Thursday 12 September 2013

ಶ್ರೀರಾಮ ಭಕ್ತಿಸಾರ ಶತಕವು [ಸಂಗ್ರಹ]

    ಕಾವ್ಯದ ಬಗ್ಗೆ  ಒಂದಿಷ್ಟು :-
"ಶ್ರೀರಾಮ ಭಕ್ತಿಸಾರ ಶತಕವೆಂಬ ಕಾವ್ಯವು  1960 ನೇ  ಇಸವಿಯಲ್ಲಿ ಕೆ.ಯನ್.ನರಸಪ್ಪ ಶೆಟ್ಟಿ ;ಪುಸ್ತಕ ವ್ಯಾಪಾರಿಗಳು; ಹಿರಿಯೂರು;ಚಿತ್ರದುರ್ಗ ಇವರು ಪ್ರಕಟಿಸಿದ್ದ ಶ್ರೀ ಕೆ.ಯನ್.ಲಕ್ಶ್ಮೀನಾರಾಯಣ ರಾವ್ ಎಂಬರುವರು ಪರಿಷ್ಕರಿಸಿದ ಕಾವ್ಯದ ಯಥಾವತ್ ಸಂಗ್ರಹವಾಗಿದೆ. ಈ ಹೊತ್ತಗೆಯು ಇಂದು ಮಾರು ಕಟ್ಟೆಯಲ್ಲಿ ಲಭ್ಯವಿಲ್ಲದ ಕಾರಣ ಒಂದು ಉತ್ತಮ ಕಾವ್ಯ ಸಾಹಿತ್ಯ ಪ್ರಪಂಚದಿಂದ ಕಾಣೆಯಾಗಬಾರದು ಎಂಬ ಏಕೈಕ ಉದ್ದೇಶದಿಂದ ಇಲ್ಲಿ ಯಥಾವತ್ ಸಂಗ್ರಹಿಸಲಾಗಿದೆ.
.
            
                ||ಶ್ರೀರಸ್ತು||

               ||ಶುಭಮಸ್ತು||

     || ಶ್ರೀರಾಮ ಭಕ್ತಿಸಾರ ಶತಕವು ||
     ************************
     ************************

ಶುಕ್ಲಾಂಬರಧರಂ ವಿಷ್ಣುಂ ಶಶಿವರ್ಣಂ ಚತುರ್ಭುಜಂ|
ಪ್ರಸನ್ನವದನಂ ಧ್ಯಾಯೇತ್ಸರ್ವ ವಿಘ್ನೋಪಶಾಂತಯೇ ||

ಸರ್ವವಿಘ್ನ ಪ್ರಶಮನಂ ಸರ್ವಸಿದ್ಧಿಕರಂಪರಮ್ |
ಸರ್ವಜೀವ ಪ್ರಣೇತಾರಂ ವನ್ದೇವಿಜಯದಂ ಹರಿಮ್ ||

ಶ್ರೀ ರಮಣ ತವಪದ ಚರಿತ್ರದ
ಸಾರವೆನಗೊಲಿದಿತ್ತು ಕರುಣದಿ ಆ
ದರಿಸಿ ಈ ಭಕ್ತಿಸಾರದೊಳ್ನೀನೆ ನೆಲೆಗೊಂಡು |
ವಾರಿಜೋದ್ಭವ ಇಂದ್ರ ವಂದಿತ
ಪಾರ ಪಾವನವೆಂಬ ಚರ್ಯದೊ
ಳ್ಭೋರೆನುತ ಗೋಕ್ಷೀರ ದೊಲೆರಡಕ್ಷರದ ಚರ‍್ಯ ||೧||

ಕೃತ್ತಿವಾಸನ ಪುತ್ರದಯದಿಂ
ಮತ್ತೆ ಮಮತೆಯೊಳೊಲಿದು ಮತಿಯನು
ಇತ್ತು ಬೇಗನೆ ಯೀ ಕೃತಿಯ ಸರ್ವೋತ್ತಮನೇ ಸಲಹೋ|
ಅರ್ಥಿಯಿಂ ಈ ಭಕ್ತಿಸಾರವ
ವಿಸ್ತರಿಪೆ ಸುಜನರಿಗೆ ಬೇಗ ಪ್ರ
ಶಸ್ತದಿಂ ವಿಘ್ನೇಶ ರಕ್ಷಿಸು ನಮ್ಮನನವರತ ||೨||

ಆದಿ ಬ್ರಹ್ಮನ ರಾಣಿ ಸುಂದರಿ
ನಾದಬಿಂದು ಕಳಾ ಮನೋಹರಿ
ವೇದನುತೆ ಗಾಯತ್ರಿ ವಿಶ್ವವಿನೋದ ವಂದಿತೆಯೆ |
ಭೇದವಿಡದೀ ಭಕ್ತಿಸಾರವ
ಓದಿ ಲಾಲಿಪರಿಂಗೆ ಉಚಿತವ
ಆದರಿಸಿ ಕರುಣದಲಿ ರಕ್ಷಿಸು ನಮ್ಮನನವರತ ||೩||

ಪಕ್ಷಿವಾಹನ ಸಜ್ಜನಾಶ್ರಿತ
ರಕ್ಷ ಪಾಂಡವ ಪಕ್ಷ ಕರುಣ ಕ
ಟಾಕ್ಷ ಕೌಸ್ತುಭವಕ್ಷ ತಾ ಶ್ರೀವತ್ಸ ಘನ ವಕ್ಷ |
ವೃಕ್ಷ ಪುರಿಗಾಧ್ಯಕ್ಷ ಶುಭಫಲ
ಮೋಕ್ಷ ವರ ನಿಟಿಲಾಕ್ಷನುತ ಕಮ
ಲಾಕ್ಷ ಕ್ರತು ಸಂರಕ್ಷ ರಕ್ಷಿಸು ನಮ್ಮನನವರತ ||೪||

ವಂದನವು ನಿನಗೀಗ ನೀ ಶಿಖಿ
ಮಂದಿರದಿ ನಿಂದಿರುವ ನರಹರಿ
ಹಿಂದೆ ಕಂದನ ಕಾಯ್ದ ತೆರದಿ ಮುಕುಂದ ಕರುಣದಲಿ |
ಇಂದು ಭಕ್ತಿಯೊಳ್ಭಕ್ತಿಸಾರವ
ದೊಂದು ಚರಿತವ ವಿರಚಿಸುವೆ ಗೋ
ವಿಂದ ಮಾಧವ ವಿಷ್ಣು ರಕ್ಷಿಸು ನಮ್ಮನನವರತ ||೫||


ವೇದವಂದಿತ ವಿಶ್ವಪುಂಜದ
ನಾದ ಬಿಂದು ಕಳಾ ಮನೋಹರ
ಆದಿ ಮೂಲ ಪ್ರಕೃತಿ ಮದಪುರಧೀಶ ಮಲ್ಲೇಶ |
ಮಾಧವ ಪ್ರಿಯ ಮಧುರ ಭಾಷ ವಿ
ನೋದ ಭದ್ರೈಕ ರುದ್ರ ತವಚರ
ಣ ದ್ವಯವ ನಂಬಿದೆನು ರಕ್ಷಿಸು ನಮ್ಮನನವರತ ||೬||

ಬಾಳ ಬಟ್ಟು ತ್ರಿಶೂಲ ಢಮರುಗ
ಮೇಳದಿಂ ಝಾಳಿಸುವ ಖಡ್ಗದಿ
ಕಾಳ ರಕ್ಷಸರನ್ನು ಮರ್ದಿಪ ವರ ಮಹಂಕಾಳೀ |
ವ್ಯಾಳ ಭೂಷಣ ನರಸಿ ಕರುಣವ
ತಾಳಿ ಶ್ರೀ ತರುರೊಳಿಹ ಕೆಂ
ಜಾಳಿ ದುರ್ಗಾಂಬಿಕೆಯೇ ರಕ್ಷಿಸು ನಮ್ಮನನವರತ ||೭||

ಧರೆಯೊಳ್ಕರಿಪುರದೊರೆಯ ರಂಗನ
ಸಿರಿ ಚರಣ ಕಮಲಾಬ್ಜ ಭೃಂಗನು
ನರಸಕವಿ ವಿರಸಿಸುವ ಹರಿಪದ ಭಕ್ತಿ ಸಾರವನು |
ಕರುಣದಲಿ ಶ್ರೀರಾಮ ಯೆನಗೆಯು
ಅರುಹಿದ ತೆರದಿ ರಚಿಸಿದೆ ಸಿರಿ
ಯರಸ ಶ್ರೀ ರಘುರಾಮ ರಕ್ಷಿಸು ನಮ್ಮನನವರತ ||೮||

ಮತಿಯುತರು ಶ್ರೀರಾಮ ಚರಿತದಿ
ಅತಿ ಹಿತದಿ ಮನವಿಟ್ಟು ಸುಜನರು
ಖತಿಯ ತಾಳದೆ ಲಾಲಿಪುದು ಈ ಕೃತಿಯ ಕರುಣದಲಿ |
ಯತಿಯ ಪ್ರಾಸಗಳರಿಯೆ ಮತಿಯನು
ಅತಿ ಹಿತದಿ ನೀನಿತ್ತು ಕರುಣದಿ 
ಪತಿತಪಾವನ ನುಡಿಪೆ ರಕ್ಷಿಸು ನಮ್ಮನನವರತ ||೯||

ರತಿಯ ಪತಿ ಪಿತ ನೀನೊಲಿದು ಸ
ದ್ಗತಿಯ ಕರುಣಿಪುದೆಂದು ದುಷ್ಕೃತಿ
ತತಿಯ ಮನಸಿಗೆ ತಾರದಲೆ ಶ್ರೀರಾಮ ರಕ್ಷಿಸುವುದು |
ಸತತ ಹೃದಯದಲಿರ್ದು ರಘುಪತಿ
ಹಿತದಿ ನಿನ್ನಯ ನಾಮ ಜಿಹ್ವೆಯೊ
ಳತಿಶಯದಿ ನುಡಿಪಂತೆ ರಕ್ಷಿಸು ನಮ್ಮನನವರತ ||೧೦||



ವಸುಮತಿಯ ಭಾರವನು ಕಳೆಯಲು 
ದಶರಥನ ಗರ್ಭದೊಳಗುದಿಸಿದೆ
ಯಸೆವ ಸೇವೋಚ್ಚರಿತ ಲಕ್ಷ್ಮಣ ಭರತ ಶತೃಘ್ನ |
ಮಿಸುಪ ಸತ್ಯ ಸ್ಕಂದರಿಗೆ ನೀ
ರಸಿಕ ತನದಿ ಸಹೋದರನು ಎ
ನಿಸುವ ನೀ ಶ್ರೀರಾಮ ರಕ್ಷಿಸು ನಮ್ಮನನವರತ ||೧೧||

ತರಣಿ ವಂಶಜ ನೆನಿಪ ಕರುಣಾ
ಶರಧಿ ತಾಟಕಿಯನ್ನು ಸಂಹರಿಸಿ
ವರ ಮುನಿಪೋತ್ತಮನ ಕ್ರತುವನ ಇರದೆ ರಕ್ಷಿಸುತ |
ಇರಲು ಸುರ ಮುನಿವರರು ಮುಖ್ಯರು
ಹರುಷ ಪುಳಕಿತರಾದರಾಕ್ಷಣ
ಸರಸಿಜಾಕ್ಷಕ ರಾಮ ರಕ್ಷಿಸು ನಮ್ಮನನವರತ ||೧೨||

ಹರನ ಚಾಪವ ಜನಕ ಚಕ್ರಿಯು
ಪರಮ ಹರುಷಿತನಾಗಿ ಮಂತ್ರ
ಸ್ಫುರಿತದಿಂದಾ ವಾಹನೆಯ ವಿಸ್ತರಿಸಿ ಬಳಿಕಿನಲಿ |
ಇರದೆ ರಾಜಿಪ ರಾಯಭಾರದ
ದೊರೆಗಳೆಲ್ಲರ ಕರೆಸಲಾಕ್ಷಣ
ತೆರಳ್ದಾತ ಮುನಿಯೊಡನೆ ರಕ್ಷಿಸು ನಮ್ಮನನವರತ ||೧೩||

ದಶಶಿರನು ಮೊದಲಾದ ಸಕಲರು
ಅಸಮ ಶೌರ‍್ಯದ ವೀರರೆಲ್ಲರು
ಕುಸಿದು ಪೋದರು ಸಿಖಿಯ ನೇತ್ರನ ಚಾಪದೆದುರುಬೆಯಲಿ |
ಕುಸುಮ ಶರಪಿತ ವಾಮ ಭಾಗದೊ
ಳೆಸೆವ ಲಕ್ಷ್ಮಣ ವೀಕ್ಷಿಸಲು ಮಿಗೆ
ಶಶಿಧರನ ಬಿಲ್ಲುಡಿದೆ ರಕ್ಷಿಸು ನಮ್ಮನನವರತ ||೧೪||

ಹರನ ಚಾಪದ ಹರುಷದಿಂದಲಿ
ಧರಣಿಜೆಯ ನೀನೊಲಿಸಿ ನಿನ್ನ
ವರಾದ ಭರತ ಸುಲಕ್ಷ್ಮಣ ಶತೃಘ್ನರಿಗೆ ಬಳಿಕ |
ಪರಮ ಸಂತೋಷದಲಿ ಮದುವೆಯ
ವಿರಚಿಸಿದ ಪರಮಾತ್ಮನೆಂದೆ
ನಿರುತ ನಂಬಿದೆ ರಾಮ ರಕ್ಷಿಸು ನಮ್ಮನನವರತ ||೧೫|| 



ಭೂಮಿಜೆಯಪಿತ ಜನಕ ಚಕ್ರಿಯು
ತಾ ಮನೋಹರದಿಂದ ನಮಿಸಿದ
ಪ್ರೇಮದಲಿ ದಶರಥಗೆ ನೂತನ ವಸ್ತ್ರ ಕಾಣಿಕೆಯ |
ಆ ಮಹಾದಳ ಸೈನ್ಯಕೆಲ್ಲಕೆ 
ಕಾಮಿತಾರ್ಥವ ಸಲಿಸಿ ತೆರಳಿದೆ
ಭೂಮಿಜೆಯ ನೊಡಗೊಂಡು ರಕ್ಷಿಸು ನಮ್ಮನನವರತ ||೧೬||

ಬರುತ ಮಾರ್ಗದಿ ಭಾರ್ಗವನ ತಡೆ
ದುರುತರದ ಚಾಪವನು ಖಂಡಿಸಿ
ಹರುಷದಿಂದ ಅಯೋಧ್ಯಪುರ ಬಳಿಗಾಗಲೈ ತಂದು |
ಸರಸದಲಿ ಭೂಮಿಜೆಯ ಪಿತರುಗ
ಳ್ಹರುಷ ಪುಳಕಿತರಾಗಲಾಗುಪ
ಚರಿಪವರ ರಘುರಾಮ ರಕ್ಷಿಸು ನಮ್ಮನನವರತ ||೧೭|

ಶುಭಮುಹೂರ್ತದೊಳಾಪುರಕೆ
ತ್ರಿಭುವನ ವಿಭುವೆನಿಪ ಶ್ರೀರಾಮ
ಅಭುಜ ಮುಖಿ ಸೀತಾದೇವಿಯೊಡನಂದಣವನೇರಿ |
ಅಬುದಿ ಸಮಗುಣವನು ಜರಿದಿರಲಿ
ಅಭವ ಸಖನೈತರಲು ದುಂಧುಭಿ
ರಭಸದೊಡನೈ ತಂದೆ ರಕ್ಷಿಸು ನಮ್ಮನನವರತ ||೧೮||

ಸಗರವಂಶೋದ್ಭವರ ಭವನಕೆ
ಸುಗುಣೆಯರು ಶೃಂಗಾರದಾರತಿ
ಅಗರು ಚಂದನ ರಧಿಕಗಂಧವ ಪರಿಮಳೊದಕದ |
ಮಗುಳೆ ಅವರಿವರು ಭಯರಭಸದಿ
ಬಗೆ ಬಗೆಯ ಶೃಂಗಾರದೊಗುಮಿಗೆ
ನೆಗಹೆ ನಗುತಿರ್ದಾತ ರಕ್ಷಿಸು ನಮ್ಮನನವರತ ||೧೯||

ಹರುಷದಿಂದಲಿ ಗೃಹಪ್ರವೇಶವ
ಸರಸ ಪೂರ್ವಕದಿಂದ ರಚಿಸಲು
ಪರಮಮುನಿಗಳು ವೆರಸಿ ಬರುತಿಹ ಗುರುಗಳೀಕ್ಷಿಸುತ |
ಗುರು ವಶಿಷ್ಠರ ಪರಮಮುನಿಗಳು
ಹಿರಿಯ ಭೂಸುರರುಗಳ ಸತ್ಕರಿಸಿ
ಹರುಷದಿಂದೆಂದಾತ ರಕ್ಷಿಸು ನಮ್ಮನನವರತ ||೨೦||



ಸರಸವೆಸೆಯುತ ಜನಕ ಚಕ್ರಗೆ
ಹರುಷ ರಸದಲಿ ದಶರಥೇಶ್ವರ
ಉರುತರದ ಸನ್ಮಾನವವರಿಗೆ ವಿರಚಿಸುತ ಬೇಗ |
ತರಣಿವಂಶದ ತನಯರಿಗೆ ವುರು
ತರ ವಿವಾಹ ಮುಹೂರ್ತವನು
ವಿರಚಿಸಿದರೆಂದಾ ರಾಮ ರಕ್ಷಿಸಿ ನಮ್ಮನನವರತ ||೨೧||

ಮಿಂದು ಮಂಗಳ ನಡಸಿ ಗಂಧವ
ಚಂದದಿಂ ಸಡಗರದಿ ನೂತನ
ಚಂದ್ರಗಾಮಿಯ ಪೊದಿಸಿ ಸಂಭ್ರಮದಿಂದ ದಶರಥನು |
ಅಂದು ಜನಕ ನೃಪಾಲ ಗುರುಗಳಿ
ಗೊಂದನೆಯ ವಿರಚಿಸುತ ದಯವಿರ
ಲೆಂದು ಪೇಳ್ದನ ಕಂದ ರಕ್ಷಿಸು ನಮ್ಮನನವರತ ||೨೨||

ಸೃಷ್ಟಿಪತಿ ರಾಮನಿಗೆ ಪಟ್ಟವ 
ಕಟ್ಟಬೇಕೆಂಬ ಯತ್ನವ
ದಿಟ್ಟ ಮಂದರೆ ಕೈಕೆಯೊಳು ತಾನಿಷ್ಟು ವಿರಚಿಸಲು |
ಪಟ್ಟವನು ಭರತನಿಗೆ ಕಟ್ಟಿಸು
ಸೃಷ್ಟಿಗೊಡೆಯನ ವನಕೆ ಕಳುಹೆನೆ
ದಿಟ್ಟತನದಲಿ ಕೆರಳ್ದೆ ರಕ್ಷಿಸು ನಮ್ಮನನವರತ ||೨೩||

ಚಿತ್ರ ಕೂಟದೊಳಿರುತ ಪಿತ ಸ್ವ
ರ್ಗಸ್ಥನಾದನು ಎಂಬ ವಾರ್ತೆಯ
ಮತ್ತೆ ಭರತಾದಿಗಳು ಮುಖ್ಯರು ವಿಸ್ತರಿಸೆ ಬಳಿಕ |
ಕರ್ತು ಕರ್ಮವನುನಡೆಸಿ ಭರತಗೆ 
ಅರ್ಥಿಯಿಂ ಪಾದುಕೆಯನಿತ್ತ
ಮೂರ್ತಿ ಶ್ರೀ ರಘುರಾಮ ರಕ್ಷಿಸು ನಮ್ಮನನವರತ ||೨೪||

ಮುಂದೆ ವರಶರ ಭಂಗನಾಶ್ರಮ
ದಿಂದ ಘೋರಾರಣ್ಯ ಕೈತರ
ಲಂದು ಹಿಂದಕೆ ತಿರುಗಿ ನೋಡಿದ 
ಡಂದು ಸೀತೆಯ ಹವಣ ಕಾಣುತ 
ಲಂದು ತಮ್ಮಗೆ ಪೇಳ್ದೆ ರಕ್ಷಿಸು ನಮ್ಮನನವರತ ||೨೫||



ತಮ್ಮ ಸೀತೆಯ ಭ್ರಮೆಯ ನೋಡಿದ
ಡುಮ್ಮಳಿಸುತಿಹ ಮುಖದ ಬೆಮರನು
ನೆಮ್ಮದಿಯೊಳಿರುವಂತ ಪ್ರಾಪ್ತಿಯ ಫಲವು ಎಮಗಿಲ್ಲ |
ಈ ಮಹಿಮೆಯೊಳ್ಕೇಳೆಮ್ಮ ಕಷ್ಟವ
ತಮ್ಮ ತಪ್ಪಿಸಲಾರಳವುಮಿಗೆ
ಬೊಮ್ಮ ಬರಹವನೆಂದೆ ರಕ್ಷಿಸು ನಮ್ಮನನವರತ ||೨೬||

ಸಗರ ವಂಶೋದ್ಭವ ಶ್ರೀರಾಮನು
ಸುಗುಣ ಲಕ್ಷ್ಮಣ ಸೀತೆ ಸಹಿತವು
ಅಗಹರನ ಕಿರಣಂಗಳೊಳಹಿಗೆ ಅಳವಳಿದು ಕೂಡೆ |
ಮೊಗಕೆ ಮುತ್ತುಕದೆಲೆಯ ಕೈಯಿಂ
ನೆಗಹಿಸುತ ನೆರಳ್ದದಿಗೆ ಬೇಗನೇ
ಮಗುಳೆ ತೆರಳಿದ ರಾಮ ರಕ್ಷಿಸು ನಮ್ಮನನವತ ||೨೭||

ಅಂದು ಜಾನಕಿ ಪೇಳ್ದಳಾ ರಘು
ನಂದನಗೆ ತಾ ನೊಂದುಮಾತನು
ಬಂದುದೀ ಶ್ರಮಯಿಂದು ಯನಗೆ ಮುಕುಂದ ಗೋವಿಂದ |
ಅಂದದಿಂ ಶ್ರೀಗಂಧ ಲೇಪನ
ದಿಂದ ವಿಡೆಯವನೀವ ಫಲತನ
ಗೆಂದಿಗೆನೆ ಮನ್ನಿಸಿದೆ ರಕ್ಷಿಸು ನಮ್ಮನನವರತ ||೨೮||

ಬಂದು ಪಂಚವಟಿ ಪ್ರವೇಶದೊ
ಳಂದು ಲಕ್ಷ್ಮಣ ಸೀತೆ ಸಹಿತಾ
ನಂದದಿಂದಲಿನಿಂದು ಸೌಖ್ಯವಿದೆಂದು ಸಂಭ್ರಮದಿ |
ಕಂದ ಲಕ್ಷ್ಮಣ ಕರುಣ ಹೃದಯಗೆ
ತಂದು ಫಲಪಣ್ಣುಗಳ ಕೊಡುತಿರ
ಲಂದು ದಿನಗಳಿದಿರ್ದೆ ರಕ್ಷಿಸು ನಮ್ಮನನವರತ ||೨೯||

ಆ ಸುಲಕ್ಷ್ಮಣ ಶೂರ್ಪನಖಿಯನು
ನಾಶಿಕಶ್ಚೇದನವ ಮಾಡಲು
ಘಾಸಿಯಾದಳು ಶೂರ್ಪನಖಿ ಖರದೂಷಣಾದ್ಯರಿಗೆ |
ಸೂಸಿ ಕಂಬನಿಗರದು ಪೇಳಲು
ನಾಶಿಕದ ವಾರ್ತೆಯನು ಬಂದರ
ನಾಸಿಯಿಂ ಶಿಕ್ಷಿಸಿದೆ ರಕ್ಷಿಸು ನಮ್ಮನನವರತ ||೩೦||



ಕಾಕಾಸುರನಪರಾಧವನು ಲೋ
ಕೈಕ ವೀರನೆ ನೀ ಕ್ಷಮಿಸಿ
ಬೇಕೆಂಬ ಮೃಗವನುತಹೆನು ಯೆಂದೇಕಾಕಿಯಲಿ ತೆರಳೆ |
ಯಾಕೆ ಲಕ್ಷ್ಮಣ ತೆರಳು ಮೃಗದೆಡೆ
ಯಾಕರಿಸುತಿದೆ ರಾಮ ಶಬ್ದೆಂ
ದಾಕೆಯರಸನೆ ರಾಮ ರಕ್ಷಿಸು ನಮ್ಮನನವರತ ||೩೧||

ಎಂದ ಮಾತಿಗೆ ಲಕ್ಷ್ಮಣನು ತಾ 
ನೊಂದು ಆಲೋಚನೆಯ ವಿರಚಿಸ
ಲಂದು ಸೀತೆಯು ಸಂದೇಹವ ಪಡುತೊಂದು ಮಾತಾಡೆ |
ಕಂದಸಮನೆನುತಿರ್ದೆಯಿದುವರಿ
ಗಿಂದು ಈ ಪರಿ ತಿಳಿಯದ್ ಹೋದೆ ಮು
ಕುಂದನೆಂದಳ ಕಾಂತ ರಕ್ಷಿಸು ನಮ್ಮನನವರತ ||೩೨||

ಈಕೆಯೀಪರಿ ನುಡಿಯಲಾಕ್ಷಣ
ಸಾಕು ಜನ್ಮವೆನುತ್ತ ಲಕ್ಷ್ಮಣ
ಲೋಕ ಸನ್ನುತ ರಾಮ ರಾಮ  ಎನುತ ಕಿವಿಯನುಮುಚ್ಚೆ |
ಓಕರಿಪ ಸೀತೆಯನು ನೋಡಿ ಶ
ರಾಕರುಷನನುಕರಿ ಪೊರಟ ವಿ
ವೇಕಿ ಲಕ್ಷ್ಮಣನಣ್ಣ ರಕ್ಷಿಸು ನಮ್ಮನನವರತ ||೩೩||

ಮಿತಿಯ ನರಿಯದೆ ರಾವಣನು ತಾ
ಯತಿಯ ರೂಪವತಾಳೆ ಆ ಕ್ಷಣ ಪ
ತಿತ ಪಾವನೆ ಯತಿಸ್ವರೂಪಗೆ ಗತಿಯು ಈ ಗೃಹವು |
ಮತಿಯು ಮಂಗಳ ಕರವು ಎನಲಾ
ಸತಿಯು ಬಿಜಯಂಗೈವುದೆಂದಳ
ಪತಿಯೆ ಶ್ರೀರಘುರಾಮ ರಕ್ಷಿಸು ನಮ್ಮನನವರತ ||೩೪||

ಎಲೆ ತರುಣಿ ರಾಮೆಂಬ ಪುರುಷನು
ಸುಲಲಿತದ ಮೃಗನೆವದಿ ಸಂಶಯ
ಸುಲಭವಲ್ಲದ ಮೃಗದ ಬೆಂಬಳಿವಿಡಿದು ಪೋದುದಕೆ |
ವಲಿಸು ಎಮ್ಮನು ನಿನ್ನಭಿಷ್ಟವ
ಸಲಿಸುವೆವು ಎನಲಂದು ಚಿಂತಿಪ
ಲಲನೆಯರಸನೆ ರಾಮ ರಕ್ಷಿಸು ನಮ್ಮನನವರತ ||೩೫||



ಕನ್ನೆ ಕಾಮಿನಿರನ್ನೆನಿಪ
ಚನ್ನಾರಿಭಿಕ್ಷವನೀಯೆ ಗುಣ ಸಂ
ಪನ್ನೆ ನಿನ್ನಯ ಭಕ್ತಿ ಪೂರ್ವಕಕೀಗ ಮೆಚ್ಚಿದೆವು |
ಎನ್ನುತಲಿ ಮುನ್ನಿನ ಶರೀರವ
ರನ್ನ ತೇಜಳಿದಾಗ ತೋರಿದ
ಅನ್ನೆ ಕಾರಿಯ ವೈರಿ ರಕ್ಷಿಸು ನಮ್ಮನನವತ ||೩೬||

ಬಿಸಜ ವೈರಿಯ ಧರಿಸಿದಾತನ
ಬಿಸಜ ಪೆತ್ತೈಯನಿಗೆ ಸಮ ವಾ
ದಸಮ ಶೌರ್ಯದ ವೀರನಹೆ ದಶಕಂಠ ಪೆಸರೆನಗೆ |
ವಸುಧೆಯೊಳು ಕಮಲಜ ಭವಾದ್ಯರು
ಯಸವ ಸುರರಿಂ ಮಿಗಿಲು ಎಂದಾ
ಅಸುರ ವೈರಿಯ ರಾಮ ರಕ್ಷಿಸು ನಮ್ಮನನವರತ ||೩೭||

ಯಾಕೆ ಬೇಡಿದೆ ಪೊಂ ಮೃಗವ ತಾ
ನ್ಯಾಕೆ ಬೇಡೆಂದಡೆಯು ಮೈದುನ
ನ್ಯಾಕೆ ನೂಕಿದೆ ಕಾನನಕೆ ಈ ಪಾಪಜನ್ಮವನು |
ಲೋಕಸನ್ನುತ ರಾಮ ಸಿರಿಲೋ
ಕೈಕ ವೀರನೆ ರಾಮ ಎಂದಾ
ಲೋಕಮಾತೆಯ ಪತಿ ರಕ್ಷಿಸು ನಮ್ಮನನವರತ ||೩೮||

ಇಂತೆನುತ ಶ್ರೀಕಾಂತಯೆನುತಲಿ
ಸಂತಸವನಳಿದಂತರದಿನಿಂ
ದಂತ ಸೀತಾಕಾಂತೆ ಮುಖವನು ನೋಡಿ ದಶಕಂಠ |
ಎಂತು ಮಾತೆಲೆ ತರುಣಿ ನಿನಗಿಂ
ನೆಂತು ಧೈರ್ಯವು ಸಾಕುಬಿಡೆನೆಂ 
ದಂತ ರಾನಣವೈರಿ ರಕ್ಷಿಸು ನಮ್ಮನನವರತ ||೩೯||

ಎಂದು ಕಬರಿಯ ಪಿಡಿದು ರಥದೊಳ
ಗಂದು ಸೀತೆಯನಿರಿಸಿ ಮುಂದಡಿ
ಯಿಂದ ಪಥವಿಡಿದಂದು ತೆರಳಲು ಕಂಡು ಜಾನಕಿಯು |
ಹಿಂದೆ ಕಂದನ ಕಾಯ್ದ ತೆರದಿ ಮು
ಕುಂದ ರಕ್ಷಿಸು ಮಾರಿಕೈಯಲಿ
ನೊಂದೆನೆಂದಳ ಪತಿಯೆ ರಕ್ಷಿಸು ನಮ್ಮನನವರತ ||೪೦||



ಎಳೆದಳಿರು ಫಲಪಣ್ಣುದಳಿರು 
ಗಳ್ನಳಿನಗಳ್ ಅಳಿವಕ್ಕಿ ನವಿಲು
ಗಳ್ ಗಿಳಿಯ ಮರಿಯನು ಗಿಡಗಪಿಡಿವೋಲ್ಸುಲಭವಾಯ್ತೆಂಬ |
ಎಳೆಯ ಗಿಡಮರಗಳಿಗೆ ಪೇಳಲು
ನಳಿನ ಲೋಚನ ಬಂದರೆಲ್ಲವ
ತಿಳಿಪುದೆಂದಳ ಪತಿಯೆ ರಕ್ಷಿಸು ನಮ್ಮನನವರತ ||೪೧||

ಮುಂದೆ ದಾರಿಯಾಳ್ರಾಮ ರಾಮೆಂ
ದೊಂದು ಶಬ್ದವ ಕೇಳಿ ಪಕ್ಷಿಯು
ಇಂದು ಎನ್ನನು ಗೆದ್ದು ರಥವರಿದೊಯ್ದ ಪೋಗೆನಲು |
ಸಂಧಿಸುತ ರಾವಣನು ಮೋಸದೊ
ಳಂದು ಪಕ್ಷಿಯ ಹೊಡದು ಪೊರಡಲು
ಅಂದು ಚಿಂತಿಪಳರಸ ರಕ್ಷಿಸು ನಮ್ಮನನವರತ ||೪೨||

ಸರಸ ಮುಖಿ ತನ್ನಯ ಸುವಸ್ತುಗ
ಳರಸ ಬಂದರೆ ಈವುದೆನುತ
ಲಿ ರವಿಕೆ ತುದಿಯಲಿ ಮುದುರಿ ಸುಗ್ರೀವಾದಿ ಮುಖ್ಯರಿಗೆ |
ಹರಸಿ ಸೀತೆಯು ಬಿಸುಡಲನಿತದಿ
ಮರುಕತದ ವಸ್ತುಗಳ ನೋಡು
ತ್ತಿರುವ ಕಪಿಗಳ ದೇವ ರಕ್ಷಿಸು ನಮ್ಮನನವರತ ||೪೩||

ಸರಸವೆಸೆಯುವಶೋಕವನದಲಿ
ಅರಸಿ ಸೀತೆಯನಿರಿಸೆ ಕಾವಲು
ವಿರಸಿ ಸೀತೆಯ ಹರುಷಗೊಳಿಸುವ ತೆರನ ನಿಶ್ಚೈಸಿ |
ಸರಸಮೆತ್ರಿಜಟೆಯವರ್ಗೆ ಜಾನಕಿ
ವರವ ತನಗೆಯು ವಿರಚಿಸೆಂದಾ
ದುರುಳನ್ವೈರಿಯೆ ರಾಮ ರಕ್ಷಿಸು ನಮ್ಮನನವರತ ||೪೪||

ಇತ್ತಲಾ ಮೃಗನೆಕ್ಕಿ ಕುಕ್ಕಿದ
ಪೊತ್ತು ಬರುತ ಸೌಮಿತ್ರಿ ತನಯನ
ಅರ್ಥಿಯಲಿ ಭರದಿಂದ ಮಿಗೆ ಕಣ್ಣೆತ್ತಿ ತಾ ನೋಡಿ |
ಮತ್ತೆ ಲಕ್ಷ್ಮಣ ಬರುವ ಬಗೆಯೇ
ನೆತ್ತು ಸೀತೆಯ ಬಿಟ್ಟು ಬಂದೆ ಸು
ಮಿತ್ರ ಹೇಳೆಂದಾತ ರಕ್ಷಿಸು ನಮ್ಮನನವರತ ||೪೫||



ಅಂದು ರಾಮನ ಚರಣಕಮಲಕೆ
ವಂದನೆಯ ವಿರಚಿಸುತ ಹೋಗುವು
ದೆಂದು ಜಾನಕಿ ಎಂದ ಮಾತುಗಳಿಂದ ವಿರಚಿಸಲು |
ಚಂದವಾಯಿತೆ ಬಂದುದೆಲವೊ
ಯಿಂದುಮುಖಿ ಏನಾದಳೆಂಬೀ 
ಸಂದೇಹದಿ ನುಡಿದಾತ ರಕ್ಷಿಸು ನಮ್ಮನನವರತ ||೪೬||

ಎನುತ ಅನುಜನ ಕೂಡೆ ಬಂದಾ
ವನಕೆ ಮೃಗವನು ತಂದೆನೆನುತಲಿ
ಮನೆಯ ಬಾಗಿಲೊಳ್ನಿಂದು ಕೂಗಲು ವನಿತೆ ಸಂಶಯವು |
ಘನವದಾಗಿದೆ ಅನುಜ ಏನೈ
ವನಿತೆ ಮನೆಯೊಳಗಿಲ್ಲವೆಂದೆ
ಅನುಜನೊಳು ನುಡಿದಾತ ರಕ್ಷಿಸು ನಮ್ಮನನವರತ ||೪೭||

ಅರ್ತಿ ತಪ್ಪಿತು ಲಕ್ಷ್ಮಣನೆ ಮ 
ತ್ತೆತ್ತ ಕಳುಹಿದೆ ಜಾನಕಿಯ ಪೇ
ಳ್ಕೃತ್ತಿವಾಸನ ಆಣೆಜೀವ ನಿರರ್ಥವಾದಪುದು |
ಚಿತ್ತವಿಸು ಸೌಮಿತ್ರಿ ಸೀತೆಯು
ವ್ಯರ್ಥವಾದಳು ಓರ್ವನಾದೆನೆ
ನುತ್ತ ಚಿಂತಿಸಿದಾತ ರಕ್ಷಿಸು ನಮ್ಮನನವರತ ||೪೮||

ಅಂಗನೆಯನೊಡಗೂಡಿ ಬಾಳ್ವುದು 
ಭಂಗವಾಯ್ತುಸೌಮಿತ್ರಿ ಹಾಯೆಂ
ದಂಗನೆಯ ನೆನನೆನದು ಹಂಬಲಿಸುತ್ತಲಾ |
ಕಂಗಳಲಿ ಉದುರಿಸುತ ಜಲವನು
ಹಿಂಗಿ ತನ್ನನು ಕಳವಳಿಸಿ ತಂ
ನ್ನಂಗನೆಯ ನೆನೆದಾತ ರಕ್ಷಿಸು ನಮ್ಮನನವರತ ||೪೯||

ಆತುರವು ಏತಕ್ಕೆ ಶ್ರೀರಘು
ಜಾತ ತಾಳಿಸು ಜನಕ ಜಾತೆಯು
ಯಾತರಿಂದೀ ರೀತಿಯಾಗಿಹಳೇನು ಕಾರಣವೂ |
ಖಾತಿ ತಳ್ಕಿಸು ಕರುಣವಿಡು ಭೂ
ಜಾತೆಯಲ್ಲಿದ್ದರೆ ಯುತಹೆನೆಂ
ದಾತ ನಗ್ರಜ ರಾಮ ರಕ್ಷಿಸು ನಮ್ಮನನವರತ ||೫೦||



ದಂಡಕಾರಣ್ಯದಲಿ ರಾಮನು
ಹೆಂಡತಿಯ ಹೋಗಾಡಿ ಪುನರಪಿ
ಭಂಡತನದಲಿ ಪೊರೆವ ಜೀವವನೆಂಬ ಮಾತುಗಳ |
ಕಂಡ ಕಂಡವರೆಲ್ಲ ನುಡಿವರು
ಲಂಡತನ ಬಾಳುವೆಯ ಜೀವನ
ದಂಡಿಸುವೆ ಎಂದಾತ ರಕ್ಷಿಸು ನಮ್ಮನನವರತ ||೫೧||

ಅಂದು ಮೂರ್ಛೆಯೊಳ್ಮಲಗಿ ತಕ್ಷಣ
ತಂದೆನಿದೆಕೋ ಹೊಮ್ಮರಿಯನೆಂ
ದ್ಹಂಬಲಿಸಿ ಹಾ ಸೀತೆ ಹಾ ಯೆಂದೆಂಬ ರಾಘವನ|
ಅಂದು ಲಕ್ಷ್ಮಣ ನೋಡಿ ತಳ್ಕಿಸು
ತೆಂದ ನೀನಾರೆಂದು ತಿಳಿಯೆಂ
ತೆಂದ ನಗ್ರಜ ರಾಮ ರಕ್ಷಿಸು ನಮ್ಮನನವರತ ||೫೨||

ತಮ್ಮ ಲಕ್ಷ್ಮಣ ತರುಣಿ ಜಾನಕಿ
ನಿರ್ಮಳದೊಳೆಲ್ಲಿಹಳೊ ಎಂಬೀ
ಜೊಮ್ಮು ಹಮ್ಮುತನೆಮ್ಬುದಿಲ್ಲವುಯೆಂದು ರಘುಪತಿಯು |
ತಮ್ಮನಂ ವಡಗೊಂಡು ತರುಣಿಯ
ಹಂಬಲಿಸುತಡವಿಯೊಳು ಗಿಡಗಳ
ಗಮ್ಮನೆಯು ಕೇಳ್ದಾತ ರಕ್ಷಿಸು ನಮ್ಮನನವರತ ||೫೩||

ಮಂದಗಮನೆ ಯನರಸಿ ಬರುತಿರ
ಲೊಂದು ಪಕ್ಷಿಯ ಕಂಡು ಬೆಸಗೊಳ
ಲಂದು ರಾವಣನಿಂದನೊಂದೆನು ಸತಿಯ ಮೊರೆಯಿಡಲು |
ಬಂದು ಪಥವನು ತಡೆಯಲೆನ್ನನು
ಕೊಂದು ಪೋದನು ಮಾಯೆಯಲಿ ಇನಿ
ತೆಂದವನ ಕಂಡಾತ ರಕ್ಷಿಸು ನಮ್ಮನನವರತ ||೫೪||

ತರುಣಿ ಇರವನು ಕೇಳಿ ಈರ್ವರು
ಕರಕರಗಿ ಮರಮರುಗಿ ಜಾನಕಿ
ಯೆರವೆಯಾದಳೆ ಹಾ ಎನುತ ಹಮೈಸಿ ಚಿಂತಿಸುತ |
ಸರಸಿಜಾಕ್ಷಿಯನೀಗಿದೆವು ವಿಧಿ
ಬರಹ ಮೀರಲು ಆರಳವುಯೆಂ
ದೊರಲಿ ಪೊರಳಿದ ರಾಮ ರಕ್ಷಿಸು ನಮ್ಮನನವರತ ||೫೫||


ಮಂದರಾದ್ರಿ ಸಮಾನ ಪಕ್ಷಿಗೆ
ಚಂದದಿಂದಲಿ ಮೋಕ್ಷವಿತ್ತು ಕ
ಬಂಧನನು ಸಂಹರಿಸಿ ಪಥವಿಡಿದಂಬುಜಾಕ್ಷನನು |
ಅಂದು ಶಬರಿಯು ಕಾಣುತಾಕ್ಷಣ
ಮಂದಣಾಗಮ ತಿಳುಹಿ ತೆರಳಿ ಕಿ
ಷ್ಕಿಂದವನು ಕಂಡಾತ ರಕ್ಷಿಸು ನಮ್ಮ ನನವರತ ||೫೬||

ದೂರದಲಿ ಕಿಷ್ಕಿಂದ ನಗರಿಯ
ಚಾರುಶೀಲರು ನೋಡಿ ಹರ ಹರ
ಯಾರಿಗಾದರು ಸಾಧ್ಯವೇ ಈ ರಾಜ ರಾಜರೊಳು |
ಮಾರಹರ ಬಲ್ಲೆನುತ ಶ್ರೀರಘು
ವೀರ ತಮ್ಮಗೆ ನಾರಿಯನು ನೀ
ತೋರು ಎಂದಾ ರಾಮ ರಕ್ಷಿಸು ನಮ್ಮನನವರತ ||೫೭||

ದೂರದಲಿ ಬರಿತಿರ್ದರೀರ್ವರು
ದಾರಿಯಲಿ ಸುಗ್ರೀವನೀಕ್ಷಿಸಿ
ಬಾರೊ ಆಂಜನೇಯತನಯ ನೋಡಿದರ‍್ಯಾರು ಎಂದೆನಲು |
ಸಾರ ಹೃದಯನು ಸತ್ಯ ಶೀಲನು
ಧೀರ ವಾಯುಕುಮಾರ ಬರುವದ
ನಾರೆ ಈಕ್ಷಿಸಿದಾತ ರಕ್ಷಿಸು ನಮ್ಮನನವರತ ||೫೮||

ಬಂದು ರಾಮನ ಚರಣ ಕಮಲಕೆ
ವಂದನೆಯ ವಿರಚಿಸುತ ನೀವ್ಯಾ
ರೆಂದು ಕೇಳಲು ಯಿಂದಿರಾವರನವಗೆ ಪೇಳಿದನು |
ಬಂದಕಾರ‍್ಯಗಳೆಲ್ಲ ಪೇಳ್ವೆವು
ಕಂದ ನೀ ನೆಲ್ಲಿಂದ ಬಂದೆಯೊ
ಇಂದು ಪೆಸರೇನೆಂದೆ ರಕ್ಷಿಸು ನಮ್ಮನನವರತ ||೫೯||

ಸರಸಿಜಾಕ್ಷನೆ ಚಿತ್ತವಿಸು ಈ
ಪುರದರಸು ಸುಗ್ರೀವ ನಿಮ್ಮಯ
ಬರವ ಮಿಗೆ ಕಾಣುತಲೆ ಯೆನಗನವರತ ಅಪ್ಪಣೆಯ |
ಅರುಹಿಸಿದನದರಿಂದ ಬಂದೆನು
ಅರಿವುದೆನಪೆಸರಾಂಜನೇಯನು
ಕರುಣೆಯನಲ್ಲರುಪಿಸಿದೆ ರಕ್ಷಿಸು ನಮ್ಮನನವರತ ||೬೦||


ವಸುಧೆಯೊಳು ದಶರಥನರಸಿ ಕೌಸಲ್ಯೆ
ಸುತ ರಘುರಾಮನೆಂಬೀ
ಹೆಸರು ತನಗಿದು ಶಶಿಯ ಹೋಲ್ವಿಕೆಗೆಸೆವ ಲಕ್ಷ್ಮಣನು |
ವಸುಮತಿಯಸುತೆ ಸೀತೆಯನು ಕ
ದ್ದಸುರ ಕಳವಿನಲಿ ಪೊಯ್ದೆ ಬಂದೆವು
ವ್ಯಸನದಲಿ ಎಂದಾತ ರಕ್ಷಿಸು ನಮ್ಮನನವರತ ||೬೧||

ಅರಸಿ ಸೀತೆಯನರಸಿ ಬಂದೆವು
ಅರಿತುದಿಲ್ಲವು ಅರಿಯ ಪುರವನು
ಗುರುತ ಪೇಳ್ವದೆ ಪರಮ ಉಪಕರವಿರುವುದೆಂದೆನಲು |
ಸರಸಿಜಾಕ್ಷನ ನೋಡಿ ಹನುಮನು
ನರರು ಇವರಲ್ಲೆನುತ ಬಾಗಲು
ನಿರದೆ ಮನ್ನಿಸಿದಾತ ರಕ್ಷಿಸು ನಮ್ಮನನವರತ ||೬೨||

ಕರುಣವಾರಿಧಿ ಚಿತ್ತವಿಸು ಈ
ಪುರದರಸು ಸುಗ್ರೀವನೆಂಬನ
ಹೊರೆಗೆ ತೆರಳರೆ ನಿಮ್ಮಯ ಜಾನಕಿಯಿರವದೆಲ್ಲವನು |
ವಿರಚಿಸಿವನೆಂದೆನುತ ಅರುಹಲು
ತ್ವರಿತದಿಂ ಸುಗ್ರೀವ ಸಖ್ಯವ
ಬೆರಸಿದಾತನೆ ರಾಮ ರಕ್ಷಿಸು ನಮ್ಮನನವರತ ||೬೩||

ಸಂಭ್ರಮದಿ ನಾ ನಿಮ್ಮ ಚರಣವ
ನಂಬಿದೆನು ಎನಲಾಗ ಹರಿಸುತ
ಅಂಬುಜಾಕ್ಷನು ಕಂಡು ತನ್ನಯ ನಂಬುಗೆಯನರುಹಿ |
ನಂಬು ನೀ ಭಯ ಬ್ಯಾಡ ವಾಲಿಯು
ಎಂಬುವನ ಸಂಹರಿಸೆ ನಿರ್ನಯ
ವೆಂದ ಶ್ರೀರಘುರಾಮ ರಕ್ಷಿಸು ನಮ್ಮನನವರತ ||೬೪||

ತಾಳತರುವನು ಮುರಿದು ಸಮನಸ
ಪಾಲನೂರಿಗೆ ಕಳುಹಿ ವಾಲಿಯ
ಲೀಲೆಯಲಿ ಕಿಷ್ಕಿಂದ ಪಟ್ಟವ ಕಟ್ಟರವಿಜಯಂಗೆ |
ಬಾಲ ಲಕ್ಷ್ಮಣನೈದಿ ಕಪಿಕುಲ
ಪಾಲ ಕನಕರ ತರಲು ಸೀತಾ
ಬಾಲೆ ಕುರುಹನು ಪೇಳ್ದ ರಕ್ಷಿಸು ನಮ್ಮನನವರತ ||೬೫||


ಶರಧಿದಾಂಟುತಲಾಗ ಹನುಮ
ಉರುತರದ ಲಂಕಿಣಿಯ ಶಿಕ್ಷಿಸಿ 
ಹರುಷದಿಂ ಜಾನಕಿಯರಸುತ ಆಂಜನೇಯತನಯಾ |
ತರುಣಿ ಸೀತೆಯ ಕಂಡು ವಂದನೆ
ವಿರಚಿಸುತ ಉಂಗುರವನಿತ್ತಾ
ಹರಿಯಸುತನಿಂಗೊಡೆಯ ರಕ್ಷಿಸು ನಮ್ಮನನವರತ ||೬೬||

ಇರಲಶೋಕಾವನಕೆ ಕಾವಲು
ವೆರಸಿ ಹರಿ ಮರ್ಧಿಸಲು ಮಿಕ್ಕ
ವರರುಹೆ ದಶಶಿರ ತಮ್ಮವರ ಕರತರಸಿ ನೇಮಿಸಿದ |
ಭರದಿ ಸೀತೆಯನರಸ ಬಂದವ
ನಿರದೆ ಶೋಕಾವನವ ಕೆಡಿಸಿದ
ಪರಿಯ ಕೇಳ್ದನರಿಪುವೆ ರಕ್ಷಿಸು ನಮ್ಮನನವರತ ||೬೭||

ಎಂದ ಮಾತಿಗೆ ಮಂದಿ ಕುದುರೆಯು
ಇಂದು ಧರಸುತ ಸಹಿತ ರಘುವರ
ನಿಂದ ಬಂಧನ ತಂದು ಹೆಡಮುಡಿಗಟ್ಟಿ ನಿಂದಿಸಿರಿ |
ಇಂದು ನಿನ್ನಯ ಪೆಸರದೇನೆ
ಲ್ಲಿಂದ ಬಂದೆಯೊ ಕಾರ‍್ಯವಾವುದು
ಎಂದನ್ನೊರೆಯೆ ರಾಮ ರಕ್ಷಿಸು ನಮ್ಮನನವರತ ||೬೮||

ಇಷ್ಟು ಪರಿಯಲಿ ಕೇಳಿ ಇವಗೆಯು
ಕಟ್ಟಿ ಕೂಡಿಸಿ ಕಷ್ಟಪಡಿಸುವ
ದೆಷ್ಟುವಳ್ಳಿತು ಬ್ಯಾಡ ಇದರಿಂದೆಷ್ಟು ಬಂದರೆಯೂ |
ದಿಟ್ಟ ಶ್ರೀರಘುವರ ನಿರುತಿಹ
ನಿಷ್ಟುರವು ಬೇಡಿವನೊಳೆಂದಾ
ನಿಷ್ಟನೊಡೆಯನೆ ರಾಮ ರಕ್ಷಿಸು ನಮ್ಮನನವರಸ ||೬೯||

ಮುಚ್ಚು ಮರೆಯಾಕಿವನನೀಕ್ಷಣ
ಕೊಚ್ಚಿರೋ ತನು ಕರುಳ್ಗಳೆಲ್ಲವ
ಬಿಚ್ಚಿರೊ ಬಲು ಊಚತನುವಿನ ಹೆಚ್ಚು ಮಾತಿನವ |
ಹುಚ್ಚುತನುವನು ಬಿಡಿಸಿ ಬಾಲಕೆ
ಹಚ್ಚಿರಗ್ನಿಯನೆಂದನ್ವೈರಿಯ
ಅಚ್ಚುತನೆ ಶ್ರೀರಾಮ ರಕ್ಷಿಸು ನಮ್ಮನನವರತ ||೭೦||


ಅರಸನಪ್ಪಣೆಯಾಗಲಾಕ್ಷಣ
ಪರಮ ಶೌರ್ಯದ ವೀರರೆಲ್ಲರು
ಬರಸಿಡಿಲ ತೆರನಂತೆ ಆರ್ಭಟಸೆರಗಿ ಕೂಗುತ್ತಾ |
ಅರಿಭಟನ ಬಾಲಕ್ಕೆ ವಸ್ತ್ರವ
ನಿರಿಸಿ ಎಂಣೆಯ ನೆರದು ಅಗ್ನಿಯೋ
ಳ್ಮರಸಿದಾತನ ವೈರಿ ರಕ್ಷಿಸು ನಮ್ಮನನವರತ ||೭೧||

ಕಿರಕಿರನೆ ಕೂಗುತ್ತ ಅರಚುತ
ತರುಣಿಜಗೆವಿನುತತ್ವವೆನಿಸುವ
ಅರಿಯದನನಿಕ್ಷಿಸುತಲಾಂಗೂಲವನು ಬೆಸಗೊಳುತ |
ಪರಿ ಪರಿಯೊಳೆಲ್ಲರನು ಓಡಿಸಿ
ಇರದೆ ದಶಕಂಧರನ ಮುಖ ಕುರಿ
ಕೆರಗಿಸಿದನಿಂಗೊಡೆಯ ರಕ್ಷಿಸು ನಮ್ಮನನವರತ ||೭೨||

ತರುಣಿ ಸೀತೆಯು ಬೆದರ‍್ವಳೆನುತಲಿ
ಯೆರಗಶೋಕಾವನಕೆ ಬೇಗನೇ
ಪರಮ ಪಾತೀವ್ರತೆಯ ಚರಣಕೆ ತನ್ನ ಪರಿಣಾಮ |
ಅರುಹಲಾಕ್ಷಣ ತರುಣಿ ಹನುಮಗೆ
ತರಣಿಜರ ಭರದಿಂದೆಂದಿಗೈ ಕರ
ಕರುವೆಂದಳ ಪತಿಯೆ ರಕ್ಷಿಸು ನಮನನವರತ ||೭೩||

ಮಾಡಬೇಡನು ಮಾನ ಸುಗ್ರೀವಾದಿ ಮುಖ್ಯರು
ಕೂಡಿ ಕರಿಸಿದರಾಡಲ್ಯಾಕದ 
ನೋಡು ತಾಯೇ ನೀಡು ಅಪ್ಪಣೆಯ |
ಗಾಢದಲಿ ಕರತರುವೆನುನುತಲೆ
ಚೂಡರತ್ನವ ತಂದುಕೊಡಲಾ
ನೋಡಿ ಹರುಷಿತನಾದೆ ರಕ್ಷಿಸು ನಮ್ಮನನವರತ ||೭೪||

ತೆರಳಿ ಶರಧಿಯ ಬಳಿಯೊಳಿರುತಿರೆ
ಲರಿಯ ಅನುಜನು ಬಂದು ವಂದನೆ
ವಿರಚಿಸಲು ಲಂಕಾಧಿರಾಜ್ಯದಸ್ಥರವೆದವಿಯಿತ್ತು |
ಶರಧಿ ರಾಜನ ಸ್ಮರಣೆ ವಿರಚಿಸೆ
ಶರಧಿ ಜಡಮತಿಯಿಂದಲಿರೆ ತೊಡೆ
ಶರವ ನಮಿಸಲು ಪೊರದೆ ರಕ್ಷಿಸು ನಮ್ಮನನವರತ ||೭೫||


ಶರಧಿಸೇತುವೆನಳನ ಕೈಯಿಂದುರು
ತರದಿ ಬಂಧಿಸುತಲಾಕ್ಷಣ
ಹರಿಯ ಸುತನನು ಕರದು ಅರಿ ಇಹಪುರಕೆ ಮುತ್ತಿಗೆ |
ಇರದೆ ಸಂಧಿಯ ಬೆಳೆಸಬೇಕಿದು
ಥರವು ರಾಜರ ನೀತಿಯೆಂದಾ
ಪರಮಪುರುಷನೆ ರಾಮ ರಕ್ಷಿಸು ನಮ್ಮನನವರತ ||೭೬||

ಇಂದ್ರಸುತ ನಂದನನ ಕರೆಯಲು
ವಂದನೆಯ ವಿರಚಿಸುತ ಶ್ರೀರಘು
ನಂದನನ ಸಂನಿಧಿಯಲ್ನಿಲ್ಲುತ ಬಂದೆನೆಂದೆನಲು |
ವಂದು ಸಂಧಿಯ ಪೇಳು ಕೇಳಿರಿ
ನಂದನರ ಸಹನೆ ಮನಕಾಣಿಪ
ನೆಂದು ಪೇಳಿದ ರಾಮ ರಕ್ಷಿಸು ನಮ್ಮನನವರತ ||೭೭||


ಹರುಷದಲಿ ಹರಿರಾಮಗತಿಯಂ
ದೆರಗಿ ಲಂಕಾಪುರಕೆ ಬರುತಿರೆ 
ಹರ ಹರೆನುತಲೆ ಪುರದೊಳಿರುವರು ಸರಿಯೆ ಕದನಗಳ |
ಸರಕು ಮಾಡದೆ ಅರಿಯು ರಾವಣ
ನಿರುವ ಬಳಿ ಕಪಿ ಬರಲು ಬಂತೆ
ಮರಳಿ ಎಂದನ ವೈರಿ ರಕ್ಷಿಸು ನಮ್ಮನನವರತ ||೭೮||

ಅರಸು ದಶಶಿರನಿರುವ ಪರಿಯನು
ವರ ಪ್ರಹಸ್ತನೆ ತೋರು ತನಗೆಂ
ನೆರೆಯನಪ್ಪಣೆ ಅರಿವುದಾದರೆ ಉಸುರಿ ಪೋಗುವೆನು |
ತ್ವರಿಯವೆನಗೆಯು  ತೆರಳಿ ಪೋಗುವ
ಪರಿಯ ಬೇಗದಿ ವಿರಚಿಸುವುದೆಂ
ದೊರದ ನೆರೆಯನೆ ರಾಮ ರಕ್ಷಿಸು ನಮ್ಮನನವರತ ||೭೯||

ಹೆಮ್ಮೆಯಿಂದಲಿ ನಿಮ್ಮ ತಂದೆಯ
ಹಮ್ಮು ಮುರಿದಿಹ ಮರ್ಮವರಿಯುತ
ನೆಮ್ಮಿನೀನಿಹುದುಹಿತವೇ ಕೇಳೆಂಮ ನಂಬುವುದು |
ನಿಮ್ಮರಸನಿಂದಧಿಕ ಸತ್ವದೊ
ಳೆಮ್ಮರಸನಂಬೆಮ್ಮನೆನೆ ಮುಳಿ
ದೊಮ್ಮನಂಗದನೆರೆಯರ ರಕ್ಷಿಸು ನಮ್ಮನನವರತ ||೮೦||


ನಮ್ಮ ಪಿತನೋಪಾದಿ ಈಗಲೂ
ನಿಮ್ಮರಸಗೊದಗಿಹುದು ತಪ್ಪದು
ನೆಮ್ಮದಿಯೊಳಿರುವಂತ ಪ್ರಾಪ್ತಿಯ ಫಲವು ತನಗಿಲ್ಲ |
ತಮ್ಮನಸು ದಶಶಿರನದೆಂಬುವ
ಕರ್ಮ ಖೂಳನ ಪರಿಯ ತೋರಿಂ
ದೊಮ್ಮೆಯಂದನ ಯೆರೆಯರ ರಕ್ಷಿಸು ನಮ್ಮನನವರತ ||೮೧||

ಪುಂಡುಮಾತ್ಯಾಕೆಲವೊ ತ್ರೈಜಗ
ದಂಡರಾಜರ ಪುಂಡ ದಶಶಿರ
ಗಂಡ ಬಿರುದಿನ ಪೆಸರ ಭಟನನು ಕಂಡ್ಯ ನೀನೆನಲು |
ಮಂಡೆಯನು ತೂಗ್ಯಾಡುತಹುದು ಪ್ರ
ಚಂಡ ಬರುತಿಹ ನಿನ್ನ ಮರ್ಧಿಪ
ಗಂಡನೆಂದನ ಯೆರೆಯ ರಕ್ಷಿಸು ನಮ್ಮನನವರತ ||೮೨||

ನಳಿನಲೋಚನ ರಾಮಚಂದ್ರಗೆ
ತಳುವದಲೆ ನಾನೇನ ಪೇಳ್ವುದು
ಒಳಗೆ ಸಂಧಿಗೆ ಹೊರಗೊ ಪೇಳೆಲವೆಲವೊ ಯೆಂದೆನಲು |
ಭಳಿರೆ ಹುಲು ರಾಮನೊಲು ಸಂಧಿಯ
ಬೆಳಸು ಎನೆ ಉಳಿವಿಲ್ಲ ನಿನಗಿಂ 
ನಳಿವೆಯೆಂದನ ವೈರಿ ರಕ್ಷಿಸು ನಮ್ಮನನವರತ ||೮೩||

ಮಂದಮತಿ ನಿನ್ನನುಜ ರಾಮನ 
ಹೊಂದಿಯಿಹ ನೀನೀಗಲಾದರು
ಬಂದಯೆನ್ನಯ ಹಿಂದೆನಿಂದಾ ಅಂಬುಜಾಕ್ಷನಿಗೆ |
ವಂದನೆಯ ವಿರಚಿತ ಚರಣವ
ಹೊಂದೆನಲು ಕಡು ರೋಷ ತಾಳ್ದಾ
ಮಂದ ಭಾಗ್ಯನರಿಪುದೆ ರಕ್ಷಿಸು ನಮ್ಮನನವರತ ||೮೪||

ಯಾಕೆಲವೊ ಬಹು ಕೋಪ ರಾವಣ
ಸಾಕು ನಿಲ್ಲಿಸು ಶೌರ‍್ಯ ತಾಳಿಸು
ಆ ಕಮಲನೇತ್ರನಿಗೆ ನೀ ಸರುಸಾಟಿಯೇನಲವೊ |
ಪಾಕಶಾಸನ ಪದ್ಮಜಾದಿನಿ
ನಾಕಿಧರ ಧ್ಯಾನಿಪರು ಎಂದಾ
ಲೋಕವೀರನ ಒಡೆಯ ರಕ್ಷಿಸು ನಮ್ಮನನವರತ ||೮೫||


ಬಗೆಯ ದಿವಗೆ ಮಗೊಲೆಯನಿಕ್ಕೆನೆ
ತೆಗೆದು ಕರವಾಳಗಳ ಝಳಪಿಸೆ
ಧಗ ಧಗೆನುತಲೆ ರೋಷವೇಷವ ತಾಳ್ದು ಪಟುಭಟರು |
ತೆಗೆದುಕೋ ಮರಮುಗಲದಿಂದುರ
ಬಗಿಯನುತ ತಿವಿಯಲ್ಕೆ ರೋಷದಿ
ನೆಗೆದು ಹೊಯಿದನವಡೆಯ ರಕ್ಷಿಸು ನಮ್ಮನನವರತ ||೮೬||

ಲಟಕಟಿಸಿ ಬಾಲದಲಿ ಅಂಗದ
ಚಟುಲತರ ಭಟರುಗಳ ಮರ್ಧಿಸಿ
ನಿಟಿಲ ಧರಸಖನಿರುವ ತಾವಿಗೆ ಬಿಸುಟನವರುಗಳ |
ಸುಟುತರದ ಸಾಹಸಿಯು ರೋಷದಿ
ಭಟರಸೀಳ್ಗಳ ಬಿಸುಡಲಾಗ
ಕ್ಕಟಿಯನುತ ಚಿಂತಿಸಿದೆ ರಕ್ಷಿಸು ನಮ್ಮನನವರತ ||೮೭||

ಲಂಕಪುರದದಧಿಪತಿಯ ಯಿರವನು
ಪಂಕಜಾಕ್ಷನು ಕೇಳಿ ಹರ ಹರ
ಬಿಂಕತನವನು ಬಿಡನು ಲಂಕೆಗೆ ಪೊಕ್ಕು ರಕ್ಕಸನ |
ಕೊಂಕುತನವನು ಬಿಡಿಸಿ ಯಮಪುರ
ಲಂಕೆಯೊಳು ಇರಿಸುವೆನು ಎಂದನಿ
ಶ್ಯಂಕ ಶ್ರೀರಘುರಾಮ ರಕ್ಷಿಸು ನಮ್ಮನನವರತ ||೮೮||

ಎಂದು ರಘುವರ ನುಡಿಯಲಾಕ್ಷಣ
ದರಿಧಣರ್ಧಣರೆನುತಜಯರವದಿಂದ
ಬಂದಾ ಲಂಕೆಲಗ್ಗೆಯೊಳ್ನಿಂದು ಕಪಿದಳವು |
ಸಂದಣಿಸುತುರವಣಿಸಿ ರಕ್ಕಸ
ವೃಂದವನು ಕೊಂದಾರ್ಭಟಿಸೆ ಹರ
ನಂದನನೊಳೆಂದಾತ ರಕ್ಷಿಸು ನಮ್ಮನನವರತ ||೮೯||

ಆರತಿರೆ ಹರಿಜನೆ ಅರಿಯವರು ಮು
ತ್ತಿರುವ ಬಂಧುರಧಿರವ ನೋಡಿ
ದ್ಯಧರವ ಹರಿವ ಜಲಂಗಳೀಪರಿ ಹರ ಮಹಾದೇವ |
ನರ ವಿಭೀಷಣನಿಂದ ಈ ಪುರ
ದಿರವು ತಿಳಿಯಲಿ ಬೇಕು ಎಂದಾ
ಪರಿಯ ಕೇಳಿದ ರಾಮ ರಕ್ಷಿಸು ನಮ್ಮನನವರತ ||೯೦||


ಕರಸಿದನು ಹರಿಸುತನು ಹನುಮನ
ಉರುತರದ ಅಂಗದನಗಮಯನ
ಪರಮಸಾಹಸ ನಳನನೀಲನವರಸು ಜಾಂಬವನ |
ಕರದು ಮರಿಯಾದೆಗಳ ವಿರಚಿಸಿ
ಅರಿಕಟಕ ಸವರೆಂದು ಪೇಳಿದ
ನೆರೆಯ ಶ್ರೀರಘುರಾಮ ರಕ್ಷಿಸು ನಮ್ಮನನವರತ ||೯೧||

ಉರುತರದ ಕಪಿವೀರರೆಲ್ಲರು
ಕರದಿ ಹೆಮ್ಮರ ಪಿಡಿದು ಭಳಿರೆನು
ತುರವಣಿಸಿ ರಕ್ಕಸರ ಶಿರಗಳನಿರದೆ ತಲೆಗಡಿಯೆ |
ವರನರಾಂತಕರಗ್ನಿವರ್ನರು
ಸರಿಯೆ ಯಮಪುರಕೆನಲು ಚಿಂತಿಪ
ದುರುಳನ್ವೈರಿಯೆ ರಾಮ ರಕ್ಷಿಸು ನಮ್ಮನನವರತ ||೯೨||

ಹರನವೀರ್ಯನ ಹರಿಯ ಅನುಜನು
ಪರಿದು ಬಿಸುಟನು ಧುರದ ಮುಖದಲಿ
ಪೊರೆವರಿಲ್ಲೆಂದೆನುತಾರಾಗಳೆ ಬೆದರೆ ಪುರಜನರು |
ಪರಮಶೌರ್ಯದ ಕುಂಭಕರ್ಣನು
ತೆರಳೆ ಯಮಪುರಕೆನಲು ದು:ಖಿಪೆ
ನರಿಯೆ ಶ್ರೀರಘುರಾಮ ರಕ್ಷಿಸು ನಮ್ಮನನವರತ ||೯೩||

ಪುರದೊಳಗೆ ಡಂಗುರವದಾಗಲಿ
ನರನದೆಂಬನ ಧುರಧಿ ಯಮಪುರಿ
ಗೆರಗಿಸಿದಡಲ್ಲದೆಯು ಇವನಮಗೆರಗುವವನಲ್ಲ |
ಧರೆಯವನಮಗಾಟ ಸೇವೆಯು
ತೆರಳುವುದು ಯನಲಾಗ ಅಪ್ಪಣೆ
ಧರಿಸಿ ಹೊರಟರರರಿಯೆ ರಕ್ಷಿಸು ನಮ್ಮನನವರತ ||೯೪||


ಹೊಡೆವತಮ್ಮಟ ಭೇರಿ ಜಯರವ
ಝಡಿಯೆ ಬತ್ತೀಸಾಯುಧಂಗಳ
ಪಿಡಿದು ಬರುತಿರೆ ಭಟರುಗಳು ಪೊಗಳಿಕೆಯ ಘೋಷದಲಿ |
ಕಡಿದು ಬಿಸುಡುವೆವೆನುತಲಾಗ
ಕ್ಕಡದ ಶೌರ್ಯವನುಡಿದು ಬರೆ ಧನು
ವಿಡಿದು ನಿಂದಾ ರಾಮ ರಕ್ಷಿಸು ನಮ್ಮನನವರತ ||೯೫||


ಚಂದರಾವಣ ಬಂದು ರಣದೊಳು
ಭಂಡು ಮನುಜನೇ ಕೇಳು ನಿನ್ನಯ
ಪುಂಡುಗಾರಿಕೆ ಬಿಡಿಸಿ ಈಕ್ಷಣ ದಂಡಿಸುವೆನೆನಲು |
ಚಂಡಕರ ಕುಲಜಾತನಾ ಕೋ 
ದಂಡಯುತನಿಂದುರ್ರಣದಲಿ
ಭಂಡನೆನುತಲಿ ಜರದೆ ರಕ್ಷಿಸು ನಮ್ಮನನವರತ ||೯೬||

ಎಲವೆಲವೊ ದಶಕಂಠ ನಿನ್ನಯ
ತಲೆಯನರಿದೆಮಪುರಿಕೆ ಕಳುಹಿಸಿ
ಜಲಜನೇತ್ರೆಯ ಕೊಂಡುಪೋಪೆನು ನಿಲ್ಲು ರಣಕೆನುತ |
ತಳುವದಲಿ ಶರವೆಸೆಯಲರಿತಾ
ಬಲುಹಿನಿಂದಿರೆ ಕಂಡು ಚಿಂತಿಪಸು
ಲಲಿತಾಂಗನೆ ರಾಮ ರಕ್ಷಿಸು ನಮ್ಮನನವರತ ||೯೭||

ಪರಮಶೌರ‍್ಯದ ರಾವಣನು
ಹರಿಯೊಡನೆ ಸೆಣಸುತ್ತಿರಲು ರಘು
ವರ ಅರಿಯನುಜನನ ಕೇಳೆ ಸಾಯದ ತೆರವದೇನೆನಲು |
ಹರಿಯೆ ಲಾಲಿಸು ಅರಿಯ ವಕ್ಷದೊ
ಳಿರುವದೆಮ್ಮವವಗೆ ಎನಲು
ಶರವಚ್ಚಾರಾಮ ರಕ್ಷಿಸು ನಮ್ಮನನವರತ ||೯೮||

ಚುಚಿ ಹೃದಯವ ಕೊಚ್ಚಿ ಶಿರಗಳಿ
ಗಚ್ಚಿ ಬಿಸುಡಲು ನಿಚ್ಚಳಾಯಿತು
ಮೆಚ್ಚಿ ಪೂಮಳೆಗರೆಯೆ ಸುರರುಗಚ್ಚುತನ ಮೇಲೆ |
ಸಚ್ಚರಾಚರಕಾದಿ ಮಹಿಮನ
ಮುಚ್ಚಟಿಯನೀಕ್ಷಿಸಲು ರಾಕ್ಷಸ
ಗ್ಹೆಚ್ಚು ಪದವಿಯನಿತ್ತೆ ರಕ್ಷಿಸು ನಮ್ಮನನವರತ ||೯೯||

ಅಂದು ಕರ್ಮ ತ್ರಯಗಳೆಲ್ಲವ
ಚಂದದಿಂ ತೀರಿಸುತಾಗಲೆ
ವಂದನೆಯ ವಿರಚಿಸುತ ಶ್ರೀರಘುನಂದನನೆ ಬೇಗ |
ಅಂದು ಸಂಭ್ರಮದಿಂ ವಿಭೀಷಣ
ನಿಂದು ಭೂ ನಂದನೆಯ ಕರತಹೆ
ನೆಂದೆನಲು ಪೇಳ್ದಾತ ರಕ್ಷಿಸು ನಮ್ಮನನವತ ||೧೦೦||


ಸಾರಸಾಕ್ಷಿಯ ಬೇಗ ಕರತಂ
ದ್ದರುಷದಲಿ ವಪ್ಪಿಸುವುದೆನುತಲಿ
ಮರುಗಿ ಮತ್ತೊಂದೆಣಿಸಿ ಆಗಲೆ ತರುಣಿಯನು ಬೇಗ |
ಪರಿಕಿಸುತ ಅಗ್ನಿ ಪ್ರವೇಶದೊ
ಳ್ತರುಣಿಯನು ಕರದಾಗ ಸತ್ಯದ
ಶರಧಿಯೆನಿಸಿದ ರಾಮ ರಕ್ಷಿಸು ನಮ್ಮನನವರತ ||೧೦೧||

ಅಂದ ಸೀತೆಯು ಸಹಿತ ರಘುಕುಲ
ನಂದನರು ಸಂಭ್ರಮದಿ ಲಂಕೆಯು
ಚಂದದಿಂದಲಿ ಶರಣನಿಗೆ ಸ್ಥಿರವೆಂದು ಅಲ್ಲಿಂದ |
ಇಂದುಮುಖಿ ಲಕ್ಷ್ಮಣನು ಕಪಿಕುಲ
ವೃಂದಸೇನೆ ವಿಭೀಷಣನು ಸಹಿ 
ತಂದದಿಂದಲಿ ಪೊರಟ ರಕ್ಷಿಸು ನಮ್ಮನನವರತ ||೧೦೨||

ಅಂದದಿಂ ರಘುರಾಮ ಸೇನಾ
ವೃಂದ ಸಹಿತಲಿನಿಂದ ನಂದಿಯೊ
ಳ್ಸಂಭ್ರಮದಿ ಭರತನನು ವಡಗೊಂಡಂದು  ಹರುಷದಲಿ |
ಇಂದಿರಾರಮಣಾಂತರಂಗನು
ಚಂದದಿಂ ಶತ್ರುಘ್ನರೊಡನಾ
ನಂದದಿಂ ಬಂದಾತ ರಕ್ಷಿಸು ನಮ್ಮನನವರತ ||೧೦೩||

ಹರನು ಇಂದ್ರನು ಅಜನು ಹರುಷದಿ
ಹರಿಯ ಸನ್ನಿಧಿಗೈಯಲಾಕ್ಷಣ
ಉರುತರದ ಸನ್ಮಾನ ಮಾನವವಿರಚಿಸಿದರಾಗ |
ತರಣಿಜಗೆ ಪಟ್ಟಾಭಿಷೇಕವ
ಸುರರು ದಿಕ್ಪಾಲಕರು ವಿರಚಿಸೆ
ಹರುಷದಿಂದಿರ್ದಾತ ರಕ್ಷಿಸು ನಮ್ಮನನವರತ ||೧೦೪||

ಹೊಡೆವ ತಮ್ಮಟ ಭೇರಿ ರವದಿಂ
ಪಿಡಿದ ಕಹಳಾ ಶಂಖ ನಾದದಿ
ಮಡದಿ ಅರುಂಧತಿಯು ತ್ರೈಜ
ದೊಡೆಯ ರಾಮಗೆ ಬೆಳಗೆ ಆರತಿ
ಸಡಗರದೊಳಿರ್ದಾತ ರಕ್ಷಿಸು ನಮ್ಮನನವರತ ||೧೦೫||

ಹರನಜಗೆ ದಿಕ್ಪಾಲರಿಂಗೆಯು
ಪರಮಶರಣರೆ ಹರಿಯು ತನುಜಗೆ
ಉರುತರದ ರತ್ನಂಗಳಿಂದಲಿ ಉಡುಗೊರೆಗಳಿತ್ತು |
ಕರದು ಕಪಿಕುಲವರ್ಗವನು ಬಹು
ತರದಿ ಮನ್ನಿಸಿ ಹರುಷಗೊಳಿಸಿದ
ಪರಮಪುರುಷನೆ ರಾಮ ರಕ್ಷಿಸು ನಮ್ಮನನವರತ ||೧೦೬||

ಅಂದು ಅಜಹರ ಇಂದ್ರರೆಲ್ಲರು 
ಚಂದದಿಂ ಕವಿವರರು ಶರಣಾ
ನಂದದಿಂದಲೆ ಬಂದು ಹರಿಯಪ್ಪಣೆಯವಿಡಿದಂದು |
ಅಂದದಿಂ ತಮತಮ್ಮನಗರಿಯೊ
ಳ್ನಿಂದು ನಿಮ್ಮಯ ಧ್ಯಾನಪೂರ್ವಕ
ದಿಂದಲಿರುವರು ತಂದೆ ರಕ್ಷಿಸು ನಮ್ಮನನವರತ |೧೦೭||

ಭೋಗಭಾಗ್ಯಗಳನ್ನು ಯಿತ್ತು ಸ
ರಾಗದಲಿ ರಕ್ಷಿಸುವ ತವಪದ
ಮಾಗಮವ ನೆನನೆನದು ಪೊಗಳುವರೇನು ಧನ್ಯರಲ |
ಪೋಗಿ ಕಳವುದು ದಿವಸ ನಿಮ್ಮನು
ಬೇಗ ಸ್ಮರಿಸಿದೆ ಜಗದಿ ಕೆಟ್ಟೆನು
ನಾಗಶಯನ ಮುಕುಂದ ರಕ್ಷಿಸು ನಮ್ಮನನವರತ ||೧೦೮||

ಮಂಗಳಂ ರಾಜಾಧಿರಾಜಗೆ
ಮಂಗಳಂ ಶಿಖಿಪುರಿಯಧೀಶಗೆ
ಮಂಗಳಂ ಸೀತಾಸಮೇತಗೆ ಮಂಗಳಾತ್ಮಕಗೆ |
ಮಂಗಳಂ ಶ್ರೀರಾಮಚಂದ್ರಗೆ
ಮಂಗಳಂ ಕರುಪುರಿಯಧೀಶಗೆ
ಮಂಗಳಂ ರಘುರಾಮಚಂದ್ರಗೆ ಮಂಗಳವು ಸರ್ವರಿಗೆ ||೧೦೯||
**********************************************
ಇದುತನಕ ಇದನೋದಿದ ಸರ್ವರಿಗೂ ಸೀತಾಲಕ್ಷ್ಮಣಾಂಜನೇಯಸಹಿತ
ಶ್ರೀ ರಾಮನು ಸದಾ ಮಂಗಲವನ್ನುಂಟುಮಾಡಲಿ ಎಂಬ 
ಪ್ರಾರ್ಥನೆಯೊಂದಿಗೆ ಯಥಾವತ್ತಾಗಿ ಸಾದರಪಡಿಸಿದ್ದೇನೆ.
                ||ಜೈ ಶ್ರೀರಾಮ್ ||

****************************************************
ಸಂಗ್ರಹ:- ಯಲ್.ಬಿ.ಪೆರ್ನಾಜೆ; ಶ್ರೀಗಿರಿ ನಿಲಯ-ಮದ್ಲ; ಅಂಚೆ:-ಕಾವು-574223; ಪುತ್ತೂರು ತಾಲೂಕು; ದ.ಕ. ಕರ್ನಾಟಕ.             09-09- 2013   ಗಣೇಶ ಚತುರ್ಥಿ.
******************************************************************************






4 comments:

  1. Pernaje Annaa, Tumbaa Upayukthavada, Sangraha..Tumbaa Dhnyavadango..

    ReplyDelete
  2. ನಿಂಗಳ ಹಾಂಗಿಪ್ಪ ಅಸಕ್ತರ ಪ್ರೋತ್ಸಾಹದ ನುಡಿಗೋ ಎನ್ನ ಕಾರ್ಯಕ್ಕೆ ಅಮೃತಮಯ ಚೇತನವಕೊಡುತ್ತು. ಧನ್ಯವಾದಂಗೊ ರವಿಯಣ್ಣಾ!

    ReplyDelete
  3. Swamy,
    Nanna Hesaru Nishchitha K T DoB : 09/05/1989 11-20pm Tuesday, Punarvasu Mithuna Rashi.
    Jatakada Prakara Kuja Doshavide emba Mahiti ide. Nevu helida prakara Mangala Chandra onde Maneyalliddare Adrinda doshavilla emba Samshaya Mudide. Dayavittu Bageharisi. Reply to kt.nishchith9@gmail.com. I hope Your reply please...........


    thanking you,


    with regards,
    Nishchitha K T

    ReplyDelete
  4. ೧೦೫ನೆಯ ಚರಣದಲ್ಲಿ ಒಂದು ಸಾಲು ಕಮ್ಮಿ ಇದೆಯಲ್ಲಾ?

    ReplyDelete