Sunday 30 September 2012

ಮುದ್ದು ಮಕ್ಕಳಿಗಾಗಿ ಮನೆ ಪಾಠ




                             ಮುದ್ದು ಮಕ್ಕಳಿಗಾಗಿ ಮನೆ ಪಾಠ

           
                   *********************
            ಹಿಂದಿನ ಕಾಲದಲ್ಲಿ ಕೂಡು ಕುಟುಂಬಗಳಿದ್ದು ಪ್ರತೀ ದಿನ ಸಂಜೆಯಾದ ಮೇಲೆ ಮನೆಯ ಮಕ್ಕಳನ್ನೆಲ್ಲಾ ಒಂದೆಡೆ ಕುಳ್ಳಿರಿಸಿ ಅವರಿಗೆ ಸಾಮಾನ್ಯ ಜ್ಞಾನದ ಪಾಠಗಳನ್ನು ಹೇಳಿಕೊಟ್ಟು ಅವುಗಳನ್ನು ಕಂಠಪಾಠ ಮಾಡಿಸುವ ಕ್ರಮವಿತ್ತು. ಇಂದು ಕೂಡು ಕುಟುಂಬಳ ಸಂಖ್ಯೆ ವಿರಳ. ಅಂದಿನ ಕಂಠಪಾಠದ ಕ್ರಮವೂ ಕಡಿಮೆಯಾಗಿದೆ.ಬಹುತೇಕವಾಗಿ ಇಲ್ಲವೆಂದೇ ಹೇಳಬಹುದು.ಅಂದು ಆ ಹಿರಿಯರುಗಳು ಹೇಳಿಕೊಡುತ್ತಿದ್ದ ಹಲವಾರು ಉಪಯುಕ್ಟ ವಿಚಾರಗಳು ಇಂದಿನ ಪೀಳಿಗೆಗೆ ತಿಳಿಯಲು/ತಿಳಿದಿರಲು ಅವಕಾಶವಿಲ್ಲದಾಗಿದೆ. ಅದಕ್ಕಾಗಿ ಇಂದು ಚಾಲ್ತಿಯಿಂದ ದೂರವಾಗುತ್ತಿರುವ ಕೆಲವು ವಿಷಯಗಳನ್ನು ಇಲ್ಲಿ ದಾಖಲಿಸಿ ಸಾಮಾಜಿಕ ತಾಣದ ಮೂಲಕ ಬಹಿರಂಗ ಪಡಿಸಿದಲ್ಲಿ ಕೆಲವರಿಗಾದರೂ ಪ್ರಯೋಜನ ಸಿಗಬಹುದೆಂದು ನನ್ನ ಅನಿಸಿಕೆ. ಇದರಲ್ಲಿ ಉತ್ತಮ ವಿಷಯಗಳು ಒಳಗೊಂಡಿವೆ ಹಾಗೂ ಇವುಗಳನ್ನು ತಮ್ಮ ಮಕ್ಕಳು ಕಲಿತರೆ ಉತ್ತಮವೆಂದು ಬೆರಳೆಣಿಕೆಯ ಮಂದಿ ಹಿರಿಯರಿಗಾದರೂ ಅನಿಸಿದಲ್ಲಿ ನನ್ನ ಶ್ರಮ ಸಾರ್ಥಕವೆಂದು ನನ್ನ ಭಾವನೆ.ಹಾಗಾಗಿ ನನ್ನ ಹಿರಿಯರು ನನಗೆ ಹೇಳಿಕೊಟ್ಟ ರೀತಿಯಲ್ಲಿ ಇಲ್ಲಿ ದಾಖಲಿಸುತ್ತೇನೆ. 
  .ಇದರ ಪ್ರಯೋಜನ ಪಡೆದು ಮಕ್ಕಳು ವಿದ್ಯಾವಂತರಾಗಲಿ;ಸಂಸ್ಕಾರವಂತರಾಗಲಿ; ಬುಧ್ಧಿವಂತರಾಗಲಿ;ಸಮಾಜದಲ್ಲಿ ಅವರಿಂದ ಉತ್ತಮ ಕಾರ್ಯಗಳು ಜರಗಿ ಅವರು ಸಮಾಜದಲ್ಲಿ ಉನ್ನತ ಸ್ಥಾನ-ಮಾನ ಹೊಂದಿ ಕೀರ್ತಿವಂತರಾಗಲಿ ಎಂಬುದು ನನ್ನ ಸದಾಷಯ.ಇಲ್ಲಿ ದಾಖಲಿಸುವ ವಿಷಯಗಳಲ್ಲಿ ಸ್ವಲ್ಪಭಾಗ ಈಗಾಗಲೇ ಪ್ರಚುರ ಪಡಿಸಲಾಗಿದ್ದರೂ ಅವುಗಳನ್ನೂ ಒಳಗೊಂಡು ಇಲ್ಲಿ ಬರೆಯಲಾಗುತ್ತಿದೆ. ವಿಷಯಗಳನ್ನು ಕಲಿಸಲು ಅನುಕೂಲವಾಗುವಂತೆ ಚಿಕ್ಕ ಚಿಕ್ಕ ಪಾಠಗಳಾಗಿ ವಿಂಗಡಿಸಿ ಬರೆಯಲಾಗುತ್ತಿದೆ. ಪಾಠ ಸಂಖ್ಯೆ  ನಮೂದಿಸಲಾಗುತ್ತದೆ.
            ಇದರ ಸದುಪಯೋಗ ಬೆರಳೆಣಿಕೆಯ ಮಂದಿಯಾದರೂ ಪಡೆದು ಕೊಂಡಲ್ಲಿ ನನ್ನ ಶ್ರಮ ಸಾರ್ಥಕ.ವಿದ್ಯಾಮಾತೆಯ ಕೃಪೆ ಎಲ್ಲರಿಗೂ ದೊರೆಯಲಿ ಎಂದು ಹಾರೈಸುತ್ತೇನೆ.             

                   ಪಾಠ ೧ :-     ವಾರಗಳ ಹೆಸರುಗಳು   
                                          
     ಆದಿತ್ಯವಾರ, ಸೋಮವಾರ, ಮಂಗಳವಾರ ಬುಧವಾರ, ಗುರುವಾರ, ಶುಕ್ರವಾರ, ಶನಿವಾರ ಇವು ವರದ 7 ದಿನಗಳ ಹೆಸರುಗಳು. 
    ಆದಿತ್ಯ ವಾರಕ್ಕೆ ರವಿ ವಾರ, ಸೋಮ ವಾರಕ್ಕೆ ಚಂದ್ರ ವಾರ, ಮಂಗಳ ವಾರಕ್ಕೆ ಕುಜ ವಾರ ಎಂದು ಕರೆಯುವ ಕ್ರಮವೂ ಇದೆ.
        ಆದಿತ್ಯೋ ಭಾನು; ಸೋಮೋ ಇಂದು ; ಮಂದಳೌರ್ಭೌಮ ; ಬುಧ ಸೌಮ್ಯ ; ಬ್ರಹಸ್ಪತ್ಯೋ ಗುರು;ಶುಕ್ರೋರ್ಭಾರ್ಗವ; ಶನಿರ್ ಮಂದ ಇವು ವಾರಗಳ ಪರ್ಯಾಯ ನಾಮಂಗಳು. ಆದಿತ್ಯವಾರಕ್ಕೆ  ಭಾನುವಾರ ;ಸೋಮವಾರಕ್ಕೆ ಇಂದುವಾರ; ಮಂಗಳ ವಾರಕ್ಕೆ ಭೌಮವಾರ; ಬುಧವಾರಕ್ಕೆ ಸೌಮ್ಯವಾರ; ಗುರುವಾರಕ್ಕೆ ಬ್ರಹಸ್ಪತಿವಾರ ;ಶುಕ್ರವಾರಕ್ಕೆ ಭಾರ್ಗವ ವಾರ; ಶನಿವಾರಕ್ಕೆ ಮಂದ ವಾರ ಎಂಬ ಪರ್ಯಾಯ ಹೆಸರುಗಳಿವೆ.ಪಂಚಾಂಗಗಳಲ್ಲಿ ಸಂಕೇತಾಕ್ಷರ ಬರೆಯುವುದಾಗಿದ್ದು ಅವುಗಳು ಇಂತಿವೆ:- [೧] ಆದಿತ್ಯವಾರ/ರವಿವಾರ.....ರ  [೨] ಸೋಮವಾರ/ಚಂದ್ರವಾರ....ಚ   [೩] ಮಂಗಳವಾರ/ಕುಜವಾರ...ಕು  [೪] ಬುಧವಾರ....ಬು  [೫] ಗುರುವಾರ .....ಗು  [೬] ಶುಕ್ರವಾರ....ಶು  [೭]ಶನಿವಾರ......ಶ.  ಈರೀತಿಯಾಗಿ ಸಂಕೇತಾಕ್ಷರಗಳು.

            ಪಾಠ ೨ :-     ಚಾಂದ್ರಮಾನ ತಿಂಗಳುಗಳ ಹೆಸರುಗಳು  
                         
 ಚೈತ್ರ,;  ವೈಶಾಖ ;   ಜ್ಯೇಷ್ಠ ;  ಆಷಾಢ ;  ಶ್ರಾವಣ ;  ಭಾದ್ರಪದ ;  ಆಶ್ವೀಜ [/ಅಶ್ವಯುಜ/] [ಆಶ್ವೀನ]  ;  ಕಾರ್ತಿಕ ;  ಮಾರ್ಗಶಿರ /[ಅಗ್ರಹಾಯನ];   ಪೌಷ /[ಪುಷ್ಯ] ;  ಮಾಘ ;  ಫಾಲ್ಗುಣ ಇವು 12 ಚಾಂದ್ರ ಮಾನ ತಿಂಗಳುಗಳ ಹೆಸರುಗಳು.ಇವುಗಳನ್ನು ರಾಷ್ಟ್ರೀಯ ಮಾಸಗಳೆಂದು ಪರಿಗಣಿಸಲಾಗಿದೆ. ಈ ಮಾಸಗಳಿಗೆ ಅಲ್ಲದೆ ಪರ್ಯಾಯ ವೈದಿಕ ನಾಮಗಳಿವೆ. ಅವುಗಳು ಇಂತಿವೆ. [೧] ಚೈತ್ರ= ಮಾಧವ:  [೨] ವೈಶಾಖ= ಶುಕ್ರ:  [೩] ಜ್ಯೇಷ್ತ್ಠ= ಶುಚಿ:  [೪] ಆಷಾಢ= ನಭ:  [೫] ಶ್ರಾವಣ= ನಭಸ್ಯ:  [೬] ಭಾದ್ರಪದ= ಇಷ:  [೭]  ಆಶ್ವೀಜ= ಊರ್ಜ:  [೮]  ಕಾರ್ತಿಕ= ಸಹ: [೯]  ಮಾರ್ಗಶಿರ [ಅಗ್ರಹಾಯನ]= ಸಹಸ್ಯ: [೧೦]  ಪೌಷ [ಪುಷ್ಯ]= ತಪ:  [೧೧] ಮಾಘ= ತಪಸ್ಯ: [೧೨]  ಫಾಲ್ಗುಣ= ಮಧು: ಈ ರೀತಿಯಾಗಿ ವೈದಿಕ ಮಾಸಗಳೆಂದು ಗುರುತಿಸಲಾಗಿದೆ. ಚಾಂದ್ರಮಾನ ವರ್ಷವು ಆರಂಭವಾಗುವ ದಿನಕ್ಕೆ ಚಾಂದ್ರಮಾನ ಯುಗಾದಿ ಎಂದು ಕರೆಯುತ್ತಾರೆ.

                   ಪಾಠ :- ೩         ಋತುಗಳ ಹೆಸರುಗಳು  
                                              
 2 ಚಾಂದ್ರಮಾನ ತಿಂಗಳುಗಳಿಗೆ ಒಂದು ಋತುವಿನಂತೆ ವರ್ಷಕ್ಕೆ 6 ಋತುಗಳು. ಅವುಗಳ ಹೆಸರುಗಳು ಇಂತಿವೆ.
 [೧] ವಸಂತ ಋತು [೨] ಗ್ರೀಷ್ಮ  ಋತು [೩]ವರ್ಷ ಋತು [೪] ಶರದೃತು [೫] ಹೇಮಂತ ಋತು [೬] ಶಿಶಿರ ಋತು.
  ಚೈತ್ರ- ವೈಶಾಖ =ವಸಂತ ಋತು ;  ಜ್ಯೇಷ್ಠ - ಆಷಾಢ=ಗ್ರೀಷ್ಮ ಋತು;  ಶ್ರಾವಣ - ಭಾದ್ರ ಪದ= ವರ್ಷಋತು ; ಆಶೀಜ- ಕಾರ್ತಿಕ =ಶರದೃತು ; ಮಾಗಶಿರ- ಪುಷ್ಯ =ಹೇಮಂತ ಋತು ;  ಮಾಘ- ಫಾಲ್ಗುಣ=ಶಿಶಿರ ಋತು. ಈರೀತಿಯಾಗಿ 2 ತಿಂಗಳುಗಳಿಗೆ ಒಂದರಂತೆ 6 ಋತುಗಳು

                     ಪಾಠ ೪                   ಅಯನಗಳು

        ವರ್ಷಕ್ಕೆ 2 ಅಯನಗಳಿವೆ. ಅವುಗಳಿಗೆ ಉತ್ತರಾಯನ ಹಾಗೂ ದಕ್ಷಿಣಾಯನಗಳೆಂದು ಹೆಸರು. ಸಾಮಾನ್ಯವಾಗಿ ಉತ್ಪ್ರರಾಯನವು ಪ್ರತೀ ವರ್ಷದ ದಶಂಬರ ತ್ದಿಂಗ್ನಳ  ದಿನಾಂಕ 23ಕ್ಕೆ ಆರಂಭವಾಗುವುದು. ದಕ್ಷಿಣಾಯನ್ಜವ್ನು  ತಿಂಗಳ ದಿನಾಂಕ 22ಕ್ಕೆ ಆರಂಭವಾಗುವುದು. ಆಷಾಢ ಮಾಸದ ಪ್ರಥಮ ದಿನದಿದಿಂದ ಕಾರ್ತಿಕ ಮಾಸದ ಅಂತ್ಯದ  ದಿನದ ವರೆಗೆ ದಕ್ಷಿಣಾಯನ ಹಾಗೂ ಪುಷ್ಯ ಮಾಸದ ಪ್ರಥಮ ದಿನದಿಂದ ಜ್ಯೇಷ್ಠ ಮಾಸದ ಅಂತ್ಯದ ದಿನದ ವರೆಗೆ ಉತ್ತರಾಯನ ಕಾಲ. ಈ ವಿಷಯದಲ್ಲಿ ಭಿನ್ನ ಮತವಿದೆ.ಪ್ರತಿ ವ್ವರ್ಷ ಕರ್ಕಟಕ ಸಂಕ್ರಮಣದಿಂದ ಆರಂಭವಾಗಿ ಮಕರ ಸಂಕ್ರಮಣದ ತನಕ ದಕ್ಷಿಣಾಯನ ಕಾಲವೆಂದೂ,ಮಕರ ಸಂಕ್ರಮಣದಿಂದ ಆರಂಭವಾಗಿ ಕರ್ಕಟಕ ಸಂಕ್ರಮಣದ ತನಕ ಉತ್ತರಾಯನ ಕಾಲವೆಂದೂ ಅಭಿಪ್ರಾಯ ಬೇಧವಿದೆ. ದಕ್ಷಿಣಾಯನ ಆರಂಭ ಕಾಲದಲ್ಲಿ ಹಗಲು ಹೊತ್ತು ಜಾಸ್ತಿ ಹಾಗೂ ರಾತ್ರಿ ಹೊತ್ತು ಕಡಿಮೆ. ಉತ್ತರಾಯನ ಆರಂಭ ಕಾಲದಲ್ಲಿ ಹಗಲು ಹೊತ್ತು ಕಡಿಮೆ ಹಾಗೂ ರಾತ್ರಿ ಹೊತ್ತು ಜಾಸ್ತಿ.

   
  ಪಾಠ :-೫              ಚಾಂದ್ರಮಾನ ತಿಂಗಳಲ್ಲಿನ       ದಿನಗಳ ಹೆಸರುಗಳು  
                
 ಚಾಂದ್ರಮಾನ ತಿಂಗಳುಗಳಲ್ಲಿ ಶುಕ್ಲ ಪಕ್ಷ [ಶುಧ್ಧ ಪಕ್ಷ; ಬಿಳಿ ಪಕ್ಷ] ;ಕೃಷ್ಣ ಪಕ್ಷ [ಬಹುಳ ಪಕ್ಷ, ಕಪ್ಪು ಪಕ್ಷ ] ಗಳೆಂದು 2 ಪಕ್ಷಗಳಿವೆ. ಶುಕ್ಲ ಪಕ್ಷವು ಅಮವಾಸ್ಯೆಯ ಮಾರನೆ ದಿವಸದಿಂದ ಹುಣ್ಣಿಮೆ[ಪೌರ್ಣಮಿ, ಪೂರ್ಣಿಮೆ] ಯ ತನಕದ 15 ದಿನಗಳು.ಕೃಷ್ಣ ಪಕ್ಷವು ಹುಣ್ಣಿಮೆಯ ಮರುದಿನದಿಂದ ಅಮವಾಸ್ಯೆಯ ತನಕದ 15 ದಿನಗಳು. ಈ 30 ದಿನಗಳಿಗೆ ತಿಥಿಗಳೆಂದು ಹೆಸರು.
                                                            
                              ತಿಥಿಗಳ ಹೆಸರುಗಳು

[೧] ಪಾಡ್ಯ [೨] ಬಿದಿಗೆ [೩] ತದಿಗೆ [೪] ಚೌತಿ [೫]ಪಂಚಮಿ [೬] ಷಷ್ಠಿ  [೭] ಸಪ್ತಮಿ [೮] ಅಷ್ಠಮಿ [೯] ನವಮಿ [೧೦] ದಶಮಿ [೧೧] ಏಕಾದಶಿ [೧೨] ದ್ವಾದಶಿ [೧೩] ತ್ರಯೋದಶಿ [೧೪] ಚತುರ್ದಶಿ [೧೫] ಶುಕ್ಲ ಪಕ್ಷದಲ್ಲಿ ಹುಣ್ಣಿಮೆ ;  ಕೃಷ್ಣ ಪಕ್ಷದಲ್ಲಿ [೩೦ ]  ಅಮವಾಸ್ಯೆ.
     ಶುಕ್ಲ ಪಕ್ಷದ ತಿಥಿಗಳಿಗೆ ಶುಧ್ಧ ತಿಥಿಗಳೆಂದೂ  ,ಕೃಷ್ಣ ಪಕ್ಷದ ತಿಥಿಗಳಿಗೆ ಬಹುಳ ಅಥವಾ ವದ್ಯ ತಿಥಿಗಳೆಂದೂ ಕರೆಯುತ್ತಾರೆ. ಶುಕ ಪಕ್ಷದ ಪಾಡ್ಯದಿಂದ ಆರಂಬಿಸಿ ಚಂದ್ರನು ವೃಧ್ಧಿಯಾಗುತ್ತಾ ಹುಣ್ಣಿಮೆಯಂದು ಪೂರ್ಣ ಚಂದ್ರನಾಗಿ ಕಾಣುತ್ತಾನೆ. ಹುಣ್ಣಿಮೆಯ ಮರುದಿನದಿಂದ ಚಂದ್ರನು ಕ್ಷೀಣಿಸುತ್ತಾ ಅಮವಾಸ್ಯೆಯ ದಿವಸ ಕಾಣದಾಗುವನು.

         ಪಾಠ :-೬            ಪರ್ವ ತಿಥಿಗಳು.ಅಥವಾ ಸಂಭ್ರಮದ ತಿಥಿಗಳು
              
[೧] ಪಾಡ್ಯ=-ಯುಗಾದಿ ಪಾಡ್ಯ; [೨] ಬಿದಿಗೆ= ಸೋಮನ ಬಿದಿಗೆ; [೩] ತದಿಗೆ= ಅಕ್ಷಯ ತದಿಗೆ; [೪] ಚೌತಿ= ವಿನಾಯಕ ಚೌತಿ; [೫] ಪಂಚಮಿ= ನಾಗರ ಪಂಚಮಿ; [೬] ಷಷ್ಠಿ= ಕುಕ್ಕೇ ಷಷ್ಟಿ; [೭] ಸಪ್ತಮಿ-=ರಥ ಸಪ್ತಮಿ; [೮] ಅಷ್ಟಮಿ= ಗೋಕುಲಾಷ್ಟಮಿ   [೯] ನವಮಿ=ಮಹಾನವಮಿ;    [೧೦] ದಶಮಿ= ವಿದ್ಯಾ ದಶಮಿ; [೧೧] ಏಕಾದಶ= ಪ್ರಥಮೈಕಾದಶಿ; [೧೨] ದ್ವಾದಶಿ= ಉತ್ಥಾನ ದ್ವಾದಶಿ; [೧೩] ತ್ರಯೋದಶಿ= ಶನಿ ತ್ರಯೋದಶಿ;     [೧೪] ಚತುರ್ದಶಿ= ಅನಂತನ ಚತುರ್ದಶಿ; [೧೫] ಹುಣಿಮೆ= ನೂಲ ಹುಣ್ಣಿಮೆ [೩೦] ಅಮವಾಸ್ಯೆ= ಮಹಾಲಯ ಅಮವಾಸ್ಯೆ. ಇವು ಪರ್ವ ತಿಥಿಗಳು.
[ಆಯಾ ಪ್ರದೇಶಕ್ಕೆ ಅನುಗುಣವಾಗಿ ಪರ್ವಗಳು ಬದಲಾಗ ಬಹುದು]

     ಪಾಠ :- ೭             ನಕ್ಷತ್ರಗಳ ಹೆಸರುಗಳು ಮತ್ತು ಸಂಕೇತ ಅಕ್ಷರಗಳು 
        
[೧] ಅಶ್ವಿನಿ...ಅವ್{ "ಅ" ಬರೆದು "ವ"ಒತ್ತು} [೨] ಭರಣಿ...ಭ [೩] ಕೃತ್ತಿಕಾ...ಕೃ [೪] ರೋಹಿಣಿ...ರೋ  [೫] ಮೃಗಶಿರ....ಮೃ  [೬] ಆರ್ದ್ರಾ...ಆರ್ [೭] ಪುನರ್ವಸು....ಪ್ನು [೮] ಪುಷ್ಯ ...ಪ್ಯು[೯] ಆಶ್ಲೇಷ...ಆಲ್{"ಆ"ಬರೆದು"ಲ"ಒತ್ತು} [೧೦] ಮಘಾ...ಮ  [೧೧] ಪೂರ್ವಾ {ಹುಬ್ಬಾ ,ಪೂರ್ವಾ ಫಾಲ್ಗುಣ}.....ಪೂ[೧೨] ಉತ್ತರಾ {ಉತ್ತರಾ ಫಾಲ್ಗುಣ}ಉತ್{ "ಉ" ಬರೆದು "ತ" ಒತ್ತು} [೧೩] ಹಸ್ತ....ಹ [೧೪] ಚಿತ್ರ ...ಚಿ[೧೫] ಸ್ವಾತೀ...ಸ್ವಾ[೧೬] ವಿಶಾಖಾ...ವಿ  [೧೭] ಅನುರಾಧಾ.... ಅನ್{"ಅ"ಬರೆದು"ನ"ಒತ್ತು [೧೮] ಜ್ಯೇಷ್ಠಾ...ಜ್ಯೇ [೧೯] ಮೂಲ...ಮೂ [೨೦] ಪೂರ್ವಾಷಾಢಾ....ಪೂಕ್ಷ್ {"ಪೂ" ಬರೆದು "ಕ್ಷ"ಒತ್ತು [೨೧] ಉತ್ತರಾಷಾಢಾ....ಉಕ್ಷ್{ "ಉ"ಬರೆದು "ಕ್ಶ" ಒತ್ತು} [೨೨]ಶ್ರವಣ....ಶ್ರ [೨೩] ಧನಿಷ್ಠಾ...ಧ  [೨೪] ಶತಭಿಷ ....ಶತ್{"ಶ" ಬರೆದು "ತ" ಒತ್ತು[೨೫] ಪೂರ್ವಾಭದ್ರಾ ....ಪೂಭ್ {"ಪೂ"ಬರೆದು" ಭ" ಒತ್ತು} [೨೬] ಉತ್ತರಾಭದ್ರಾ ...ಉಭ್ {"ಉ" ಬರೆದು"ಭ" ಒತ್ತು[೨೭] ರೇವತಿ...ರೆ..
           ಇವು ೨೭ ನಕ್ಷತ್ರಗಳ ಹೆಸರುಗಳು ಮತ್ತು ಸಂಕೇತ ಅಕ್ಷರಗಳು.

        ಪಾಠ: -೮                    ಯೋಗಗಳ ಹೆಸರುಗಳು ಮತ್ತು ಸಂಕೇತಗಳು 
       
   ಈ  ದಿವಸ ಯೋಗಳ ಹೆಸರುಗಳನ್ನು ಮತ್ತು ಪಂಚಾಂಗಗಳಲ್ಲಿ ಅವುಗಳನ್ನು ಗುರುತಿಸುವ ಸಂಕೇತ ಅಕ್ಷರಗಳನ್ನು ತಿಳಿದುಕೊಳ್ಳೋಣ  :-
 [೧] ವಿಷ್ಕಂಭ...ವ್ಕಿ  [೨] ಪ್ರೀತಿ...ಪ್ರೀ [೩] ಆಯುಷ್ಮಾನ್...ಆ [೪] ಸೌಭಾಗ್ಯ...ಸೌ [೫] ಶೋಭನ...ಶೋ  [೬] ಅತಿಗಂಡ... ಅತ್= ’ಅ’ ಬರೆದು ’ತ’ ಒತ್ತು[೭] ಸುಕರ್ಮ....ಸ್ಕು [೮] ಧೃತಿ....ಧ್ರ [೯ ] ಶೂಲ...ಶೂ [೧೦] ಗಂಡ..ಗಂ [೧೧] ವೃಧ್ಧಿ....ವೃ [೧೨]ಧೃವ... ಧ್ರು [೧೩] ವ್ಯಾಘಾತ... ವ್ಯಾ [೧೪] ಹರ್ಷಣ...ಹರ್ [೧೫] ವಜ್ರ...ವ್ರ [೧೬] ಸಿಧ್ಧಿ...ಸಿ [೧೭] ವ್ಯತೀಪಾತ...ವ್ಯ [೧೮] ವರೀಯಾನ್... ವರಿ [೧೯] ಪರಿಘ...ಪ [೨೦] ಶಿವ...ಶಿ [೨೧] ಸಿದ್ಧ...ಸಿ [೨೨] ಸಾಧ್ಯ...ಸಾ [೨೩] ಶುಭ....ಶು [೨೪] ಶುಕ್ಲ.....ಶ್ಲು [೨೫] ಬ್ರಹ್ಮ....ಬ್ರ [೨೬] ಐಂದ್ರ....ಐಂ [೨೭] ವೈದೃತಿ....ವೈ  ಈ ರೀತಿಯಾಗಿ 27 ಯೋಗಗಳಿವೆ.

       ಪಾಠ :- ೯                       ಸಂಕೇತಾಕ್ಷರ ಸಹಿತ ಕರಣಗಳ ಕೆಸರುಗಳು  
            
   ಈ ದಿನ ಕರಣಗಳ ಹೆಸರುಗಳನ್ನು ತಿಳಿದುಕೊಳ್ಳೋಣ :-
  [೧] ಬವ...ಬ [೨] ಬಾಲವ...ಬಾ [೩] ಕೌಲವ...[೪] ತೈತಲೆ/ತೈತಿಲೆ/ತೈತಿಲಾ...ತೈ [೫]ಗರಜೆ/ಗರಜ...ಗ [೬] ವಣಿಜೆ/ವಣಿಜ...ವ [೭]ಭದ್ರ/ಭದ್ರೆ/ವಿಷ್ಠಿ...ಭ [೮]ಶಕುನಿ...ಶ [೯] ಚತುಷ್ಪಾದ...ಚ [೧೦] ನಾಗವಾನ್ ....ನಾ [೧೧] ಕಿಂಸ್ತುಘ್ನ....ಕಿಂ ಈ ರೀತಿಯಾಗಿ 11 ಕರಣಗಳಿವೆ. ಅವುಗಳನ್ನು ಈರೀತಿಯಾಗಿ ಕಂಠ ಪಾಠ ಮಾಡಿಸುತ್ತಿದ್ದರು.   [೧]ಬವ...ಶಿಂಹ [೨] ಬಾಲವ...ಹ್ಲುಲಿ [೩] ಕೌಲವ..ಹಂದಿ [೪] ತೈತಿಲೆ ...ಕತ್ತೆ  [೫] ಗರಜೆ...ಆನೆ [೬] ವಣಜೆ...ಎಮ್ಮೆ [೭] ಭದ್ರೆ...ಕುದುರೆ [೮] ಶಕುನಿ...ನಾಯಿ [೯]ಚತುಷ್ಪಾದ...ಎತ್ತು [೧೦] ನಾಗ...ಸರ್ಪ [೧೧] ಕಿಂಸ್ತುಘ್ನ...ಕೋಳಿ.

      ಪಾಠ :- ೧೦                         ಸೌರಮಾನ ತಿಂಗಳುಗಳ ಹೆಸರುಗಳು                  

ಸೌರ ಮಾನ ವರ್ಷವು ಸೌರಮಾನ ಯುಗಾದಿಯಿಂದ ಆರಂಭಗೊಳ್ಳುತ್ತದೆ. [೧] ಮೇಷ [೨] ವೃಷಭ [೩] ಮಿಥುನ [೪] ಕರ್ಕಟಕ/ಕರ್ಕಾಟಕ [೫] ಸಿಂಹ [೬] ಕನ್ಯಾ [೭] ತುಲಾ [೮] ವೃಶ್ಚಿಕ [೯] ಧನು [೧೦] ಮಕರ [೧೧] ಕುಂಭ [೧೨] ಮೀನ ಈ ರೀತಿಯಾಗಿ ಕರ್ನಾಟಕದಲ್ಲಿನ ಹೆಸರುಗಳು. ಈ ರಾಶಿಗಳಿಗೆ ತುಳುನಾಡಿನಲ್ಲಿ [೧] ಪಗ್ಗು [೨] ಬೇಷೊ [೩] ಕಾರ್ತೆಲ್ [೪] ಆಟಿ [೫] ಸೋಣೋ [೬] ನಿರ್ನಾಲ್ [೭] ಬೊಂತೆಲ್ [೮] ಜಾರ್ದೆ [೯] ಪೆರಾರ್ದೆ [೧೦] ಪುಯಿಂತೆಲ್ [೧೧] ಮಾಯಿ [೧೨]ಸುಗ್ಗಿ ತಿಂಗಳುಗಳೆಂದು ಕರೆಯುತ್ತಾರೆ.ಬೇರೆ ರಾಜ್ಯಗಳಲ್ಲಿ ತಿಂಗಳುಗಳಿಗೆ ಬೇರೆ ಬೇರೆ ಹೆಸರುಗಳಿವೆ.
    27 ನಕ್ಷತ್ರಗಳನ್ನು 108 ಪಾಲುಗಳನ್ನಾಗಿ ವಿಭಜಿಸಿ 9 ಪಾಲುಗಳಿಗೆ ಒಂದೊಂದು ರಾಶಿಯಂತೆ ಜ್ಯೋತಿಷ್ಯ ಶಾಸ್ತ್ರದಲ್ಲಿ ಗುರುತಿಸಿದ್ದು ಸೌರಮಾನ ತಿಂಗಳುಗಳನ್ನು ರಾಶಿಗಳೆಂದು ಹೆಸರಿಸಲಾಗಿದೆ.ಪಾಲುಗಳನ್ನು ಪಾದಗಳೆಂದು ಕರೆಯುವರು..ಮೇಷ ರಾಶಿಯು ಪ್ರಥಮ ರಾಶಿಯಾಗಿದ್ದು ಮೀನ ರಾಶಿಯು ೧೨ ನೆಯ ರಾಶಿಯಾಗಿದೆ.ಪ್ರತೀ ಎರಡೂಕಾಲು ನಕ್ಷತ್ರಗಳಿಗೆ ಒಂದುರಾಶಿಯಾಗುವುದು.

    ಪಾಠಃ-೧೧                                  ಸಂವತ್ಸರಗಳ ಹೆಸರುಗಳು 
                            
ಭಾರತೀಯ ಕಾಲಮಾನದ ಪ್ರಕಾರ ಒಂದು ವರ್ಷಕ್ಕೆ ಸಂವತ್ಸರ ಎಂದು ಹೆಸರು. ಪ್ರತೀ ಸಂವತ್ಸರಕ್ಕೂ ಬೇರೆ ಬೇರೆ ಹೆಸರುಗಳಿದ್ದು 60 ವರ್ಷಗಳಿಗೊಮ್ಮೆ ಸಂವತ್ಸರದ ಹೆಸರು ಆರಂಭದ ಹೆಸರಿನಿಂದಲೇ ಪುನಃ ಪ್ರಾಂಭವಾಗತ್ತದೆ. ಸಂವತ್ಸರಗಳ ಹೆಸರುಗಳು ಈ ರೀತಿಯಾಗಿವೆ.
 [೧] ಪ್ರಭವ [೨]ವಿಭವ [೩] ಶುಕ್ಲ [೪] ಪ್ರಮೋದ [೫] ಪ್ರಜಾಪತಿ [೬] ಅಂಗಿರ [೭] ಶ್ರೀಮುಖ [೮]ಭಾವ [೯]ಯುವಾ [೧೦] ಧಾತಾ [೧೧] ಈಶ್ವರ [೧೨] ಬಹುಧಾನ್ಯ [೧೩] ಪ್ರಮಾಥಿ [೧೪]ವಿಕ್ರಮ [೧೫] ವೃಷ [೧೬] ಚಿತ್ರಭಾನು [೧೭] ಸುಭಾನು [೧೮] ತಾರಣ [೧೯] ಪಾರ್ಥಿವ [೨೦] ವ್ಯಯ  [೨೧] ಸರ್ವಜಿತ್  [೨೨] ಸರ್ವಧಾರೀ [೨೩] ವಿರೋಧೀ [೨೪] ವಿಕೃತಿ [೨೫] ಖರ [೨೬] ನಂದನ [೨೭] ವಿಜಯ [೨೮] ಜಯ [೨೯] ಮನ್ಮಥ [೩೦] ದುರ್ಮುಖ [೩೧] ಹೇಮಲಂಬಿ [೩೨] ವಿಲಂಬಿ [೩೩]ವಿಕಾರಿ [೩೪] ಶಾರ್ವರಿ [೩೫] ಪ್ಲವ [೩೬] ಶುಭಕೃತ್ [೩೭] ಶೋಭನ [೩೮] ಕ್ರೋಧಿ [೩೯] ವಿಶ್ವಾವಸು [೪೦] ಪರಾಭವ [೪೧] ಪ್ಲವಂಗ [೪೨] ಕೀಲಕ [೪೩] ಸೌಮ್ಯ [೪೪] ಸಾಧಾರಣ [೪೫] ವಿರೋಧಿಕೃತ್ [೪೬] ಪರಿಧಾವಿ [೪೭] ಪ್ರಾಮಾದಿ [೪೮] ಆನಂದ [೪೯] ರಾಕ್ಷಸ [೫೦] ಅನಲ [೫೧] ಪಿಂಗಳ [೫೨] ಕಾಲಯೌಕ್ತ [೫೩] ಸಿದ್ಧಾರ್ಥ [೫೪] ರೌದ್ರ [೫೫] ದುರ್ಮತಿ [೫೬] ದುಂದುಭಿ [೫೭] ರುದಿರೋದ್ಗಾರಿ [೫೮] ರಕ್ತಾಕ್ಷಿ [೫೯] ಕ್ರೋಧನ [೬೦] ಕ್ಷಯ ಇವು 60 ಸಂವತ್ಸರಗಳ ಹೆಸರುಗಳು.

     ಪಾಠಃ- ೧೨                                         ಪಂಚಾಂಗ ಪರಿಚಯ 
                                      
 ಇದುವರೆಗೆ  ತಿಥಿ, ವಾರ,ನಕ್ಷತ್ರ  ಯೋಗ, ಕರಣ,ಗಳ ಬಗ್ಗೆ ವಿವರಿಸಿದ್ದಾಯಿತು. ಇವೆಲ್ಲವೂ ಮನದಟ್ಟು ಆಗಿರಬಹುದು. ತಿಥಿ,ವಾರ ,ನಕ್ಷತ್ರ, ಯೋಗ, ಕರಣ ಗಳೆಂಬ ಪಂಚ= [೫] ವಿಚಾರಗಳನ್ನು ಒಳಗೊಂಡಿರುವುದೇ ಪಂಚಾಂಗ. ಈಗ ಪಂಚಾಂಗದಲ್ಲಿ ಕಾಣಿಸುವ ವಿಚಾರಗಳ ಬಗ್ಗೆ ಟಿಳಿದು ಕೊಳ್ಳೋಣ ಪಂಚಾಂಗಗಳು ಬೇರೆ ಬೇರೆ ಪ್ರದೇಶಗಳಲ್ಲಿ ಆಯಾ ಊರಿನ ಅಕ್ಷಾಂಶ; ರೇಖಾಂಶಗಳನ್ನು ಅವಲಂಬಿಸಿ ಗಣಿತ ಕ್ರೀಯೆಯಿಂದ ತಯಾರು ಮಾಡಲಾಗುತ್ತಿದೆ. ಉದಾಹರಣ್ಗೆಗೆ  ನಮ್ಮ ಶ್ರೀ ಮಠೀಯ ಧಾರ್ಮಿಕ ಪಂಚಾಂಗವು ಹೊಸನಗರದ ಅಕ್ಷಾಂಶ ಹಾಗೂ ರೇಖಾಂಶಗಳನ್ನು ಅವಲಂಬಿಸಿ ಗಣಿತ ಕ್ರೀಯೆಯಿಂದ ತಯಾರು ಮಾಡಲಾಗುತ್ತಿದೆ.ಗಣಿತ ಕ್ರೀಯೆಯಲ್ಲೂ ವಿವಿಧ ಪಂಚಾಂಗ ಕರ್ತರು ಬೇರೆ ಬೇರೆ ಗಣಿತ ಸಿಧ್ಧಾಂತಗಳನ್ನು ಗಣಿತ ಕ್ರೀಯೆಯಲ್ಲಿ ಬಳಸಿಕೊಳ್ಳುತ್ತಾರೆ.[ಮುಖ್ಯ ಗಣಿತ ಸಿಹ್ಧಾಂತಗಳುಃ- ಸೂರ್ಯ ಸಿಧ್ಧಾಂತ,ಕೇತಕೀ ಗಣಿತ,ವಾಕ್ಯ,ಸಿದ್ಧಾಂತ,ಆರ್ಯ ಭಟ,ದೃಗ್ಗಣಿತ.] {ನಮ್ಮ ರಾಷ್ಠ್ರೀಯ ಪಂಚಾಂಗವು ದೃಗ್ಗಣಿತ ಆಧಾರಿತವಾಗಿ ತಯಾರಿಸಲಾಗುತ್ತಿದೆ.ಶ್ರೀ ಮಠೀಯ ಧಾರ್ಮಿಕ ಪಂಚಾಂಗವು ಸೂರ್ಯ ಸಿಧ್ಧಾತದ ಆಧಾರದಲ್ಲಿ ತಯಾರಿಸಲ್ಪಡುತ್ತದೆ. ಅದೇ ರೀತಿ ದೃಗ್ಗಣಿತ ಆಧಾರಿತವಾಗಿ ಪುತ್ತೂರು ಅಕ್ಷಾಂಶ, ರೇಖಾಂಶ ಆದಾರಿತವಾಗಿ ವೈಜಯಂತೀ , ವಿಟ್ಲದ ಅಕ್ಷಾಂಶ, ರೇಖಾಂಶ ಆಧಾರಿತವಾಗಿ ಶಾಸ್ತ್ರಸಿಧ್ಧ ಶ್ರೀ ಕೃಷ್ಣ ಪಂಚಾಂಗ.ಉಡುಪಿಯ ಅಕ್ಷಾಂಶ,ರೇಖಾಂಶ ಆಧರಿಸಿ ದೃಗ್ಗಣಿತ ಅವಲಂಬಿಸಿ ಉಡುಪಿ ಶ್ರೀ ಕೃಷ್ಣ ಪಂಚಾಂಗ, ಆರ್ಯಭಟೀಯ ಮತ್ತು, ದೃಗ್ಗಣಿತ ಆಧಾರಿತವಾಗಿ ಉಡುಪಿಯ ಅಕ್ಷಾಂಶ, ರೇಖಾಂಶ ಆಧಾರಿತವಾಗಿ ಶ್ರೀಕೃಷ್ಣ ಪಂಚಾಂಗ ಉಡುಪಿ , ಮಂಗಳೂರಿನ ಅಕ್ಷಾಂಶ, ರೇಖಾಂಶ ಆದಾರಿತವಾಗಿ ಸೂರ್ಯ ಸಿದ್ಧಾಂತ ಅವಲಂಬಿತವಾಗಿ ಉದ್ಯಾವರ  ಪಂಚಾಂಗ, ಗೊಕರ್ಣದ ಅಕ್ಷಾಂಶ, ರೇಖಾಂಶ ಆಧಾರಿತವಾಗಿ ದೃಗ್ಗಣಿತ ಅವಲಂಬಿಸಿ ಬಗ್ಗೋಣ ಪಂಚಾಂಗ;  ಮೈಸೂರಿನ ಅಕ್ಷಾಂಶ, ರೇಖಾಂಶ ಅವಲಂಬಿಸಿ,ಸೂರ್ಯ ಸಿಧ್ಧಾಂತ,ವಾಕ್ಯ, ಆರ್ಯಭಟೀಯ,ದೃಗ್ಗಣಿತ ಆಧಾರಿತವಾಗಿ ಒಂಟಿ ಕೊಪ್ಪಲು ಪಂಚಾಂಗ ಹೀಗೆ ಇನ್ನೂ ಪ್ರದೇಶಾನುಸಾರವಾಗಿ ಬೇರೆ,ಬೇರೆ ಪಂಚಾಂಗಗಳನ್ನು ಆಯಾ ಪ್ರದೇಶದ ಜನರು ಅನುಸರಿಸಿ ಧರ್ಮ, ಕರ್ಮಾದಿಗಳನ್ನು ಮಾಡುವುದಾಗಿದೆ. ಗಣಿತದ ಪ್ರಭೇಧಗಳಿಂದಾಗಿ ಕೆಲವೊಮ್ಮೆ ಧಾರ್ಮಿಕ್ಕ ಆಚರಣೆಯಲ್ಲಿ ದಿನ ಬೇಧ,ತಿಥಿ ಬೇಧ ,ಕಾಲಮಾನ ಬೇಧ ಕಂಡು ಬರುತ್ತಿದೆ. ಇದಕ್ಕೆ ಬೇರೆ ಬೇರೆ ಸ್ಠಳಗಳ ಆಧಾರಿತವಾಗಿ ತಯಾರಾದ ಪಂಚಾಂಗಗಳು ಮತ್ತೋದು ಪ್ರದೇಶದಲ್ಲಿ ಆಚರಣೆ ಬರುವಾಗ ಸ್ಥಳೀಯ ಪಂಚಾಂಗದಲ್ಲಿ ನಮೂದಿಸಿದ ಕಾಲ ಪ್ರಮಾಣಕ್ಕೂ ಮತ್ತೊಂದು ಊರಿನ ಆಧಾತಿತವಾಗಿ ತಯಾರಾದ ಪಂಚಾಂಗಗಳ ನ್ಮೂದಿಸಿರುವ ಕಾಲಪ್ರಮಾಣಕ್ಕೂ ವ್ಯತ್ಯಾಸ ಉಂಟಾಗುದೂ ಒಂದು ಕಾರ‍ಾಣ ವಿರಬಹುದು.ಒಂದೂರಿನಿಂದ ಮತ್ತೊಂದೂರಿಗಿರು ಸೂರ್ಯೋದಯ  ಸಮಯದಲ್ಲಿ ಹೆಚ್ಚು ಕಡಿಮೆ ಇದೆ. ಪಂಚಾಂಗಗಳಲ್ಲಿ ಕಾಣಿಸುವ ವಿವರಗಳು ಸೂರ್ಯೋದಯ ಕಾಲವನ್ನು ಆಧರಿಸಿ ಇರುತ್ತವೆ.ಇದೇ ರೀತಿಯಾಗಿ ಪಂಚಾಂಗ ಕರ್ತರು ಅವಲಂಬಿಸುವ ಗಣಿತ ಸಿಧ್ಧಾಂತದಲ್ಲಿ ದೊರಕುವ ಫಲಿತಾಂಶ ವ್ಯತ್ಯಾಸವಿರಬಹುದು.ಆ ವಿಚಾರಗಳೇನಿದ್ದರೂ ಎಲ್ಲಾ ಪಂಚಾಂಗಳೂ ಮೇಲೆ ವಿವರಿಸಿದ ಐದು ಅಂಗಗಳನ್ನು ಒಳಗೊಂದಿರುತ್ತವೆ.   
.
 ಬೇರೆ ಬೇರೆ ಪಂಚಾಂಗಕರ್ತರು ಕೆಲವು ವಿಷಯಗಳನ್ನು ಪ್ರಸ್ತುತ ಪಡಿಸುವಲ್ಲಿ ತಮ್ಮದೇ ಆದ ಕ್ರಮವನ್ನು ಅಳವಡಿಸಿ ಕೊಳ್ಳುತ್ತಾರಾದರೂ ದೈನಂದಿನ ವಿವರಣೆ ನೀಡುವಲ್ಲಿ ಅಂದರೆ ತಿಥಿ, ವಾರ,ನಕ್ಷತ್ರ,ಯೋಗ,ಕರಣ, ವಿಷ ಘಳಿಗೆ, ಅಮೃತ ಘಳಿಗೆಗಳ  ಬಗ್ಗೆ ವಿವರಣೆ ನೀಡುವಲ್ಲಿ ಒಂದೇ ಕ್ರಮವನ್ನುಎಲ್ಲಾ ಪಂಚಾಂಗ ಕರ್ತರು ಅನುಸರಿಸುತ್ತಾರೆ.ಮತ್ತು ಭಾರತೀಯ ಕಾಲಮಾನವನ್ನು ಅನುಸರಿಸರಿಸುವುದರೊಂದಿಗೆ ಕೆಲವು ಪಂಚಾಂಗ ಕರ್ತರು ಇತ್ತೀಚೆಗೆ ಪಾಶ್ಚಾತ್ಯ ಕಾಲ ಮಾನದಲ್ಲಿ ಕೂಡಾ ವಿವರಣೆ ನೀಡಲು ಆರಂಭಿಸಿರುತ್ತಾರೆ. ಅವುಗಳು ಈ ರೀತಿಯಲ್ಲಿ ಇರುತ್ತವೆ. ಪಂಚಾಂಗದ ಪುಟದ ಮೇಲ್ಬದಿಯಲ್ಲಿ ಆಯಾ ತಿಂಗಳು, ರಾಷ್ಟ್ರೀಯ ಮ್ಕಾಸ್ರ್ಷದಿನ,  ಸಂವತ್ಸರ, ಮಾಸ, ಪಕ್ಷ, ಋತು, ಆಯನ , ಪಕ್ಷ ಆರಂಭದಿವಸದ ಸೂರ್ಯೋದಯ, ಸೂರ್ಯಾಸ್ತ ಕಾಲ, ದಿವಾಮಾನ ,ಇಷ್ಟು ವಿವರಗಳನ್ನು ಒಳ ಗೊಂಡಿರುತ್ತವೆ.ರಾಷ್ಟ್ರೀಯ ವರ್ಷ/ಶಖೆ ಯನ್ನಾಗಿ ಶಾಲಿವಾಹನ ಶಖೆಯನ್ನು ಪರಿಗಣನೆಗೆ ತೆಗೆದುಕೊಳ್ಳುತ್ತಾರೆ. ಪಂಚಾಂಗ ಪುಟದ ಎಡ ಬದಿಯಲ್ಲಿ, ಅಥವಾ ಕೆಳಭಾಗದಲ್ಲಿ ಸೌರಮಾನ ತಿಂಗಳ ಹೆಸರು, ಮಹಾ ನಕ್ಷತ್ರ, ಗ್ರಹಗಳ ಚಾರ ಸ್ತಿತಿ ವಿವರಣೆ ನೀಡುತ್ತಾರೆ. ಬಲ ಭಾಗದಲ್ಲಿ ಅಥವಾ ಕೆಳ ಭಾಗದ ಬಲ ಮೂಲೆಯಲ್ಲಿ ಆಯಾ ಪಕ್ಷದ ಕುಂಡಲಿಯಿರುತ್ತದೆ. ಪಕ್ಷಾಂತ್ಯದ ಸೂರ್ಯೋದಯ, ಸೂರ್ಯಾಸ್ತ, ದಿವಾಮಾನ ವಿವರಣೆ ಕೊಟ್ಟಿರುತ್ತಾರೆ. 


 ಭಾರತೀಯ ಹಿಂದೂ ಪದ್ದತಿಯಲ್ಲಿ ಸೂರ್ಯೋದಯದಿಂದ ಮರುದಿವಸ ಸೂರ್ಯೋದಕ್ಕೆ ಒದು ದಿವಸ. ಪಾಶ್ಚಾತ್ಯ ಪದ್ದತಿಯಲ್ಲಿ ರಾತ್ರೆ 12 ಗಂಟೆಯಿಂದ ಮರುದಿವಸ ರಾತ್ರೆ 12 ಗಂಟೆಗೆ ಒಂದು ದಿವಸ.ಮುಸಲ್ಮಾನ ಪದ್ದತಿಯಲ್ಲಿ ಸೂರ್ಯಾಸ್ತದಿಂದ ಮರುದಿವಸ ಸೂರ್ಯಾಸ್ಯಕ್ಕೆ ಒಂದು ದಿವಸ.ಈ ರೀತಿಯಾಗಿದಿನ ಗಣನೆ.ಪಂಚಾಂಗಗಳಲ್ಲಿ ಮೇಲ್ಬದಿಯಿಂದ ಕೆಳಗಡೆ ಇರುವ ಸಾಲುಗಳಲ್ಲಿ ರಾಷ್ಠ್ರೀಯ ಮಾಸ, ಆಂಗ್ಲ ದಿನಾಂಕ,ಸೌರಮಾನ ದಿವಸ [ಕೆಲವು ಪಂಚಾಂಗಗಳಲ್ಲಿ ಗ್ರಹಗಳ ದಿನಗತಿ {ಚಾರ} } ತಿಳಿಸುತ್ತಾರೆ. ದಿನಾಂಕದ ನೇರ ಸಾಲಿನಲ್ಲಿ ತಿಥಿ,ವಾರ, ನಕ್ಷತ್ರ, ಯೋಗ,ಕರಣ,ವಿಷ ಘಳಿಗೆ,ವಿಷ ಶೇಷ [ಇದ್ದರೆ],ಅಮೃತ ಘಳಿಗೆ, ಅಮೃತ ಶೇಷ [ಇದ್ದರೆ] ಗ್ರಹಗಗಳಚಾರ ಸ್ಥಿತಿ, ಮುಖ್ಯ ವಿಚಾರಗಳಿದ್ದರೆ ಅವುಗಳನ್ನು ಸೂಚಿಸುತ್ತಾರೆ.ತಿಥಿಗಳನ್ನು ಅಂಕೆಯಲ್ಲಿ,ವಾರ,ನಕ್ಷತ್ರ ಯೋಗ, ಕರಣ,ಇವುಗಳ ಮುಂದೆ ಅವುಗಳು ಆ ದಿನ ಸೂರ್ಯೋದಯದ ನಂತರ ಎಷ್ಟು ಸಮಯದ ತನಕ ಇರುತ್ತವೆ ಎಂಬುದನ್ನು ಘಳಿಗೆಗಳಲ್ಲಿ ತಿಳಿಸುತ್ತಾರೆ.ೈತ್ತೀಚೆಗೆ ಕೆಲವು ಪಂಚಾಂಗಗಳಲ್ಲಿ ಇವುಗಳನ್ನು ಘಳಿಗೆಗಳಲ್ಲಿ ಹಾಗೂ ಗಂಟೆ, ನಿಮಿಷಗಳಲ್ಲಿ ತಿಳಿಸಲು ಆರಂಬಿಸಿರುತ್ತಾರೆ.ವಿ= ವಿಷ;ಅ=ಅಮೃತ; ವಿ.ಶೆ= ವಿಷಶೇಷ; ಅ.ಶೆ.=ಅಮೃತ ಶೇಷ ಎಂದು ಸಂಕೇಯ ಅಕ್ಷರಗಳು.ವಾರ, ನಕ್ಷತ್ರ,ಯೋಗ,ಕರಣ ಗಳನ್ನು ಸಂಕೇತಾಕ್ಷರಗಳಲ್ಲಿ ನಮೂದಿಸಲಾಗುತ್ತಿದೆ.ವಿಷ ಹಾಗೂ ಅಮೃತ ಸಂಕೇತಾಕ್ಷರಗಳ ಮುಂದೆ ನಮೂದಿಸಲಾಗುವ ಅಂಕೆಗಳು ಆ ದಿವಸ ಅಷ್ಟು ಸಮಯದ ನಂತರ ನಾಲ್ಕು ಘಳಿಗೆಗಳ ಕಾಲ ವಿಷ,ಅಮೃತ ಕಾಲವಾಗಿರುತ್ತದೆ ಎಂದು ತಿಳಿದುಕೊಳ್ಳಬೇಕು.ವಿಷ ಶೇಷ, ಅಮೃತ ಶೇಷ ಸಂಕೇತಾಕ್ಷರಗಳ ಮುಂದೆ ಸೂಚಿಸುವ ಅಂಕೆಯು ಅಷ್ಟು ಸಮಯ ಕಾಲ ಅವುಗಳು ಸೂರ್ಯೋದಯದ ನಂತರ ಇರುವ ಕಾಲ ಆಗಿರುತ್ತದೆ ಎಂದು ತಿಳಿದು ಕೊಳ್ಳಬೇಕು.ಪಂಚಾಂಗಗಳ ಪುಟದಲ್ಲಿ ಒಂದು ಕುಂಡಲಿಯನ್ನು ಕಾಣಬಹುದಾಗಿದೆ. ಅದರಲ್ಲಿ ರವಿ [ರ]; ಚಂದ್ರ [ಚ]; ಕುಜ [ಕು] ; ಬುಧ [ಬು] ; ಗುರು [ಗು] ; ಶುಕ್ರ [ಶು] ; ಶನಿ [ಶ] ರಾಹು [ರಾ] ; ಕೇತು [ಕೇ] ಈರೀತಿಯಾಗಿ 9 ಗ್ರಹಗಳನ್ನು ನಮೂದಿಸಲಾಗುತ್ತಿದ್ದು ಅವು ಆಯಾ ಪಕ್ಷ ಅಂತ್ಯದ ದಿವಸದ ಗ್ರಹ ಸ್ಥಿತಿಯಾಗಿರುತ್ತದೆ. ಈ 9 ಗ್ರಹಗಳ ಪೈಕಿ ರಾಹು ,ಕೇತು ಗ್ರಹಗಳ ಹೊರತಾಗಿ ಏಳು ಗ್ರಹಗಳು ಸ್ವತಂತ್ರ ಗ್ರಹಗಳಾಗಿದ್ದು ಮೇಷ ರಾಶಿಯಿಂದ ಆರಂಬಿಸಿ ಪ್ರದಕ್ಷಿಣಾಕಾರವಾಗಿ ಚಳಿಸುವುದಾಗಿದ್ದು ರಾಹುಮತ್ತು ಕೇತುಗ್ರಹಗಳು ಸ್ವತಂತ್ರ ಅಸ್ಥಿತ್ವವಿಲ್ಲದ ಛಾಯಾ ಗ್ರಹಗಳಾಗಿ ಅ ಪ್ರದಕ್ಷಿಣಾಕಾರವಾಗಿ ಚಲಿಸುವುದಾಗಿದೆ. ಕೆಲವೊಮ್ಮೆ ಪ್ರದಕ್ಷಿಣಾಕಾರವಾಗಿ ಸುತ್ತುವ ಗ್ರಹಗಳು ಹಿಮ್ಮುಖವಾಗಿ ಚಲಿಸುವುದಿದ್ದು ಆಗ ಅವು ವಕ್ರೀ ಗ್ರಹಗಳೆನಿಸುತ್ತವೆ. ಉದಾಹರಣೆಗೆ" ಭ ೧ ಬುಧ ೩೬ " ಎಂದಿದ್ದರೆ ಆ ದಿನ ಸೂರ್ಯೋದಯದ ನಂತರ ೩೬ ಘಲಿಗೆಗೆ ಅಶ್ವಿನಿ ನಾಲ್ಕನೆ ಪಾದದಿಂದ ಭರಣಿ ಒಂದನೆ ಪಾದಕ್ಕೆ ಬುಧ ಪ್ರವೇಶಿಸುತ್ತಾನೆ ಎಂದು ಅರ್ಥವಿಸಿಕೊಳ್ಳ ಬೇಕು. ಅದೇ ರೀತಿ "ಭ ೧ ವ.ಬು ೩೬" ಎಂದಿದ್ದರೆ ಆ ದಿನ ಸೂರ್ಯೋದಯದ ನಂತರ ೩೬ ಘಳಿಗೆಯಲ್ಲಿ ಭರಣಿ ೨ ನೇಪಾದದಿಂದ ಬುಧ ಭರಣಿ ೧ ನೇ ಪಾದಕ್ಕೆ ಹಿಮ್ಮುಖವಾಗಿ ಪ್ರವೇಶಿಸುತ್ತಾನೆ ಎಂದು ಅರ್ಥವಿಸಿಕೊಳ್ಳಬೇಕು.ಹಿಮ್ಮುಖ ಚಲನೆಯನ್ನು ವಕ್ರಗತಿ ಎನ್ನುವುದಾಗಿದೆ. ಈ ಗ್ರಹಗಳ ಪೈಕಿ ಯಾವ ಗ್ರಹವು ಆಕಾಶದಲ್ಲಿ ಗೋಚರಿಸುವುದಿಲ್ಲವೋ,ಆಗ ಆ ಗ್ರಹವು ಅಸ್ತವಾಗಿದೆ ಎನ್ನುವುದಾಗಿದೆ. ಮತ್ತು ಅದನ್ನು ಗ್ರಹ ’ಮೌಢ್ಯ" ವೆನ್ನುವುದಾಗಿದೆ. ಪಂಚಾಂಗಳಲ್ಲಿ ಯಾವ ಗ್ರಹವನ್ನು ಅಸ್ತ ಗ್ರಹವೆಂದು ನಮೂದಿಸಿರುತ್ತಾರೋ ಆ ಗ್ರಹಕ್ಕೆ ಮೌಢ್ಯವಿದೆ ಎನ್ನುವುದಾಗಿದೆ. ಯಾವ ದಿನ ಪರ್ವಾದಿ ವಿಷೇಶಗಳಿವೆಯೋ ಅವುಗಳನ್ನು ಆಯಾ ದಿನದ ಸಾಲಿನಲ್ಲಿ ನಮೂದಿಸುತ್ತಾರೆ.ಪಂಚಾಂಗಗಳಲ್ಲಿ | ಈರೀತಿಯ ಗೆರೆಗಳು ಘಳಿಗೆಗಳ ಮುಂದೆ ಕಾಣಿಸಿಕೊಂಡಲ್ಲಿ |=೧/೪ಘಳಿಗೆ; ||= ೧/೨ಘಳಿಗೆ; |||= ೩/೪ ಘಳಿಗೆ ಎಂದು ಅರ್ಥವಿಸಿ ಕೊಳ್ಳಬೇಕು.

 ಪಾಠ ೧ ರಿಂದ ಪಾಠ ೧೨ ರ ವರೆಗಿನ ಪಾಠಗಳಲ್ಲಿ ವಿವರಿಸಿದ ಅಂಶಗಳನ್ನು ಅರ್ಥವಿಸಿಕೊಂಡಲ್ಲಿ ಪಂಚಾಂಗ ನೋಡಿ ಆಯಾ ದಿನದ ದಿನ ಸ್ಥಿತಿಗಳನ್ನು ಕಂಡುಕೊಳ್ಳಲು ಕಷ್ಟವಾಗಲಾರದು.   ಮುಂದಿನ ಪಾಠ :-  ಕಾಲ ನಿರ್ಣಯ.
           
       ಪಾಠಃ- ೧೩                                 ಕಾಲ ನಿರ್ಣಯ ಕೋಷ್ಠಕ 
                                
                           ----------------------------
                           ಭಾರತೀಯ ಕಾಲಮಾನ ಪದ್ದತಿ
                           ----------------------------

    ಭಾರತೀಯ ಕಾಲಮಾನ ಪದ್ದತಿಯಲ್ಲಿ ವರ್ಷವನ್ನು ಸಂವತ್ಸರವೆಂದು ಕರೆಯುವುದಾಗಿದೆ.

       ೧  ಸಂವತ್ಸರ = ೨ ಅಯನಗಳು =೬ ಋತುಗಳು = ೧೨ ತಿಂಗಳುಗಳು. 
                          ೧ ಅಯನ = ೩ ಋತುಗಳು =೬ ಮಾಸ[ತಿಂಗಳು]ಗಳು
                          ೧  ಋತು = ೨ ತಿಂಗಳುಗಳು
                          ೧  ತಿಂಗಳು =೨ ಪಕ್ಷಗಳು= ೪ ವಾರಗಳು= ೩೦ ದಿವಸ
                          ೧ ಪಕ್ಷ = ೧೫ ದಿವಸಗಳು= ೨ ವಾರಗಳು
                          ೧ ವಾರ = ೭ ದಿವಸ
            ೧ ದಿವಸ = ೮ ಯಾಮ/ಜಾಮ/ಜಾವ= ೬೦ ಘಳಿಗೆ/ಕಲೆ/ಫಳ/ಘಟಿ ಗಳು 
                          ೧ ಯಾಮ = ೭೧/೨ ಘಳಿಗೆಗಳು=ದಿನದ ೧/೮ ಭಾಗ.
                          ೧ ಘಳಿಗೆ = ೬೦ ವಿಘಳಿಗೆ/ವಿಘ್ಟಿ/ವಿಕಲೆ/ವಿಫಳ
                          ೧ ವಿಘಳಿಗೆ= ೬೦ ಲಿಪ್ತಿ
                          ೧ ಲಿಪ್ತಿ = ೬೦ ಪರ
                          ೧ ಪರ = ೬೦ ತತ್ಪರ
      ೧ ಅಕ್ಷಿ ಸ್ಪಂದನ ಕಾಲ=ಒಮ್ಮೆ ಕಣ್ಣು ರೆಪ್ಪೆ ಮುಚ್ಚಿ ತೆರೆಯುವ ಕಾಲ=೧ ನಿಮೇಷ[ ನಿಮಿಷ ಅಲ್ಲ]
                          ೧೮ ನಿಮೇಷ= ೧ ಕಾಷ್ಠ
                          ೩೦ ಕಾಷ್ಠ= ೧ ಕಲಾ
                          ೩೦   ಕಲಾ = ೧ ಕ್ಷಣ
                          ೧೨ ಕ್ಷಣ = ೧ ಮುಹೂರ್ತ
                          ೧ ಮುಹೂರ್ತ = ೨ ಘಟೀ ಕಾಲ
                          ೧೫ ಮುಹೂರ್ತ = ೧ ಹಗಲು / ರಾತ್ರೆ
                          ೩೦  ಮುಹೂರ್ತ = ೧ ಅಹೋರಾತ್ರೆ

              ಶುಭ ಕಾರ್ಯಗಳಿಗೆ ಪಂಚಾಂಗಳಲ್ಲಿ ಸೂಚಿಸುವ ಮುಹೂರ್ತಗಳ ಕಾಲಮಿತಿ

      ೧ ಮುಹೂರ್ತದ ಸಮಯ ೨ ಘಟಿಯಾಗಿದ್ದರೂ [48 ಮಿನಿಟ್] ಶುಭ ಕಾರ್ಯಗಳಿಗೆ ಶುಭ ಮುಹೂರ್ತವನ್ನು ನಿಗದಿ ಮಾಡುವಾಗ ಶುಭ ಗ್ರಹರ ನವಾಂಶ, ವರ್ಗೋತ್ತಮಾಂಶ, ಪುಷ್ಕರಾಂಶ, ಗ್ರಹರ ಶುಭಾಶುಭ ಸ್ಥಿತಯನ್ನು ವಿಮರ್ಷಿಸಿ ಶುಭಾಂಶಗಳು ದೊರಕುವ ಕಾಲವನ್ನು ಶುಭ ಮುಹೂರ್ತವೆಂದು ಪರಿಗಣಿಸುವುದಾಗಿದೆ. ಆ ಮುಹೂರ್ತ ಕಾಲವು ಪಂಚಾಂಗದಲ್ಲಿ ಸೂಚಿಸುವ ಸಮಯದಿಂದ ಅರ್ಧ ಘಳಿಗೆ [=12 ಮಿನಿಟ್] ಇರುವುದಾಗಿದ್ದು ಆ ಸಮಯದಲ್ಲಿ ಶುಭಕಾರ್ಯಗಳಿಗೆ ಸಂಬಂಧಿಸಿದ ಪ್ರಧಾನ ಕಾರ್ಯವನ್ನು ನೆರವೇರಿಸಬೇಕು.                    “““““““““““““““““““““““““““““““““““““““““““““““““““““““““““““““‘““““““““““““““““““
                                ಪಾಶ್ಚಾತ್ಯ ಕಾಲಮಾನಪದ್ದತಿ
     ~~~~~~~~~~~~~~~~~~~~~~~~~~~~~~~~~~~~~
                         ೧ ವರ್ಷ =೩೬೫ ದಿವಸ = ೧೨ ವಾರ= ೧೨ ತಿಂಗಳುಗಳು
                         ೧ ತಿಂಗಳು= ೩೦ ದಿವಸ =೪ ವಾರ ಗಳು.
                         ೧ ವಾರ = ೭ ದಿವಸಗಳು
                         ೧ ದಿವಸ= ೨೪ ಗಂಟೆ/ಘಂಟೆ
                         ೧ ಗಂಟೆ = ೬೦ ಮಿನಿಟು/ನಿಮಿಷ
                         ೧ ನಿಮಿಷ/ಮಿನಿಟು= ೬೦ ಸೆಕುಂಡು

                                     “““““““““““““““““““““““““‘    
                                      ಪರಿವರ್ತನಾ ಕೋಷ್ಠಕ 
                                     ““““““““““““““““““““““““““

                                ೧ ದಿವಸ= ೨೪ ಗ್ಟಂಟೆ = ೩ ಯಾಮ/ಜಾವ/ಜಾಮ.
                                ೧ ಗಂಟೆ = ೨ ೧/೨ ಘಳಿಗೆ.
                                ೨೪ ನಿಮಿಷ = ೧ ಘಳಿಗೆ.
                                ೧೨ ನಿಮಿಷ =೩೦ ವಿಘಳಿಗೆ.
                                ೬ ನಿಮಿಷ   = ೧೫ ವಿಘಳಿಗೆ
                                ೩  ನಿಮಿಷ =   ೭ ೧/೨ ವಿಘಳಿಗೆ
                                ೧ ೧/೨ ನಿಮಿಷ = ೩ ೩/೪ ವಿಘಳಿಗೆ
                                ೨೪ ಸೆಕುಂಡು = ೧ ವಿಘಳಿಗೆ.

 ===============================================
                        ಭದ್ರಮ್                     ಶುಭಮ್                             ಮಂಗಲಮ್
 ===============================================
   
     ದಿನಾಂಕ 04-03-2012ರಿಂದ ಇದು ತನಕ 15 ಕಂತುಗಳಲ್ಲಿ  ಯಥಾಮತಿ ವಿವರಿಸಿದ್ದು ಇದರಲ್ಲಿ ವಿವರಿಸದೆ  ಇರುವ ವಿಚಾರಗಳು ಆಯಾ ಪಂಚಾಂಗಗಳಲ್ಲಿ ವಿವರಿಸಿರುತ್ತಾರೆ. ಇದು ಕೇವಲ ಭಾರತೀಯ ಪರಂಪರೆಯ ಜ್ಯೋತಿಷ್ಯ ಶಾಸ್ತ್ರದ ಮೂಲ ಪಾಠಗಳಾಗಿದ್ದು ಇಷ್ಟನ್ನು ಅರ್ಥವಿಸಿಕೊಂಡಲ್ಲಿ ಪಂಚಾಂಗವನ್ನು ನೋಡಿ ದೈನಂದಿನ ಕಾಲ,ಗ್ರಹ,ಗತಿಯನ್ನು ಅರ್ಥವಿಸಬಹುದಾಗಿದೆ. ಇಂದಿನ ಯಾಂತ್ರಿಕ ಯುಗದಲ್ಲಿ ಇಂತಹಾ ವಿಚಾರಗಳನ್ನು ಮೆಚ್ಚುವವರಾಗಲೀ, ಅನುಸರಿಸುವವರಾಗಳಿ ಕಡಿಮೆಯಿರಬಹುದಾದರೂ  ಬೆರಳೆಣಿಕೆಯ ಮಂದಿಗಾದರೂ ಪ್ರಯೋಜನವಾಗ ಬಹುದು ಎಂಬುದು ನನ್ನ ಅನಿಸಿಕೆ.

*********************************************************
        ಈ ಲೇಖನ ಮಾಲಿಕೆಯನ್ನು ಆರಂಬಿಸಲು ಅವ್ಯಕ್ತವಾಗಿ ಪ್ರೇರಣೆಯಿತ್ತು ನನ್ನಿಂದ ಈ ಕಾರ್ಯವನ್ನು ಮಾಡಿದಿಸಿದ ನನ್ನ ಆರಾಧ್ಯ ಗುರುಪರಂಪರೆಯ ಜಗದ್ಗುರು ಶಂಕರಾಚಾರ್ಯ ಅವಿಛ್ಚಿನ್ನ ಪರಂಪರೆಯ ಶ್ರೀ ಶ್ರೀ ಶ್ರೀಮದ್ಜಗದ್ಗುರು ಶಂಕರಾಚಾರ್ಯ ಶ್ರೀಮದ್ರಾಘವೇಶ್ವರ ಭಾರತೀ ಮಹಾ ಸ್ವಾಮಿಗಳವರ ದಿವ್ಯ ಚರಣಾರವಿಂದಗಳಿಗಿದು ಭಕ್ತಿ ಪೂರ್ವಕ ಸಮರ್ಪಿಸಲ್ಪಡುತ್ತಿದೆ. ಎಲ್ಲರಿಗೂ ಆ ಗುರುಗಳು ಸನ್ಮತಿಯ ಕರುಣಿಸಲಿ.

*********************************************************
                                    ದಿನಾಂಕ:- ೩೦-೦೯-೨೦೧೨
*********************************************************

9 comments:

  1. dhanyavaadagalu

    ReplyDelete
  2. ತಮ್ಮ ಆಸಕ್ತಿಗಾಗಿ ಗೌರವ ಪೂರ್ಣ ನಮನಗಳು.

    ReplyDelete
  3. ಬಾಲ್ಯದಲ್ಲಿ ಸಂಜೆ ಒತ್ತಾಯಪೂರ್ವಕವಾಗಿಯದರೂ ಅಜ್ಜನವರು ಹೇಳಿಸುತ್ತಿದ್ದದ್ದು ನೆನಪಾಯಿತು.. ನಿಜಕ್ಕೂ ಸಂಗ್ರಹಯೋಗ್ಯ ಮಾಲಿಕೆ...

    ReplyDelete
    Replies
    1. ತಮ್ಮ ಪ್ರೋತ್ಸಾಹಕಾರಕ ಪ್ರತಿಕ್ರಿಯೆಗಾಗಿ ಗೌರವಪೂರ್ಣ ನಮನಗಳು.

      Delete
    2. ಅಕ್ಷರಗಳ ಬಣ್ಣ ಕಪ್ಪು ಇದ್ದರೆ ಓದಲು ಸುಲಭ. ಈಗ ನೀಲಿ ಬಣ್ಣ ಕಣ್ಣು ಕುಕ್ಕುವ ಹಾಗೆ ಇದೆ. ಹಿನ್ನೆಲೆ ಬಣ್ಣ ಬಿಳಿ ಇದ್ದರೆ ಕಣ್ಣಿಗೆ ಹಿತ. ಸಹನೆ ಇರಲಿ ಸಹಕಾರ ಬರಲಿ. ಧನ್ಯವಾದಗಳು.

      Delete
  4. ಧನ್ಯವಾದ ಗಳು .

    ReplyDelete
  5. ಉಪಯುಕ್ತ ಮಾಹಿತಿ

    ReplyDelete
  6. ಬಹಳಷ್ಟು ಉಪಯುಕ್ತ ಮಾಹಿತಿ

    ReplyDelete
  7. ಮಕ್ಕಳಿಗೆ ಹಿಂದೆ ತಂದು ಕೊಟ್ಟು ಅಭ್ಯಾಸ ಮಾಡಿಸುತ್ತಿದ್ದ *ಮಗ್ಗಿಪುಸ್ತಕ*ದ ಹಾಗೆಯೇ ಸಂಗ್ರಹಯೋಗ್ಯ ಮತ್ತು ಉಪಯುಕ್ತ!

    ReplyDelete