಗ ಕರೆಸುವರವರಂ | 
 ಸುಲಭವೆನಿಪ್ಪ ಬುಧರಂ |
 ಸಲೆ ನುಡಿಸರು ಖೂಳ ಜನರು ಚೂಡಾರತ್ನಾ ||  [ ೧೦೧ ]


       [  ಕೆಲಬಲ= ಎಡ ಬಲ ] 



 ಭೂತಿಯೊಳು ರಸವನೊಪ್ಪುವ | 

 ಕೇತಕಿಯೊಳು ಫಲವನೋತ ಸತಿಯೊಳು ರೂಪಂ |
 ಗೀತದೊಳು ಮಾತನರಸುವ | 
 ದೇತರ ಸಾಹಿತ್ಯ ಸುಜನ ಚೂಡಾರತ್ನಾ ||   [ ೧೦೨ ]


     [ ಭೂತಿ= ಅಭ್ಯುದಯ, ಯೇಳಿಗೆ,ಕೀರ್ತಿ,ಅಚ್ಚುಗಟ್ಟು; ಒಪ್ಪು= ಸಮ್ಮತಿಸು, ಹೋಲಿಸು; ಕೇತಕಿ= ಕೇದಗೆ; ಓತ= ಪ್ರೀತಿಸು. ]



 ಭಾವಿಸೆ ಚಂದ್ರಾನಲನಿಂ | 

 ಬೇವುದರಿಂ ಪ್ರಿಯರ ಸಂಗದಿಂದಗಲ್ವುದರಿಂ |
 ಭಾವಕಿ ವಿಯೋಗದಿಂದಂ| 
 ಸಾವು ಕರಸೌಖ್ಯ ಸುಕವಿ ಚೂಡಾರತ್ನಾ ||  [ ೧೦೩ ] 


         [ ಚಂದ್ರಾನಲ= ಕಾಳ್ಗಿಚ್ಚು;ಅನಲ= ಬೆಂಕಿ; ಭಾವಕಿ= ಸುಂದರಿ; ಕರ= ಹೆಚ್ಚಾಗಿ,ಚೆನ್ನಾಗಿ, ಸರಿಯಾಗಿ, ಪೂರಾ. ]



 ಕಾಗೆ ಮೊದಲಾಗಿ ಬಂಧುವ | 

 ನೇಗಯ್ಸಿಯುಂ ಕರೆದೊಡಲ್ಲದೀವುದು ಗುಟುಕಂ | 
 ಶ್ರೀಗಧಿಕನೊಬ್ಬನುಂಬುದು |
 ಮಾಗದು ಧರಿತ್ರಿಯಲಿ ಪೇಳ್ ಚೂಡಾರತ್ನಾ ||   [ ೧೦೪ ]


          [ ಏಗಯ್ಸು= ಯಾವಾಗಲೂ; ಕರೆದೊಡಲ್ಲದೆ=ಕರೆಯುವುದಲ್ಲದೆ; ಶ್ರೀ= ಸಂಪತ್ತು; ಅಧಿಪ= ಒಡೆಯ; ಆಗದು= ಸಲ್ಲದು ]



 ಅರಗಿಳಿಯಿಲ್ಲದ ವನಮುಂ |

 ಗುರುವಿಲ್ಲದ ಮಥವು ಹಿರಿಯರಿಲ್ಲದ ಮನೆಯುಂ |
 ಗರುವಿಕೆಯಿಲ್ಲದ ಸತಿಯುಂ | 
 ವರವಿಲ್ಲದ ದೇವರೇಕೆ ಚೂಡಾರತ್ನಾ ||   [  ೧೦೫ ]


       [ ಗರುವ=  ಯೋಗ್ಯತೆ, ಹೆಮ್ಮೆ ]



 ಕೂಟದಲಿ ಕಪಟ ಹೊಲ್ಲಂ |

 ಊಟದೊಳೆರಡಾಗಿ ಬಡಿಸುತಿಪ್ಪುದು ಹೊಲ್ಲಂ | 
 ನಾಟಿಯುದಯದಲಿ ಪೊಲ್ಲಂ |
 ತೋಟಿಯು ಕನಸಿನಲಿ ಹೊಲ್ಲ ಚೂಡಾರತ್ನಾ ||  [೧೦೬ ]


        [ಕೂಟ= ಸಮೂಹ; ಹೊಲ್ಲ=ಅಯೋಗ್ಯವಾದುದು, ತಕ್ಕುದಲ್ಲವಾದುದು; ಪೊಲ್ಲ= ಸಲ್ಲ, ಕೆಟ್ಟ, ದುಷ್ಟ ; ತೋಟಿ=ಕಾದಾಟ, ಜಗಳ, ಕಲಹ ]



   

ಬೇಕಾದ ದಾನವೊಂದೇ |
ಲೋಕದಲುಂಟನ್ನ ದಾನವದನು ಪಿಡಿಯಲು |
ನೂಕಲು ಬಪ್ಪುದು ಯಮನಂ
ನಾಕದಲಿರಪ್ಪುದಲ್ತೆ ಚೂಡಾರತ್ನಾ  ||   [ ೧೦೭ ]


     [ ಪಿಡಿಯಲು = ಹಿಡಿಯಲು,ಅನುಸರಿಸಲು ;   ನಾಕ=ಸ್ವರ್ಗ ]



ನಾರಿ ಮನೆ ಕಳ್ಳಿಯಾದೊಡೆ |

ಕೇರಿಯ ತಳವಾರ ಚೋರನಾದೊಡೆ ಮತ್ತಾ |
ಭಾರಿಕ ಕೊಂಡೆಯನಾದೊಡೆ |
ವೂರೇಳಿಗೆಯಾಗದಿಹುದು ಚೂಡಾರತ್ನಾ  [  ೧೦೮ ]


   [ ಭಾರಿಕ= ಗುಂಪು ; ಕೊಂಡೆಯ =ಚಾಡಿಗಾರ, ನಿಂದಕ ,ದುಷ್ಟ ,ನೀಚ . ] 



ಪರಹಿತವನೆಸಗಿ ಮುನ್ನಿನ |

ದೊರೆಗಳು ಶಿಖಿ ಖೇಚರೇಂದ್ರರೇರರೆ ಭರದೊಳ್ |
ಸುರಪನ ಸಿರಿಗದ್ದುಗೆಯಂ |
ಪರಹಿತಮಂ ಮಾಡು ಮಾಡುಚೂಡಾರತ್ನಾ  [ ೧೦೯ ]


   [ ಖೇಚರರು=ಗಗನ ಗಾಮಿಯರು , ಗಂಧರ್ವರು  ದೇವತಾ ಸ್ಥ್ರೀಯರು . ]



ತಂಬುಲವಿಲ್ಲದ ಮೊಗಮುಂ |

ನಂಬುಗೆಯಿಲ್ಲದನ ಹರದು ದೋಷಿಯ ತಪಮುಂ |
ಇಂಬರಯದವಳೊಳಾಟಂ |
ಕುಂಭಿನಿಗದು ಹಾಸ್ಯ ಸುಕವಿ ಚೂಡಾರತ್ನಾ ||  [ ೧೧೦ ]


  [ ತಂಬುಲ=ತಾಂಬೂಲ ;ಹರದು=ವ್ಯಾಪಾರ; ಇಂಬರಿಯು= ಇಚ್ಛೆಯನಿ ತಿಳಿ; ಕುಂಭಿನಿ= ಲೋಕ. ]



 ದೀನನ ದೊರೆತನದಿಂದಂ |

 ದಾನಿಯ ಬಡತನವೆ ಲೇಸದೆಂತೆನೆ ಶರನಿಧಿ |
 ಪಾನೀಯಕ್ಕೆ ಯೋಗ್ಯವೆ ಸ |
 ನ್ಮಾನಂ ಚಿಕ್ಕೊರತೆ ಲೇಸು ಚೂಡಾರತ್ನಾ ||     [ ೧೧೧ ]


 [ ಶರನಿಧಿ=ಸಮುದ್ರ, ಸಾಗರ, ನೀರಿನ ಒಸರು, ಬತ್ತಳಿಕೆ ]



ಸುತರಿಲ್ಲದ ಧನ ಶೂನ್ಯಂ |

ಅತಿ ಪ್ರಿಯದ ಬಂಧುವಿಲ್ಲದ ಪುರ ಶೂನ್ಯಂ |
ಸತಿಯಿಲ್ಲದ ಗೃಹ ಶೂನ್ಯಂ |
ಅತಿ ಮೂರ್ಖನ ಹೃದಯ ಶೂನ್ಯಂ ||  [ ೧೧೨ ]


ಗುಣವರಿಯದ ಚಾತುರ್ಯದ |

ಕಣಿಯರಿಯದ ತನಗೆ ಹಿತವರೆಂಬುದನರಿಯದ |
ಬಣಗುಗಳೊಡನಾಟಂ ಸ |
ದ್ಗುಣಿಗಳಿಗಿದು ಕಾಳಕೂಟವು ಚೂಡಾರತ್ನಾ ||  [ ೧೧೩ ]


  [ ಕಣಿ=ಗಣಿ, ನಿಧಿ; ಬಣಗುಗಳು= ಅಲ್ಪರು, ನೀಚರು,ಅಧಮರು ಕೀಳು ಜನರು; ಒಡನಾಟ=ಸಹವಾಸ;         ಕಾಳಕೂಟ=ಹಾಲಾಹಲ, ಮಹಾವಿಷ. ]



ಕಟಕಿಯ ನುಡಿವನ ಮಾತಂ |

ಕುಟಿಲ ಮಾಡುವಳ ಬೇಟ ಹಾವಿನ ಕೂಟಂ |
ಅಟಮಟಿಗರೊಡನೆಯಾಟಂ |
ದಿಟದಿಂ ದಂಡಿಸದಿರೆ  ಕೇಡು ಚೂಡಾರತ್ನಾ  [ ೧೧೪ ]


 [ ಕಟಕಿ= ನಿಂದಾ ಸ್ತುತಿ, ಚುಚ್ಚುಮಾತು,ವ್ಯಂಗ್ಯಸ್ತುತಿ, ಕೆಣಕು ನುಡಿ; ಬೇಟ= ಪ್ರೀತಿ; ಅಟಮಟಿಗ= ಮೋಸಗಾರ; ದಿಟ=ನಿಜ, ಖಚಿತ,ಸತ್ಯ;. ]



 ಸೈರಣೆಯೆಂಬುದು ಮೈಸಿರಿ |

 ಸೈರಣೆಯುಂ ಜಪ ತಪವು ದಾನವು ಧರ್ಮಂ |
 ಸೈರಣೆಯೆ ಶಾಶ್ವತ ಸುಖಂ |
 ಸೈರಣೆಯೆ ಸಕಲರಿಗೆ ಹಿತ ಚೂಡಾರತ್ನಾ ||   [ ೧೧೫ ]


   [ ಮೈಸಿರಿ= ಶರೀರ ಸಂಪತ್ತು. ]



ನುಡಿದೆರಡಂ ನುಡಿವಂಗಂ |

ಕೆಡುವುದು ಸಿರಿ ತೇಜವಳಿಗು ಸಂಪದ ತೊಲಗುಂ |
ನುಡಿದಂತೆ ನಡೆವವನ ಸಲೆ |
ಬಿಡದರಸುತ ಬಹಳು ಲಕ್ಷ್ಮಿ ಚೂಡಾರತ್ನಾ ||   [ ೧೧೬ ]


  [ ನುಡಿದೆರಡಂ = ಎರಡು ಮಾತಾಡುವುದು ;ಸಲೆ= ಅತಿಶಯವಾಗಿ, ಹೆಚ್ಚಾಗಿ ]



ಯತಿ ಸಿದ್ದರ ಗತಿ ಕೆಡಿಸಿತು |

ವ್ರತಿ ಮುನಿಗಳ ಭ್ರಾಂತುಗೊಳಿಸಿ ಕಾಡಿತ್ತು ಮಹಾ ||
ಧೃತಿಗೆಡಿಸಿತು ಗುರುಹಿರಿಯರ |
ಸತಿಯರ ವೈಶಿಕದ ಬಲ್ಮೆ ಚೂಡಾರತ್ನಾ ||   [ ೧೧೭ ]


[ಯತಿ- ಸಂನ್ಯಾಸಿ;ವ್ರತಿ=ಸಂನ್ಯಾಸಿ; ಭ್ರಾಂತು=ಮಂಕು,ಮತಿವಿಕಾರ,ಅಲೆದಾಟ;ವೈಶಿಕ=ಠಕ್ಕು,ಮೋಸ,ವಂಚನೆ;ಬಲ್ಮೆ=ಸಾಮರ್ಥ್ಯ. ]



ಪರವಧುವಿನ ನಗೆ ಹಗೆಯಾ |

ಪರವಧುವಿನ ಸರಸ ವಿರಸ ಪರವಧು ಕೆರಹಂ |
ನಿರುತಂ ಮೃತ್ಯುವಿನ ಕರಹ |
ನೆರವುಂ ನರಕಕೆ ಗಮನಂ ಚೂಡಾರತ್ನಾ  || [ ೧೧೮ ]


ಕೆರಹ= ಶರೀರ,ಮೈ, ದೇಹ; ಕರಹ= ಕರೆ,ಆಹ್ವಾನ . ]



ಹೆಂಡತಿಯ ಮಾತ ಕೇಳಿದ |

ಗಂಡಂಗಭಿಮಾನ ಹಾನಿ ರಾಮಂಗಾಯಿತು |
ಮಂಡೆಯು ಬೋಳಾಯ್ತು ಬಳಿಕ |
ಹೆಂಡತಿ ಹೆಡ ತಲೆಯ ಮೃತ್ಯು ಚೂಡಾರತ್ನಾ  ||  [ ೧೧೯ ]


  [ ಹೆಡತಲೆ= ಹಿಡಲೆ, ತಲೆಯ ಹಿಂಭಾಗ. ]



ಯೌವನದೊಳಗಣ ಸಿರಿಯುಂ |

ಯೌವನದೊಳಗಾದ ಮಕ್ಕಳುಂ ವಿದ್ಯಗಳುಂ |
ಯೌವನದ ಸೊಬಗು ಪೌರುಷ |
ಮವ್ವಳಿಸಿದರುಂಟೆ ಸುಕುಕವಿ ಚೂಡಾರತ್ನಾ ||  ೧೨೦ ]


  [ ಅವ್ವಳಿಸು= ಚಿಂತಿಸು .]



ಹರಿ ಹದ್ದಂ ಹರನೆತ್ತಂ |

ಸರಸಿಜಭವನಂಚೆಯಂ ಕುಮಾರಂನವಿಲಂ |
ಪರಶುಧರನಿಲಿಯನೇರಲು |
ಅರಸಂಗೇಕಾನೆ ಕುದುರೆ ಚೂಡಾರತ್ನಾ ||  [ ೧೨೧ ]


  [ ಅಂಚೆ= ಹಂಸ; ಕುಮಾರ=ಸ್ಕಂದ, ಸುಬ್ರಹ್ಮಣ್ಯ,ಷಣ್ಮುಖ; ಪರಶುಧರ= ಗಣಪತಿ ]



ಮೊದಲರತಿ ಮೊದಲನೇಹಂ |

ಮೊದಲ ಸರಸಂ ಮೊದಲ ಯೌವನ ಮೇಣ್ ಕಾರ್ಯಂ |
ಮೊದಲೊಳಗಲ್ಲದೆ ಕಬ್ಬಿನ |
ತುದಿಯೊಳು ರಸವರಸಲುಂಟೆ ಚೂಡಾರತ್ನಾ ||   [೧೨೨ ]


  [ ರತಿ=ಶೃಂಗಾರ, ವಿಲಾಸ, ಆನಂದ, ತೃಪ್ತಿ, ಆಸಕ್ತಿ ;ನೇಹ= ಸ್ನೇಹ: ಮೇಣ್=ಮತ್ತೆ, ಅಥವಾ, ಅಲ್ಲದೆ .]



ಹಾವಸೆಗೆ ಜಲವ ತೊರೆವರೆ |

ದೇವಾಂಗವ ನೊಣವಿಗಂಜಿ ತೊರೆದವರುಂಟೇ |
ಗಾವಿಲರ ಮಾತ ಕೇಳಿಯೆ |
ಸೇವಕರ ತೊರೆದರುಂಟೆ ಚೂಡಾರತ್ನಾ  ||   [ ೧೨೩ ]


   [ ಹಾವಸೆ=ಪಾಚಿ; ದೇವಾಂಗ =ರೇಶ್ಮೆ;ಗಾವಿಲ= ದಡ್ಡ. ]



ಪತಿಯಾಜ್ಞೆಯೊಳಡಗದ ಸತಿ |

ಹುತವಹನಂತುರಿವ ಮಂತ್ರಿ ಕೋಪವಡಂಗದ |
ಯತಿ ದಯವಿನಿತಿಲ್ಲದ ನೃ |
ಪತಿ ಭೂಮಿಗೆ ಭಾರವಲ್ಲವಲ್ತೆ ಚೂಡಾರತ್ನಾ  ||  [ ೧೨೪ ]


  [ಹುತವಹ= ಅಗ್ನಿ, ಬೆಂಕಿ; ಇನಿತು= ಸ್ವಲ್ಪ. ]



ಪೊನ್ನಂದಣವುಂ ಸತ್ತಿಗೆ |

ರನ್ನದ ಹಾರಂಗಳೊರೆವ ಚಾಮರವಿದಿರೊಳು |
ಚನ್ನೆಯರಿಪ್ಪಾ ಸೌಖ್ಯಂ |
ಮುನ್ನಂ ನೋನದರಿಗುಂಟೆ ಚೂಡಾರತ್ನಾ  ||   [ ೧೨೫ ]


  [ ಪೊನ್ನು= ಹೊನ್ನು, ಚಿನ್ನ,ಬಂಗಾರ; ಅಂದಣ= ಪಲ್ಲಕಿ; ಸತ್ತಿಗೆ= ಛತ್ರಿ, ಕೊಡೆ; ಪನ್ನ= ರತ್ನ; ಚನ್ನೆಯರು= ಚೆಲುವೆಯರು,ಸುಂದರಿಯರು;ನೋನ್= ವ್ರತ; ನೋನದರು=ವ್ರತ ಮಾಡದವರು. ]



===========================================================

“““““““““““““““““““““““““““““““““““““““““““““““““““““““““““““““‘““““““““““““““““““““““““““““““““““““““““““
            ||  ಮಂಗಲಮ್  ||                                                || ಹರೇ ರಾಮ್ ||
“““““““““““““““““““““““““““““““““““““““““““““““““““““““““““““““‘““““““““““““““““““““““““““““““““““““““““““
===========================================================


                          ಸಂಗ್ರಹಕಾರನ ಪರಿಚಯ



ಹೆಸರು :- ಲಕ್ಷ್ಮೀನಾರಾಯಣ ಭಟ್, ಪೆರ್ನಾಜೆ   [ ಯಲ್. ಬಿ. ಪೆರ್ನಾಜೆ ]



ಜನನ :-  27-03-1949 



ಜನನಸ್ಥಳ :- ಪೆರ್ನಾಜೆ ; ನೆಟ್ಟಣಿಗೆ ಮೂಡ್ನೂರು ಗ್ರಾಮ ; ಪುತ್ತೂರು ತಾಲೂಕು

                    ದಕ್ಷಿಣ ಕನ್ನಡಜಿಲ್ಲೆ ; ಕರ್ನಾಟಕ ರಾಜ್ಯ ; ಭಾರತ


ತಂದೆ :-    ಶಂಭು ಭಟ್ ;    ತಾಯಿ :-  ಪಾರ್ವತಿ



ವಿದ್ಯಾಭ್ಯಾಸ :- 5 ನೆ ತರಗತಿ ತನಕ ಶ್ರೀ ಸೀತಾ ರಾಘವ ಪ್ರಾಥನಿಕ ಶಾಲೆ ;ಪೆರ್ನಾಜೆ

                       8 ನೆ ತರಗತಿ ತನಕ ಶ್ರೀ ಗಜಾನನ ಹಿರಿಯ ಪ್ರಾಥಮಿಕ ಶಾಲೆ ;ಪಾಳ್ಯತಡ್ಕ
                      10 ನೆ ತರಗತಿ ತನಕ ಬೋರ್ಡ್ ಹೈ ಸ್ಕೂಲ್ ಪುತ್ತೂರು. [ಪ್ರಕೃತ ಸರಕಾರಿ-
                     ಕಿರಿಯ ಮಹಾ ವಿದ್ಯಾಲಯ ಕೊಂಬೆಟ್ಟು-ಪುತ್ತೂರು ಎಂದು ಪರಿ ವರ್ತಿತವಾಗಿದೆ.


ಸದ್ಯದ ವಾಸ್ಥವ್ಯ :- " ಶ್ರೀ ಗಿರಿ ನಿಲಯ- ಮದ್ಲ "

                               ಮಾಡ್ನೂರು ಗ್ರಾಮ ; 
                               ಅಂಚೆ :- ಕಾವು -574223
                              ಪುತ್ತೂರು ತಾಲೂಕು ; ದಕ್ಷಿಣ ಕನ್ನಡ ಜಿಲ್ಲೆ ; ಕರ್ನಾಟಕ ರಾಜ್ಯ - ಭಾರತ


ವೃತ್ತಿ :- ಕೃಷಿ; ಜ್ಯೋತಿಷ್ಯ.



=============================================================

““““““““““““““““““““““““““““““““““““““““““““““““““““““““““““““““““““‘


13 comments:

  1. ಜೀವನ ಕಲೆ ಯನ್ನು ಕೂಲಂಕುಶವಾಗಿ ತಿಳಿಸುವ ಈ ಚೂಡಾರತ್ನ ಶತಕ ಶ್ಲೋಕಗಳನ್ನು ಮುಂದಿನ ಜನಾಂಗಕ್ಕೆ ತಲಪಿಸುವ ಅತ್ಯುತ್ತಮವಾದ ಸೇವೆಯನ್ನ ಮಾಡುತ್ತಿದ್ದೀರಿ. ಅಭಿನಂದನೆಗಳು.

    ReplyDelete
  2. ಭಾರೀ ಒಳ್ಳೆ ಕೆಲಸ ಪೆರ್ನಜೆ ಅಣ್ಣಾ.. ನಿಂಗೊಗೆ ಆಭಾರಿ.

    ReplyDelete
    Replies
    1. ಈಶ್ವರಣ್ಣ ಸ್ವಾಗತ ನಿಂಗೊಗೆ. ಆಗಾಗ ಪರಿಶೀಲಿಸಿ ಅಮೂಲ್ಯ ಸಲಹೆ ಕೊಡುತ್ತಾ ಇರೆಕ್ಕು ಹೇಳಿ ವಿನಂತಿ
      ವಂದನೆಗೊ,
      ಯಲ್.ಬಿ.ಪೆರ್ನಾಜೆ.

      Delete
  3. ರಾಜೇಂದ್ರಣ್ಣ! ತುಂಬಾ ದನ್ಯವಾದಂಗೊ.ನಿಂಗಳ ಸಹಕಾರ ಆನು ಬ್ಲಾಗಿಲಿ ಬರವದಕ್ಕಿಂತಲೂ ಹೆಚ್ಚಿಂದು.ಪುನ: ಪುನ: ವಂದನೆಗೊ.

    ReplyDelete
  4. ಧನ್ಯವಾದ ಪೆರ್ನಾಜೆ ಅಣ್ಣ.

    ReplyDelete
  5. ಇಂದ್ರಾಣದ್ದುದೆ ನಿನ್ನೆದುದೆ ಒಂದೇ ರೀತಿ ಅಕ್ಷರಲ್ಲಿ ಇಲ್ಲೆಯೋ ಹೇಳಿ ಒಂದು ಸಂಶಯ. ತುಂಬಾ ಸಣ್ಣ ಕಾಣ್ತು .

    ನಿಂಗ ದಿನಕ್ಕೊಂದು ಬೇರೆಯ ಪೋಸ್ಟ್ ಮಾಡಿದರೆ ಒಳ್ಳೆದಲ್ಲದೋ.. ಕಮೆಂಟುಗಳಲ್ಲಿ ಅರ್ಥ ಹಾಕುಲಕ್ಕು. ಲಾಯ್ಕ ಕಾಣುಗು.

    ಧನ್ಯವಾದಂಗೊ,
    ಕಿರಣ

    ReplyDelete
  6. ಭಾರೀ ಉತ್ತಮ ಕೆಲಸ ಮಾಡಿದ್ದಕ್ಕೆ ನಿಂಗೊಗೆ ಅಂತರಾಳದ ಅಭಿನಂದನೆ. ತುಂಬಾ ಒಳ್ಳೆಯ ರತ್ನಂಗಳ ಜೋಪಾನವಾಗಿ ಪೇರಿಸಿದ್ದಿ. ಇದರು ಉಳುಶುದು ಮತ್ತೆ ಹಂಚುವ ಕೆಲಸವ ನಾವೆಲ್ಲಾ ಸೇರಿ ಮುಂದುವರೆಸುವ.

    ಧನ್ಯವಾದ,
    ಕಿರಣ

    ReplyDelete
    Replies
    1. ಇನ್ನು 20 ರ ಮೇಲೆ ಪದ್ಯ ಗಳು ನೆನಪಿನಲ್ಲಿವೆ. ಅದನ್ನೆಲ್ಲಾ ಇಲ್ಲಿ ದಾಖಲಿಸುವೆ. ನಿಮ್ಮಂತಹಾ ಅಭಿಮಾನಿ ಮಿತ್ರ ಕೂಟದಿಂದ ದೊರಕಿದ ಪ್ರೋತ್ಸಾಹ ಇಲ್ಲಿ ತನಕ ಮುನ್ನಡೆಸಿತು. ಅದಕ್ಕಾಗಿ ಎಲ್ಲಾ ಸನ್ಮಿತ್ರರಿಗೂ ವಂದನೆಗಳು.

      Delete
  7. ಅಕೇರಿಯಾಣ ಪದ್ಯಲ್ಲಿ ಎಂತಕೋ ಚೂಡಾರತ್ನ ಬರದ್ದು ಅಲ್ಲ ಹೇಳಿ ಅನ್ನಿಸುತ್ತಾ ಇದ್ದು. ಮೊದಲಾಣ ಪದ್ಯಂಗಳ ಗೇಯತೆ ಇಲ್ಲೆ ಅದರಲ್ಲಿ. ನಿಂಗಳ ಈ ಸಂಗ್ರಹ ತುಂಬಾ ಉಪಯುಕ್ತ ಪೆರ್ನಜೆ ಅಣ್ಣ. ಅಭಿನಂದನೆ,.

    ReplyDelete
  8. ಈಶ್ವರಣ್ಣ ನಮಸ್ತೇ! ಎನ್ನ ಅಭಿಪ್ರಾಯಲ್ಲಿ ಹಿಂದಾಣ ಪದ್ಯಂಗಳಲ್ಲಿ ಇಪ್ಪಂತಹಾ ನೀತಿಯ ಈ ಪದ್ಯವೂ ಸಾರಿ ಹೇಳುತ್ತು.ಈ ಕವಿಯ ಪದ್ಯಂಗಳಲ್ಲಿ ಹಾಸ್ಯ,ವಿಢಂಬನೆ,ನೀತಿಗಳ ಸಾರ ಇದ್ದು. ಇನ್ನು 3 ಪದ್ಯಂಗೊ ಎನ್ನ ಸಂಗ್ರಹಲ್ಲಿ ಇದ್ದು.ನಿಂಗಳ ಸಲಹೆ, ಪ್ರೋತ್ಸಾಹಂಗೊ ಈಹಂತಕ್ಕೆ ಇದು ತಲಪುಲೆ ಕಾರಣ ಆಯಿದು.ಎನ್ನ ಜ್ಞಾನವುದೆ ಸಾಣೆಗೆ ಕೊಟ್ಟಾಂಗಾತು. ಧನ್ಯವದಂಗೊ.

    ReplyDelete
  9. https://choodaratnashataka.wordpress.com/
    ಈ ಮೇಲಿನ ಬ್ಲಾಗ್ನಲ್ಲಿ ಎಲ್ಲಾ ಚೂಡಾರತ್ನ ಶತಕ ಪದ್ಯಗಳ ವಿವರವನ್ನು ನೀಡಲಾಗಿದೆ

    ReplyDelete
  10. Excellent collection. Congrats. A great service. May God bless you. K C Shivappa, Mysore

    ReplyDelete
  11. ದತ್ತಾತ್ರಿ ಕೆ.ಎನ್. ಅರಸೀಕೆರೆ20 March 2024 at 11:56

    ಬಹಳ ಅರ್ಥ
    ಗರ್ಭಿತವಾಗಿದೆ,ನಿಮ್ಮ ಕೆಲಸ ಬಹಳ ಶ್ಲಾಘನೀಯ ವಾದದ್ದು ನಮಸ್ಕಾರ.

    ReplyDelete