Tuesday 16 October 2012

ಪಂಚಮುಖಿ ರುದ್ರನಲ್ಲೇನಿಹು ರಹಸ್ಯ? [ಸಂಗ್ರಹ]

                                                    *   || ಹರೇ ಶ್ರೀರಾಮ್ ||  *                

                                       ಪಂಚಮುಖಿ ರುದ್ರನಲ್ಲೇನಿಹುದು ರಹಸ್ಯ?
                                                 [ಸಂಗ್ರಹಿಸಿ  ನಿರೂಪಿಸಿದ ಲೇಖನ]
                                                 ~~~~~~~~~~~~~~~~~~~

      "ನಮ:ಶಿವಾಯ"ಇದು ಕಾಲ ರುದ್ರ ಪರಮೇಶ್ವರನ ಮಹಾಮಂತ್ರ.ಭಕ್ತ ಜನ ಮಾನ್ಯರು ಶ್ರಧ್ಧಾ ಭಕ್ತಿ ಪುರಸ್ಸರ ನಂಬಿ ಆರಾಧಿಸುತ್ತಾ ಬಂದಿರುವ ಪಂಚಮುಖಿ ರುದ್ರನ [ಪಂಚಲಿಂಗೇಶ್ವರ ಸ್ವಾಮಿಯ] ಪವಿತ್ರ ಪಂಚಾಕ್ಷರಿ ಮೂಲಮಂತ್ರ. ಸಕಲ ಬ್ರಹ್ಮಾಂಡವನ್ನಾವರಿಸಿರುವ ಶಿವಶಕ್ತಿಯ ಮಹಾರಹಸ್ಯ ಈ ಮಹಾ ಮಂತ್ರದಲ್ಲಡಗಿದೆ. ಏನೀ ಶಿವಶಕ್ತಿ?

      "ರುತ್ ದ್ರಾವಯತೀತ ರುದ್ರ" ಅಂದರೆ ರುತ್= ದು:ಖವನ್ನು ದ್ರಾವಯತ್=ದ್ರವಯಿಸುವಂತವನು=ಕರಗಿಸುವಂತವನು, ಯಾವನೋ ಅವನೇ ರುದ್ರ.

   "ಲೀನಂ ಅರ್ಥಂಗಮಯರೇತಿ ಲಿಂಗಮ್"=ತನ್ನೊಳಗೆ ಲೀನ ಮಾಡಿಕೊಳ್ಳುವಂತಹದು ಯಾವುದೋ ಅದುವೇ ಲಿಂಗ. ಇದು ರುದ್ರ ಹಾಗೂ ರುದ್ರರೂಪೀ ಲಿಂಗದ ಪದಗಳ ಅರ್ಥ. 

     ಮಹಾರುದ್ರನ ಪಂಚ ಮುಖಗಳ ಕುರಿತು - ಆ ಪಂಚ ಮುಖಗಳಲ್ಲಡಗಿರುವ ಪಂಚ ತತ್ವಗಳ ಕುರಿತು,ಆ ಪಂಚ ತತ್ವಗಳು ಮಾನುಷ ಪ್ರಪಂಚವಾದ ಈ ಸೃಷ್ಟಿಯಲ್ಲಿ ಯಾವ ರೀತಿಯಾಗಿ ಅಭೇಧ್ಯವಾಗಿವೆ ಎಂಬುದನ್ನು  ಅರಿತುಕೊಳ್ಳುವ ಚಿಕ್ಕ ಪ್ರಯತ್ನವೇ ಈ ಲೇಖನದ ಉದ್ದೇಶ. ಈ ಹಾದಿಯಲ್ಲಿ "ನಮ:ಶಿವಾಯ"ದಲ್ಲೇನಡಗಿದೆಯೆಂಬುದನ್ನು ಪರಿಚಯಿಸಿಕೊಳ್ಳೋಣ.


     ಸೃಷ್ಟಿಯ ಆದಿಯಲ್ಲಿ ಸೃಷ್ಟಿಕರ್ತನಾದ ಬ್ರಹ್ಮನಿಗೆ ಐದು ಮೊಗಗಳಿದ್ದು ಆತ ಪಂಚವದನನಾಗಿದ್ದ ಹಾಗೂ ಇಡಿಯ ಬ್ರಹ್ಮಾಂಡವು ತನ್ನಿಂದಾಗಿಯೇ ಅಸ್ಥಿತ್ವದಲ್ಲಿದೆ ಎಂಬ ಅಹಂಕಾರದಿಂದ ಮದೋನ್ಮತ್ತನಾಗಿ ವರ್ತಿಸುತ್ತಲಿದ್ದಾಗ, ತನ್ನ ನಾಭೀಕಮಲದಿಂದ ಜನಿಸಿದ ಬ್ರಹ್ಮನು ತನ್ನ ಮಗನು, ತಾನು ಅವನಿಗಿಂತ ಶ್ರೇಷ್ಟನೆಂಬ ವಾದವನ್ನು ಮಹಾವಿಷ್ಣು ಮುಂದೊಡ್ಡಿದಾಗ ಅವರೀರ್ವರೊಳಗೆ ಘನ ಘೋರ ಕಲಹವೇರ್ಪಟ್ಟು ಬ್ರಹ್ಮಾಂಡ ಪೂರ್ಣ ಚಿಂತಾಕ್ರಾಂತವಾಗಿ ಮಹಾರುದ್ರನಿಗೆ ರಕ್ಷಿಸುವಂತೆ ಮೊರೆಯಿಟ್ಟಿತು. ಆತನು ಬ್ರಹ್ಮ ವಿಷ್ಣುರವರ ಮಧ್ಯೆ ಬೃಹದಾಕಾರದ ಲಿಂಗ ರೂಪದಿಂದ ಪ್ರತ್ಯಕ್ಷನಾಗಿ ಅವರುಗಳನ್ನು ಶಾಂತಗೊಳಿಸಿ ಬ್ರಹ್ಮನ ಅಹಂಕಾರಕ್ಕೆ ಕಾರಣವಾಗಿದ್ದ ಐದನೇ ಮುಖವನ್ನು ಭೈರವನ ಮುಖಾಂತರ ತುಂಡರಿಸಿ ತನ್ನ ಕಂಠಮಾಲೆಯಲ್ಲಿ ಧರಿಸಿದನೆಂದು ಪುರಾಣಗಳ ಮುಖೇನ ಅರಿವಾಗುತ್ತಿದೆ. ಪ್ರಕೃತಿ ತತ್ವದ ಬ್ರಹ್ಮಾಂಡವೇ ಆತನ ಲಿಂಗ ರೂಪಕ್ಕೆ ಪಾಣಿ ಪೀಠವಾಗಿ, ಆ ಪಾಣಿಪೀಠದ ಮೇಲೆ ನಿಂತ ಲಿಂಗ ರೂಪವೇ "ಪುರುಷ" ತತ್ವವಾಗಿ ಸೃಷ್ಟಿಕಾರ್ಯದಲ್ಲಿ ಪ್ರಕೃತಿ-ಪುರುಷರ ಅವಿನಾಭಾವ ಸಂಬಂಧವನ್ನು ಪ್ರತಿಪಾದಿಸುತ್ತಲಿದ್ದು ಜಗತ್ತಿಗೆ ಐಕ್ಯತೆಯ ಸಂದೇಶವನ್ನು ಸಾರುತ್ತಲಿದೆ. 


 ಪಶ್ಚಿಮದಿಂದಅನುಕ್ರಮವಾಗಿಸದ್ಯೋಜಾತ{ಪಶ್ಚಿಮಮುಖಿ},ವಾಮದೇವ{ಉತ್ತರಮುಖಿ},ತತ್ಪುರುಷ{ಪೂರ್ವಮುಖಿ}, ಅಘೋರ{ದಕ್ಷಿಣಮುಖಿ}ಈಶಾನ{ಊರ್ಧ್ವ ಮುಖಿ}ಗಳೆಂಬ ಸ್ವರೂಪಗಳಿಂದ ಪಂಚಲಿಂಗೇಶನಾಗಿ ಪಂಚಮುಖಿರುದ್ರನ ಆವಿರ್ಭಾವವಾಗಿದೆ. ಈ ರೀತಿಯಾಗಿ ಪಂಚಲಿಂಗೇಶನಾಗಿ ಮಹಾಸ್ವಾಮಿ ಕಾಲರುದ್ರನ ಆವಿರ್ಭಾವೆಂತಾಯಿತು ಎಂಬುದರ ಬಗ್ಗೆ ತಿಳಿದುಕೊಳ್ಳೋಣ.


    ಶಸ್ತ್ರಗಳಿಂದ ವಧಿಸಲು ಅಸಾಧ್ಯವಾಗಿದ್ದಂತಹ ಸುಂದೋಪಸುಂದರ ವಧಾರ್ಥವಾಗಿ ತಿಲೋತ್ತಮೆಯು ಮಹಾಕಾಲರುದ್ರನ ಅನುಗ್ರಹ ಪಡೆಯಲು ಪ್ರದಕ್ಷಿಣೆಯಿಂದೊಡಗೂಡಿದ ಮಹಾಘೋರ ತಪಸ್ಸನ್ನು ಆಚರಿಸುತ್ತಲಿದ್ದಾಗ ಚತುರ್ದಿಕ್ಕುಗಳನ್ನು ವೃತ್ತಾಕಾರವಾಗಿ ಪ್ರದಕ್ಷಿಸುತ್ತಿರುವ ಆಕೆಯ ಘೋರ ತಪಶಕ್ತಿಯ ಸೊಬಗನ್ನು ವೀಕ್ಷಿಸಲೋಸುಗವಾಗಿ ರುದ್ರನು ಚತುರ್ದಿಕ್ಕುಗಳಿಗೆ ನಾಲ್ಕು ಹೆಚ್ಚಿನ ಮುಖಗಳನ್ನು ಸೃಷ್ಟಿಸಿಕೊಂಡು ಪಂಚಾಂಗರುದ್ರ-ಪಂಚಮುಖಿರುದ್ರ-ಪಂಚಲಿಂಗೇಶ್ವರನಾಗಿ ಪ್ರಕಾಶಗೊಂಡನು ಎಂಬುದಾಗಿ ದೇವೀ ಪುರಾಣದಲ್ಲಿ ಹೇಳಿದ್ದಿದೆ. ಶಿವ ಪುರಾಣದ ಶತರುದ್ರ ಸಂಹಿತೆಯಲ್ಲಿ ಇದಕ್ಕಿಂತ ಬಿನ್ನವಾದ ನಿರೂಪಣೆ ಇದ್ದು "ಶ್ವೇತಲೋಹಿತ"ವೆಂಬ ಹತ್ತೊಂಬತ್ತನೆಯ ಕಲ್ಪದಲ್ಲಿ ಯೋಗನಿದ್ರೆಯಲ್ಲಿದ್ದ ಶಿವನು ಬ್ರಹ್ಮ ಶಿಖೆಯಿಂದ "ಸದ್ಯೋಜಾತ"ನಾಗಿ ಪಶ್ಚಿಮಮುಖಿಯಾಗಿ ಅವತರಿಸಿದನು. ಇಪ್ಪತ್ತನೆಯ "ರಕ್ತ"ನಾಮಕವೆಂಬ ಕಲ್ಪದಲ್ಲಿ "ವಾಮದೇವ"ನೆಂಬ ಹೆಸರಿನಲ್ಲಿ ಉತ್ತರಮುಖಿಯಾಗಿ ಅವತರಿಸಿದನು."ಪೀತವಾಸ" ಬ್ರಹ್ಮಕಲ್ಪದಲ್ಲಿ "ತತ್ಪುರುಷ"ನೆಂಬ ನಾಮದಿಂದ ಪೂರ್ವಮುಖಿಯಾಗಿ ಅವತರಿಸಿದನು."ಶಿವ"ನಾಮಕವೆಂಬ ಕಲ್ಪದಲ್ಲಿ "ಅಘೋರ"ನೆಂಬ ಹೆಸರಿನಿಂದ ದಕ್ಷಿಣಮುಖಿಯಾಗಿ ಉದಿಸಿದನು "ವಿಶ್ವರೂಪ’ವೆಂಬ ಬ್ರಹ್ಮಕಲ್ಪದಲ್ಲಿ ಈಶಾನ’ನಾಗಿ ಈಶಾನ್ಯ ದಿಕ್ಕಿನಲ್ಲಿ ಊರ್ಧ್ವಮುಖಿಯಾಗಿ ಜನಿಸಿದನು. ಈ ಐದು ಮುಖಗಳೇ ಪಂಚಮುಖಿರುದ್ರ-ಪಂಚಾಂಗರುದ್ರ- ಪಂಚಲಿಂಗೇಶ್ವರ ಎಂಬ ಅಭಿನಾಮದಿಂದ ಗುರುತಿಸಿಕೊಂಡವು ಎಂದು ನಿರೂಪಿಸಿದ್ದಿದೆ. ಈ ನಿರೂಪಣೆಗಳು ಭಿನ್ನ ಅಭಿಪ್ರಾಯಗಳಿಂದ ಕೂಡಿದ್ದರೂ ಪಂಚಾಂಗರುದ್ರನ ಆವಿರ್ಭಾವವನ್ನು ಬ್ರಹ್ಮಾಂಡವು ಪುರಸ್ಕರಿಸಿದೆ ಎಂಬುದರಲ್ಲಿ ಭಿನ್ನತ್ವ ಕಂಡುಬರುತ್ತಿಲ್ಲ. ಪ್ರಕೃತ ಈ ಪಂಚಮುಖ ಶಕ್ತಿಯ ಬಗೆಗೆ ಸಂಕ್ಷಿಪ್ತವಾಗಿ ಅರಿವು ಮೂಡಿಸಿಕೊಳ್ಳಲು ಯತ್ನ ಮಾಡೋಣ.


     ಸದ್ಯೋಜಾತ:


         ಈತನು ಪಶ್ಚಿಮಮುಖಿ; ಶಿವ ತತ್ವಕಾರಕ; ಲೋಕ ಕಾರ್ಯನಿರತ; ಹಿಮಾಲಯದಂತೆ ಶುಭ್ರನಾಗಿದ್ದು ಮಲ್ಲಿಗೆಯಂತೆ ಸ್ವಚ್ಚನಿರುವನು. ಹಾಲಿನ ನೊರೆಯಂತಹ ಕಾಂತಿಯಿಂದ ಕೂಡಿ ಭಸ್ಮ ಲೇಪಿತ ಶರೀರಿಯಾಗಿರುವನು ಭ್ರೂಮಧ್ಯದಲ್ಲಿ ಅಗ್ನಿನೇತ್ರನಾಗಿ, ವಿರಾಜಮಾನನಾಗಿ ಋಗ್ವೇದ ನಾದಪ್ರಿಯನಿದ್ದು ಮನಸ್ಸಿನ ಅಧಿಷ್ಠಾನ ಮೂರ್ತಿಯಾಗಿರುವನು. ಪೃಥ್ವೀ {ಭೂಮಿ} ತತ್ವಕ್ಕೆ ಅಧಿಪತಿ. ಈ ತತ್ವಕ್ಕೆ ಸಂಬಂಧಿಸಿದ ವಿಷಯಗಳ ಕುರಿತಂತೆ ನಿಗ್ರಹಾನುಗ್ರಹಕಾರಕನಿವನು.


     ವಾಮದೇವ:


        ಉತ್ತರಮುಖಿಯಾಗಿ "ಗಣೇಶ" ತತ್ವ ಪ್ರತಿಪಾದಕ. ಕುಂಕುಮ ಕೇಸರಿ ಲೇಪಿತ ಬಿಳಿ ವರ್ಣದ ಶರೀರದಿಂದ ಕೂಡಿದವನಾಗಿ, ಹಣೆಯಲ್ಲಿ ಶುಭ್ರವಾದ ತಿಲಕವನ್ನಿರಿಸಿಕೊಂಡು ವೇದಗಳನ್ನು ಪಠಿಸುತ್ತಿರುವನು, ನೀಲಿಯ ಮುಂಗುರುಳುಗಳಿಂದ ಕೂಡಿ, ಕೆಂಪಾದ ತುಟಿಯುಳ್ಳವನಾಗಿ, ಮಂದಸ್ಮಿತ ವದನವನ್ನು ಹೊಂದಿರುವವನು, ಮುಖದಲ್ಲಿ ಸ್ನೇಹದ ಕಳೆಯನ್ನು ಹೊರಸೂಸುತ್ತಾ ಸ್ವಚ್ಚವಾದ ಕಪೋಲದಿಂದ ಕೂಡಿದ್ದು ಅಹಂಕಾರದ ಅಧಿಷ್ಠಾನ ಮೂರುತಿಯಾಗಿರುವ ಈತನು ಯಜುರ್ವೇದ ನಾದಪ್ರಿಯನೂ ಹೌದು. ಜಲ {ನೀರು} ತತ್ವಕ್ಕೆ ಅಧಿಪತಿಯಾಗಿ ಅದಕ್ಕೆ ಸಂಬಂಧಿಸಿದ ವಿಷಯ ವಿಚಾರಗಳ ಕುರಿತಂತೆ ನಿಗ್ರಹಾನುಗ್ರಹ ಶಕ್ತಿಕಾರಕನಿವನು.


     ತತ್ಪುರುಷ:


        "ದೇವಿ" ತತ್ವ ಪ್ರತಿಪಾದಕನಾಗಿರುವ ಈತನು ಪೂರ್ವಮುಖಿ. ಅರುಣ ಕಾಂತಿಯ, ಪ್ರಜ್ವಲಿಸುವ, ಹೊಂಬಣ್ಣದ, ಸುಂದರವಾದ ಕೆಂದುಟಿಯ ಪಿಂಗಳವರ್ಣದ ಜಟೆಯಲ್ಲಿ ಅರ್ಧಚಂದ್ರ ಕಾಂತಿಯನ್ನು ಹೊಮ್ಮಿಸುವ ಸಾಮವೇದದ ಉಗಮ ಸ್ಥಾನವಾಗಿರುವ ಈತನು "ಭೋಗ" ಪ್ರಕೃತಿಯ ಅಧಿಷ್ಠಾನ ಮೂರುತಿ. ಸಿದ್ಧ,ಸಾಧ್ಯ,ದೇವ,ದಾನವರಿಂದ ನಮಸ್ಕರಿಸಿಕೊಳ್ಳುತ್ತಾ ಸದಾ ತಪೋನಿರತನಾಗಿ, ಲೋಕ ಹಿತಪಾಲನೆ ಮಾಡುವವನು. "ವಾಯು" {ಗಾಳಿ} ತತ್ವಕ್ಕೆ ಅಧಿಪತಿಯಾಗಿ ಅದಕ್ಕೆ ಸಂಬಂಧಿಸಿದ ವಿಷಯ ವಿಚಾರಗಳ ಕುರಿತಾಗಿ ನಿಗ್ರಹಾನುಗ್ರಹ ಶಕ್ತಿಯುಳ್ಳವನು.


    ಅಘೋರ:


      ದಕ್ಷಿಣಮುಖಿಯಾಗಿ "ಸೂರ್ಯ" ಶಕ್ತಿಯ ಪ್ರತಿಪಾದಕನಾಗಿರುವ ಈತ ದುಂಬಿಯ ಹಾಗೂ ಕಾರ್ಮೋಡದ ನಾದವನ್ನು ಹೊಮ್ಮಿಸುತ್ತಾ ಅಪ್ರಿಯ ಪ್ರಜಾಜನರನ್ನು ಸಂಹರಿಸುತ್ತಾ ಕಾಡಿಗೆಯಂತೆ ಕೃಷ್ಣ ವರ್ಣದವನಾಗಿ ಪಿಂಗಳವರ್ಣದ ಕಣ್ಣುಗಳನ್ನು ಹೊಂದಿದ್ದಾನೆ. ಕಿವಿಗಳಲ್ಲಿನ ನಾಗರತ್ನಗಳ ಕಾಂತಿ ಕೋರೆದಾಡೆಯಂತೆ ಪ್ರಜ್ವಲಿಸುತ್ತಿದ್ದು, ಕಿರೀಟದ ತನಕ ನಾಗಗಳೂ,ಕಮಲಗಳೂ ನೇತಾಡುತ್ತಲಿವೆ. ಧರ್ಮ ಬುಧ್ಧಿಯ ಅಧಿಷ್ಠಾನ ಮೂರ್ತಿಯಾಗಿ "ಅಥರ್ವವೇದ"ಪ್ರಿಯನಾದ ಈತ ಅಗ್ನಿ{ಬೆಂಕಿ,ಉಷ್ಣತೆ}ತತ್ವಕ್ಕೆ ಅಧಿಪತಿಯಾಗಿದ್ದು ಅದಕ್ಕೆ ಸಂಬಂಧಿಸಿದ ವಿಷಯ-ವಿಚಾರಗಳ ಕುರಿತಾಗಿ ನಿಗ್ರಹಾನುಗ್ರಹ ಶಕ್ತಿಯುಳ್ಳವನು.



      ಈಶಾನ:


         "ವಿಷ್ಣು" ಶಕ್ತಿಯ ಪ್ರತಿಪಾದಕನಾಗಿ,ಊರ್ಧ್ವಮುಖಿಯಾಗಿ, ಶಿವಶಕ್ತಿಯ ಪ್ರಥಮ ರೂಪನಾಗಿರುವ ಈತ ತೇಜೋರೂಪನೂ, ಸತ್ವಗುಣಾಂಶನೂ, ಮೋಕ್ಷತ್ವದಯಾಪಾಲಕನೂ, ಮುಖದಲ್ಲಿ ವ್ಯಕ್ತ ಹಾಗೂ ಅವ್ಯಕ್ತ ಭಾವನೆಗಳನ್ನು ಬಿಂಬಿಸುವವನಾಗಿದ್ದಾನೆ. ನಾದ ರಹಿತನೂ, ಉತ್ತಮ ತತ್ವ ಪ್ರತಿಪಾದಕನೂ,"ಓಂ"ಕಾರಾದಿಸಮಸ್ತ ಮಂತ್ರಗಳ ಉಗಮವೇ ತಾನಾಗಿದ್ದಾನೆ. ಸೂಕ್ಷ್ಮ ಹಾಗೂ ಆಕಾಶವ್ಯಾಪಿಯಾಗಿ ಬ್ರಹ್ಮಾಂಡದ ಅಧಿಷ್ಠಾನ ಮೂರ್ತಿ ತಾನಾಗಿ "ಆಕಾಶ"ತತ್ವಕ್ಕೆ ಅಧಿಪತಿಯಾಗಿದ್ದು ಅದಕ್ಕೆ ಸಂಬಂಧಿಸಿದ ವಿಷಯ-ವಿಚಾರಗಳ ನಿಗ್ರಹಾನುಗ್ರಹ ಅಧಿಕಾರವನ್ನು ಹೊಂದಿರುತ್ತಾನೆ.


      ಈ ತೆರನಾದ ಪಂಚಲಿಂಗೇಶ್ವರ ಸ್ವಾಮಿಯು ಅಕ್ಷರಪಂಚಕ, ಭೂತಪಂಚಕ, ಮಾತೃಪಂಚಕ, ಕರ್ಮೇಂದ್ರಿಯಪಂಚಕ, ಜ್ಞಾನಪಂಚಕ, ರೂಪಪಂಚಕ, ಕಲಾಪಂಚಕ, ಮೂರ್ತಿಪಂಚಕ, ಮಹಾಪ್ರಾಣ ಪಂಚಕ, ಸಿಧ್ಧಿಪಂಚಕ, ವಿದ್ಯಾಪಂಚಕ, ಆತ್ಮಪಂಚಕ, ಕ್ಲೇಶಪಂಚಕ,ತರುಪಂಚಕ, ಫಲಪಂಚಕ, ಶರಪಂಚಕ, ಮುದ್ರಾಪಂಚಕ, ಭಾವಪಂಚಕ, ಅವಸ್ಥಾಪಂಚಕ, ತತ್ವಪಂಚಕ, ಗುಣಪಂಚಕ, ಆಧ್ಯಾತ್ಮಪಂಚಕ, ಮುಖಪಂಚಕ, ಸ್ಥಿತಿಪಂಚಕ, ಕ್ರೀಯಾಪಂಚಕ, ವಾದ್ಯಪಂಚಕ, ಅಗ್ನಿಪಂಚಕ, ಧ್ವನಿಪಂಚಕಗಳ ಅಧಿಪತಿಯಾಗಿ ಪಂಚಾಗ್ನಿ, ಪಂಚದೇವತಾ, ಪಂಚಲೋಕ, ವಂಶಕೋಶಾದಿಗಳ ಅಧೀಶನಾಗಿ ಭಕ್ತರನ್ನು ಅನುಗ್ರಹಿಸುವ, ದುಷ್ಟರನ್ನು ನಿಗ್ರಹಿಸಬಲ್ಲ ಮಹದೇವ- ಮಹಾದೇವ ರುದ್ರನಿವನಾಗಿದ್ದಾನೆ.

      ಶರೀರವು ಪಂಚಭೂತಾತ್ಮಕವಾಗಿದ್ದು ಪಂಚತ್ವದಿಂದುದಿಸಿ ಪಂಚತ್ವದಲ್ಲಿ ಲೀನವಾಗುತ್ತದೆ.
ಪೃಧ್ವೀ,ಅಪ್,ತೇಜ,ವಾಯು,ಆಕಾಶಗಳೆಂಬ ಪಂಚ ಭೂತಗಳಿಂದ ರಚನೆಯಾದ ಶರೀರವು ದೇಹಾಂತ್ಯದಲ್ಲಿ "ಪೃಥ್ವೀ" ತತ್ವ ಪ್ರತೀಕವಾದ ಭೌತಿಕ ಶರೀರವು ಭೂಮಿಯಲ್ಲೂ,"ಅಪ್" ತತ್ವ ಪ್ರತೀಕವಾದ ರಕ್ತರೂಪೀ ದ್ರವವು ಆವಿಯಾಗಿ ನೀರಿನಲ್ಲೂ, ಉಸಿರಾಡುತ್ತಿದ್ದ "ವಾಯು" ತತ್ವವು ವಾಯುವಿನಲ್ಲೂ, ಜಠರಾಗ್ನಿ ರೂಪದಲ್ಲಿದ್ದ ಅಗ್ನಿ ರೂಪದ "ತೇಜತತ್ವ"ವು ಅಗ್ನಿಯಲ್ಲೂ, ಜೀವಾತ್ಮವಾಗಿದ್ದ "ಆಕಾಶ"ತತ್ವವು ಆಕಾಶದಲ್ಲೂ ಲೀನವಾಗುತ್ತದೆ.ಈ ಪಂಚ ಭೂತಗಳ ಬಗ್ಗೆ ತೈತ್ತಿರೀಯೋಪನಿಷತ್ತಿನಲ್ಲಿ ’ಆಕಾಶಾದ್ವಾಯು: ವಾಯೋರಗ್ನಿ: ಅಗ್ನೇರಾಪ: ಅದ್ಭ್ಯ ಪೃಥ್ವೀ" ಎಂದು ಹೇಳಿದ್ದು ಆಕಾಶತತ್ವವು ಆಕಾಶದಲ್ಲಿ,ವಾಯುತತ್ವವು ವಾಯುವಿನಲ್ಲಿ, ಅಗ್ನಿತತ್ವವು ಅಗ್ನಿಯಲ್ಲಿ, ಜಲತತ್ವವು ಜಲದಲ್ಲಿ, ಪೃಥ್ವೀತತ್ವವು ಪೃಥ್ವೀಯಲ್ಲಿ ಲೀನವಾಗುತ್ತವೆ. "ನಮ:ಶಿವಾಯ:ದಲ್ಲಿನ ’ನ’ =ನವ=ಖಂಡ ಪೃಥ್ವೀತತ್ವ; ’ಮ’=ನೀರು=ಅಪ್ ತತ್ವ; ’ಶಿ’=ಶಿಖಿ=ಅಗ್ನಿ=ತೇಜತತ್ವ; ’ವಾ’=ವಾಯುತತ್ವ; ’ಯ’=ಕೀರ್ತಿ=ಐಕ್ಯತೆ=ಹವೆ=ವಾತಾವರಣ=ಆಕಾಶತತ್ವ; ಈ ರೀತಿಯಾಗಿ ಪಂಚತತ್ವಗಳು ಅಡಕವಾಗಿವೆ. ಪಂಚಾಂಗ ರುದ್ರನ ಪಂಚಲಿಂಗಗಳಲ್ಲಡಗಿರುವ ಈ ಪಂಚತತ್ವಗಳೇ ಪಂಚಮಹಾ ಶಕ್ತಿಗಳು. ಈ ಪಂಚಮಹಾ ಶಕ್ತಿಗಳಲ್ಲಡಗಿರುವ ಮಹಾಪಂಚಕಗಳ ಬಗ್ಗೆ ಅರಿತುಕೊಳ್ಳೋಣ. 

     ನ-ಮ-ಶ್ಶಿ-ವಾ-ಯ ಇವು ಅಕ್ಷರಪಂಚಕಗಳು. ಅನ್ನಮಯ,ಪ್ರಾಣಮಯ, ಮನೋಮಯ,ವಿಜ್ಞಾನಮಯ,ಆನಂದಮಯಗಳೆಂಬ ಕೋಶಪಂಚಕಗಳೇ ಆತ್ಮಪಂಚಕಗಳು. ಅವಧ್ಯಾ,ಅಸ್ಮಿತ,ರಾಗ,ದ್ವೇಷ,ಅನಿವೇಶಗಳೆಂಬ ಕ್ಲೇಶಪಂಚಕಗಳು; ಕಲ್ಪವೃಕ್ಷ,ಪಾರಿಜಾತ,ಮಂದಾರ,ಸಂತಾನ{ದೇವವೃಕ್ಷ},ಹರಿಚಂದನಗಳೆಂಬ ತರುಪಂಚಕಗಳು; ಬಾಳೆ,ಸಿಂಗಾರ,ಹಲಸು,ನಿಂಬೆ,ಕುಂಬಳಗಳೆಂಬ ಫಲ ಪಂಚಕಗಳು; ಅಶೋಕ,ಅರವಿಂದ,ಚೂತ,ನವಮಲ್ಲಿಕಾ,ನೀಲೋತ್ಪಲಗಳೆಂಬ ಶರಪಂಚಕಗಳು; ಪ್ರಾಣ,ಅಪಾನ,ವ್ಯಾನ,ಉದಾನ,ಸಮಾನಗಳೆಂಬ ಮಹಾಪ್ರಾಣಪಂಚಕಗಳು; ಪ್ರುಥ್ವೀ,ಅಪ್,ತೇಜ,ವಾಯು,ಆಕಾಶಗಳೆಂಬ ಭೂತಪಂಚಕಗಳು; ಅಧ್ಯಾಪನ,ಬ್ರಹ್ಮಯಜ್ಞ,ಪಿತೃಯಜ್ಞ,ದೇವಯಜ್ಞ, ಭೂತಯಜ್ಞ,ಗಳೆಂಬ ಜ್ಞಾನಪಂಚಕಗಳು; ಶಬ್ದ{ಕಿವಿ},ಸ್ಪರ್ಶ{ಚರ್ಮ},ರೂಪ{ಕಣ್ಣು},ರಸ{ನಾಲಿಗೆ},ಗಂಧ{ಮೂಗು}ಗಳೆಂಬ ಮಾತೃಪಂಚಕಗಳು; ಕಂಥಾ,ಕರ್ಪರ,ದಂಡ,ಕಮಂಡಲು,ಭಸ್ಮಗುಂಡಿಗೆಗಳೆಂಬ ಮುದ್ರಾಪಂಚಕಗಳು; ಜಾಗ್ರತ್,ಸ್ವಪ್ನ,ಸುಶುಪ್ತಿ,ತುರೀಯ,ಉನ್ಮನೀಗಳೆಂಬ ಅವಸ್ಥಾಪಂಚಕಗಳು; ಪುರುಷ,ಪ್ರಕೃತಿ,ಬುಧ್ಧಿ,ಅಹಂಕಾರ,ಮನೋರೂಪಗಳೆಂಬ ತತ್ವಪಂಚಕಗಳು; ನಿವೃತ್ತಿ,ಪ್ರತಿಷ್ಠಾ,ವಿದ್ಯಾ,ಶಾಂತಿ,ಶಾಂತ್ಯಾತೀತಗಳೆಂಬ ಕಲಾಪಂಚಕಗಳು; ಬ್ರಹ್ಮ,ವಿಷ್ಣು,ಮಹೇಶ್ವರ,ರುದ್ರ,ಸದಾಶಿವರೆಂಬ ಮೂರ್ತಿಪಂಚಕಗಳು; ಸ್ವಾಸ್ಥ್ಯ,ಧನ,ವಿದ್ಯೆ,ಚಾತುರ್ಯ,ಸಹಯೋಗಗಳೆಂಬ ಗುಣಪಂಚಕಗಳು; ಆತ್ಮಜ್ಞಾನ,ಆತ್ಮದರ್ಶನ,ಆತ್ಮಾನುಭವ,ಆತ್ಮಲಾಭ,ಆತ್ಮಕಲ್ಯಾಣಗಳೆಂಬ ಆಧ್ಯಾತ್ಮಪಂಚಕಗಳು; ದೂರಶ್ರವಣ,ದೂರದರ್ಶನ,ದೂರಗ್ರಹಣ,ವಾಕ್ಸಿಧ್ಧಿ,ಅಪ್ರತಿಹತಗತಿಗಳೆಂಬ ಸಿಧ್ಧಿಪಂಚಕಗಳು; ಸ್ಥಾಪತ್ಯ,ಪರ್ಜನ್ಯ,ಜ್ಯೋತಿರ್ವಿದ್ಯೆ,ಆಯುರ್ವಿದ್ಯೆ,ಪರೋಕ್ಷವಿದ್ಯೆಗಳೆಂಬವಿದ್ಯಾಪಂಚಕಗಳು; ಧ್ಯಾನ,ಗುಣ,ವಿಚಾರ,ಅನುಭವ,ಸತ್ ಗಳೆಂಬ ಮುಖಪಂಚಕಗಳು; ಚಿದ್ಭಾವ,ಸದ್ಭಾವ,ತೇಜೋಭಾವ,ಬುಧ್ಧಿಭಾವ,ಶಕ್ತಿಭಾವಗಳೆಂಬ ಭಾವಪಂಚಕಗಳು; ಮೃಲೋಕ,ಪರ್ಜನ್ಯ,ಪೃಥ್ವೀ,ಪುರುಷ,ಪ್ರಕೃತಿಗಳೆಂಬ ಸ್ಥಿತಿಪಂಚಕಗಳು; ಕಾಚ,ಸೈಂಧವ,ಸಾಮುದ್ರ,ವಿಶಾಲ,ಸೌವರ್ಚಲಗಳೆಂಬ ಲವಣಪಂಚಕಗಳು; ಸೃಷ್ಟಿ,ಸ್ಥಿತಿ,ಸಂಹಾರ,ಲಯ,ಅನುಗ್ರಹಗಳೆಂಬ ಕ್ರಿಯಾಪಂಚಕಗಳು; ಕೊಂಬು,ತಮ್ಮಟೆ,ಶಂಖ,ಭೇರಿ,ಜಾಗಟೆಗಳೆಂಬ ಮಹಾವಾದ್ಯಪಂಚಕಗಳು; "ಅ"ಕಾರ,"ಉ"ಕಾರ,"ಮ"ಕಾರ,ಬಿಂದು,ನಾದಗಳೆಂಬ ಧ್ವನಿಪಂಚಕಗಳು; ಶೈಶವ,ಬಾಲ್ಯ,ತಾರುಣ್ಯ,ಪ್ರೌಢತ್ವ,ವಾರ್ಧಕ್ಯಗಳೆಂಬ ಅವಸ್ಥಾಪಂಚಕಗಳು; ದಕ್ಷಿಣ,ಗಾರ್ಹಪತ್ಯ,ಅಹವನೀಯ,ಸವ್ಯ,ಅವಸವ್ಯಗಳೆಂಬ ಅಗ್ನಿಪಂಚಕಗಳೇ ಮೊದಲಾಗಿ ವಿವಿಧ ಪಂಚಕಸಮೂಹಗಳ ಅಧಿಪತ್ಯವನ್ನು ಶ್ರೀ ಪಂಚಲಿಂಗೇಶ್ವರ ಸ್ವಾಮಿಯು ಹೊಂದಿರುತ್ತಾನೆಂದು ವಿವಿಧ ಶಾಸ್ತ್ರಗಳು ನಿರೂಪಿಸಿವೆ.


       ಇವುಗಳಲ್ಲಿ ಪಂಚಭೂತ ತತ್ವಗಳು ಮುಖ್ಯವಾಗಿ ಬ್ರಹ್ಮಾಂಡದ ಚರಾಚರ ವಸ್ತು, ಜೀವಿಗಳ ಉತ್ಪತ್ತಿ-ಲಯಗಳಲ್ಲಿ ಪ್ರಧಾನ ಪಾತ್ರವಹಿಸುತ್ತವೆ. ಶಾಸ್ತ್ರಗಳ ಪ್ರಕಾರ ದೇವಾಲಯದ{ದೇವಾಲಯಗಳಿಗೆ ಸಂಬಂಧಿಸಿ ಮುಂದೆ ದಾಖಲಿಸುವ ವಿಚಾರಗಳು ಎಲ್ಲಾ ದೇವಾಲಯಗಳಿಗೂ ಅನ್ವಯಿಸುವಂತಹದಾಗಿದೆ.ಮತ್ತು ಪ್ರಸ್ತುತ ಈ ಲೇಖನದಲ್ಲಿ ವಸ್ತು ವಿಷಯಕ್ಕೆ ಅನ್ವಯಿಸಿಕೊಳ್ಳಲಾಗಿದೆ.} ಹೊರಾಂಗಣದ ಗೋಪುರದ ಮಹಾದ್ವಾರದಿಂದ ಗರ್ಭಗುಡಿಯ ಪರ್ಯಂತ ಮೇಲ್ಮೊಗವಾಗಿ ಮಲಗಿರುವ ಮಾನವನ ಶರೀರವನ್ನು ಕಲ್ಪಿಸಿ ಶಾಸ್ತ್ರಜ್ಞರು ವಾಸ್ತು ನಿರೂಪಣೆ ಮಾಡಿದ್ದು ಕಂಡುಬರುತ್ತಿದೆ. ಅದರಂತೆ ಹೊರಗೋಪುರದ ಮಹಾದ್ವಾರವೇ ಪಾದ; ಮಹಾದ್ವಾರದಿಂದ ಗೋಪುರದ ನಡೆಯ ಅಂತ್ಯಬಿಂದು ತನಕ ಮೊಣಕಾಲುಗಳು;=ಪೃಥ್ವೀ ತತ್ವ;ಅಲ್ಲಿಂದ ದ್ವಜ ಸ್ತಂಭದ ತನಕ ಕಟಿ {ನಡು=ಸೊಂಟ} ಪ್ರದೇಶವೆಂದುಗುರುತಿಸಿ =ಜಲತತ್ವ; ಮುಂದೆ ನಮಸ್ಕಾರ ಮಂಟಪದ ತನಕ ಹೃದಯಭಾಗವಾಗಿ ಗುರುತಿಸಿ=ಅಗ್ನಿತತ್ವ; ಅಲ್ಲಿಂದ ನಂತರದ "ಸುಖನಾಸಿ"[ನಮಸ್ಕಾರ ಮಂಟಪ ಹಾಗೂ ಗರ್ಭ ಗೃಹಗಳ ನಡುವಿನ ಪ್ರದೇಶ]ವನ್ನು ಸ್ವಾಶಕೋಶವೆಂದು ಗುರುತಿಸಿ= ವಾಯುತತ್ವ; ಮುಂದೆ ಪಾಣಿಪೀಠ-ಲಿಂಗ{ಬಿಂಬ} ಅಥವಾ ಮೂರ್ತಿ ಇರುವ ಪ್ರದೇಶವನ್ನು ಭ್ರೂಮಧ್ಯದ{ಹುಬ್ಬುಗಳ ಮಧ್ಯದ} ಆಜ್ಞಾಚಕ್ರ ಸ್ಥಳವಾಗಿ ಕಲ್ಪಿಸಿ ನಂತರ ಉಳಿದ ಪ್ರದೇಶವನ್ನು ಶಿರಸ್ಸು=ಆಕಾಶತತ್ವವನ್ನಾಗಿ ಕಲ್ಪಿಸಿದ್ದು ತಿಳಿದುಬರುತ್ತಿದೆ. ಕೆಲವು ಗ್ರಂಥಗಳಲ್ಲಿ ಇದಕ್ಕಿಂತ ಭಿನ್ನವಾದ ಉಲ್ಲೇಖಗಳೂ ಕಂಡುಬರುತ್ತಿದೆ.   ದೇವಾಲಯಗಳ ಯಾವ ಭಾಗದಲ್ಲಿ ಲೋಪದೋಷಾದಿಗಳಿವೆಯೋ,ಯಾವ ಭಾಗಕ್ಕೆ ಊನತ್ವವಿದೆಯೋ, ಅಂತಹ ಭಾಗ ಯಾವ ಭೂತಪಂಚಕ ತತ್ವಕ್ಕೆ ಸೇರಿದೆಯೋ, ಅ ತತ್ವಕ್ಕೆ ಸಂಬಂಧಿಸಿದ ವಿಷಯ-ವಿಚಾರಗಳ ಅನಿಷ್ಟ ಪ್ರಭಾವ ಆ ದೇವಾಲಯದ ಭಕ್ತ ಜನ ಸಮುದಾಯಕ್ಕೆ, ಜನಸಾಮಾನ್ಯರ ವಾಸ ಪ್ರದೇಶದ ಮೇಲೆ ತೀವ್ರವಾದ ದುಷ್ಪರಿಣಾಮಗಳನ್ನುಂತುಮಾಡಬಲ್ಲುದು ಎಂಬುದು ಶಾಸ್ತ್ರಜ್ಞರ ಅಭಿಮತ.


      ಈ ತೆರನಾದ ಮಹಾಶಕ್ತಿಯನ್ನಾಂತು ಪಂಚಕಾಧಿಪನಾಗಿರುವ ಮಹಾದೇವ ಪಂಚಲಿಂಗೇಶ್ವರನ ಆರಾಧನಾ ಭಾಗ್ಯ ಮಾನವನ ಬದುಕಿನ ಉನ್ನತಿಗೊಂದು ಶ್ರೀರಕ್ಷೆ ಎಂದರೆ ತಪ್ಪಾಗಲಾರದು. ಪ್ರತಿಯೊಂದು ತತ್ವ ಯಾ ಪಂಚಕಗಳಲ್ಲಿನ ಕೊರತೆ,ಲೋಪ, ದೋಷ,ಊನತ್ವಗಳು ವಿಪ್ಲವಕ್ಕೆ ಕಾರಣವಾಗಬಹುದು. ಉದಾಹರಣೆಗೆ ತತ್ವಪಂಚಕಗಳ ಪೈಕಿಯ "ಪೃಥ್ವೀ"ತತ್ವದಲ್ಲಿನ ವೈಪರೀತ್ಯದಿಂದ ಮಾನವನ ಪ್ರಜ್ಞೆ,ಕರ್ಮ,ಜ್ಞಾನ,ಕೆಮ್ಮು,ಉಬ್ಬಸ,ಚರ್ಮ,ನರ,ಮೆದುಳು,ಮಜ್ಜಾತಂತುಗಳು,ಪುಪ್ಪುಸ ಸಂಬಂಧಿ ವೈಪರೀತ್ಯ ಲಕ್ಷಣಗಳು  ಮಾನವನಿಗೆ ಅನಿಷ್ಟ ಪರಿಣಾಮಗಳನ್ನುಂಟು ಮಾಡಬಹುದಾಗಿದೆ. "ಜಲ" ತತ್ವದ ವೈಪರೀತ್ಯದಿಂದ ಭೂಮಿಯಲ್ಲಿ ಜಲನಾಶ/ಕೊರತೆ; ಹೊಟ್ಟೆ,ಮೂಗು,ತುಟಿ,ಎದೆ,ಅನ್ನಕೋಶ,ಗರ್ಭಾಶಯ,ಆಮಾಶಯ,ಮನಸ್ಸು,ಬುಧ್ಧಿ,ಮಾತೃಚಿಂತೆ, ವಿವಾಹ, ಭಾಗ್ಯ,ಭೋಗ,ವಾಹನ,ಮುಖ,ಸಿಡುಬು,ಮುಖಕ್ಕೆಲಕ್ವ,ರಕ್ತಹೀನತೆ,ಮೆಳ್ಳೆಗಣ್ಣು,ಗುಪ್ತಾಂಗಗಳ ಕಾಯಿಲೆ,ಉಪದಂಶ,ಬಂಜೆತನ,ಸಂತಾನಹೀನತೆ,ಶ್ವಾಸಕೋಶ,ಹೃದಯಾಘಾತ,ರಕ್ತದಒತ್ತಡ,ಕ್ಷಯ, ಭಯ,ದಿಗಿಲು,ಮೂರ್ಛೆ ಇತ್ಯಾದಿ ವೈಪರೀತ್ಯಗಳ ಅನುಭವವಾಗಬಹುದು.


      "ತೇಜತತ್ವ"ದ ವೈಪರೀತ್ಯದ ಕಾರಣವಾಗಿ ಕಿವಿ,ಮಸ್ತಿತ್ವ,ಕಣ್ಣು,ಬೆನ್ನು,ಬೆನ್ನೆಲುಬು,ಸಣ್ಣಕರುಳು,ರಕ್ತ,ಸ್ನಾಯು,ಆತ್ಮ,ಶಕ್ತಿ,ಭಾತೃ,ಭೃತ್ಯಗಣ, ಭೂಮಿ, ಶಿರ,ಉನ್ಮಾದ,ಜ್ವರ,ಮೆದುಳುಜ್ವರ,ಮೂರ್ಛೆ,ಜ್ಞಾನಹೀನತೆ,ಗುದ,ಸೊಂಟ,ಮೂಲವ್ಯಾಧಿ,ಹೈಡ್ರೋಸಿಲ್, ಶಸ್ತ್ರಚಿಕಿತ್ಸೆ,ಎದೆ,ಹೊಕ್ಕುಳಿನಭಾಗ,ಅಜೀರ್ಣ,ಉದರವ್ಯಾಧಿ ಇತ್ಯಾದಿ ಅನಿಷ್ಟಗಳಿಗೆ ಕಾರಣವಾಗಬಹುದು. "ವಾಯು"ತತ್ವದ ವೈಪರೀತ್ಯದಿಂದ ದೊಡ್ಡಕರುಳು,ವೃಷಣ, ಪಕ್ವಾಶಯ,ಕೈಕಾಲು,ಎಲುಬು,ಮಂಡಿ,ಮಂಡಿಚಿಪ್ಪು,ಬಾವು,ಕಾಲು ತುಂಡರಿಸುವುಕೆ,ಗ್ಯಾಂಗ್ರಿನ್ ಇತ್ಯಾದಿ ರೋಗ ಭಾದೆಗಳೂ,ಜೀವನೋಪಾಯ,ಸ್ಥಾನಪಲ್ಲಟ,ಆಯುಷ್ಯನಾಶವುಂಟಾಗಬಹುದು. "ಆಕಾಶ"ತತ್ವದ ವೈಪರೀತ್ಯದಿಂದ ಯಕೃತ್,ಪಿತ್ತಜನಕಾಂಗ,ಪ್ಲೀಹ,ದೇಹಪುಷ್ಟಿ,ಬುಧ್ಧಿ,ಪುತ್ರ,ಅರ್ಥಸಂಪತ್ತು,ಜಂಘ,ತೊಡೆ,ಜಾನು,ಸೊಂಟನೋವುವಾಯುಪ್ರಕೋಪ ಇತ್ಯಾದಿ ರೋಗ ವೈಪರೀತ್ಯಗಳೂ,ಬಿರುಗಾಳಿ,ಸುಂಟರಗಾಳಿ, ಇತ್ಯಾದಿ ವಾತಾವರಣ ವೈಪರೀತ್ಯಗಳೂ ಮಾನವನ ಅನುಭವಕ್ಕೆ ಬರಬಹುದು ಎಂಬುದು ಶಾಸ್ತ್ರಜ್ಞರ ಅಭಿಮತ. ದೇವಾಲಯಗಳಲ್ಲಿನ ತತ್ವ ಪಂಚಕಗಳಲ್ಲಿನ ಶಕ್ತಿ ಸಂಚಯದಲ್ಲಿ  ಅಥವಾ ಸಾನ್ನಿಧ್ಯ ಶಕ್ತಿಯಲ್ಲಿ   ಯಾವುದೇ ಲೋಪ ದೋಷಾದಿ ಊನತ್ವ ವೈಪರೀತ್ಯದಿಂದ ಆ ದೇವಾಲಯದ ಭಕ್ತಜನಮಾನ್ಯರುಗಳ ವಾಸಪ್ರದೇಶಗಳಲ್ಲಿ ನೀರು,ಆಹಾರಗಳ ಕೊರತೆ,ಕೃಷಿ,ಪಶು,ಸಂಪತ್ತು ನಾಶ,ಸಂತಾನ ನಾಶ, ಅವಘಡಗಳು,ಅಗ್ನಿಪ್ರಕೋಪ,ವಾಯುಪ್ರಕೋಪ,ಜೀವಹಾನಿ ,ಆಪತ್ತು-ವಿಪತ್ತುಗಳು,ರೋಗರುಜಿನಾದಿ ಬಾಧೆಗಳುಕಷ್ಟನಷ್ಟ,ಮಾನಸಿಕ ಅಶಾಂತಿ,ಅತಿವೃಷ್ಟಿ,ಅನಾವೃಷ್ಟಿ,ವಾದ-ವಿವಾದ-ಕಲಹ ಇತ್ಯಾದಿ ಅನಪೇಕ್ಷಿತ ಅನಿಷ್ಟಗಳು ಅನುಭವಿಸಬೇಕಾದೀತು ಎಂಬುದು ಶಾಸ್ತ್ರಜ್ಞರ ಅಭಿಮತ.


    ಹೌದು; "ಪಂಚಮಂ ಕಾರ್ಯ ಸಿಧ್ಧಿ" ಎಂದರು ಹಿರಿಯರು.ಯಾವುದಾ ಪಂಚಮಂಗಳು? ಇದುವರೆಗೆ ವಿವರಿಸಿದ ಪಂಚಮಂಗಳ ಸಿಧ್ಧಿಯಾದರೆ,ತನ್ಮೂಲಕ ಪಂಚಮಂಗಳ ಸಿಧ್ಧಿಯಾದರೆ ಕಾರ್ಯಸಿಧ್ಧಿ ಎಂದು ಅರಿತುಕೊಳ್ಳಬೇಕೇ ವಿನಹಾ ಲೌಕಿಕವಾಗಿ ಐಹಿಕ ಬದುಕಿನಲ್ಲಿ ನಾವು ಅರ್ಥವಿಸಿಕೊಂಡಂತೆ ಅಲ್ಲ. ಪಾರಮಾರ್ಥಿಕ ಅರ್ಥವಾಗಿರುವ,ಎಲ್ಲಾ ಶಕ್ತಿಗಳಿಗೂ ಆಧಾರವಾಗಿರುವ "ಆಕಾಶ"ತತ್ವದ ಸಿಧ್ಧಿಯೇ ಮಾನವನ ಜೀವನದ ಗುರಿಯಾಗಿರಬೇಕು. ಆ ಗುರಿಯನ್ನು ತಲಪಬೇಕಾದರೆ ಪಂಚಾಂಗ ರುದ್ರನ ಪಂಚಕಂಗಳ ಸಮೂಹ ಸಿಧ್ಧಿಯಾಗಬೇಕು. ಹಾಗಾದಾಗ ಮಾತ್ರಾ ಈಶತ್ವದ ಸಿಧ್ಧಿಯಾಗಿ ಕಾರ್ಯಸಿಧ್ಧಿಯಾಗುತ್ತದೆ.


 ಒಂದು ಅವಿಭಕ್ತ ಕುಟುಂಬದ ಯಜಮಾನ ತಾನು ಸಂಪಾದಿಸಿದ ಹಾಗೂ ತನ್ನ ಹಿರಿಯರು ವ್ಯಯಿಸಿ ಉಳಿದ ಧನ,ಕನಕಾದಿ ದ್ರವ್ಯವಿಶೇಷಗಳನ್ನು ಕುಟುಂಬದ ಶ್ರೇಯಸ್ಸಿಗಾಗಿ ಹೇಗೆ ವಿನಿಯೋಗಿಸುತ್ತಾನೆಯೋ ಅದೇ ರೀತಿ ಪರಮಾತ್ಮನು ತನ್ನಲ್ಲಿರುವ ಶಕ್ತಿಸಂಚಯವನ್ನು ಪರಮ ಕಟಾಕ್ಷದ ಮೂಲಕ ಭಕ್ತಜನ ಸಮೂಹದ ಅಭ್ಯುದಯಕ್ಕೆ ವಿನಿಯೋಗಿಸುತ್ತಾನೆ.ಕುಟುಂಬದ ಯಜಮಾನ ವಿನಿಯೋಗಿಸಿದ ಸಂಪತ್ತು ಪುನ: ಶೇಖರಣೆಯಾಗದಿದ್ದರೆ ಆ ಕುಟುಂಬದಲ್ಲಿ ಸಂತೃಪ್ತಿನಾಶವಾಗಿ ಸಂತಾಪವುಂಟಾಗುತ್ತದೆ. ವ್ಯಯಿಸಿದ ದ್ರವ್ಯಗಳ ಶೇಖರಣೆಯಲ್ಲಿ ಕುಟುಂಬದ ಎಲ್ಲಾ ಸದಸ್ಯರದೂ ಸಮಾನ ಪಾತ್ರವಿರಬೇಕು.ಅದು ಅವರ ಕರ್ತವ್ಯವೂ ಹೌದು. ಯಾವನೇ ಒಬ್ಬ ಸದಸ್ಯನ ಅನಪೇಕ್ಷಿತ ವ್ಯವಹಾರದಿಂದ ಆ ಕುಟುಂಬದ ಯಜಮಾನ ರಕ್ಷಿಸಿದ್ದ ಧನ ಕನಕಾದಿ ದ್ರವ್ಯಗಳು ನಾಶವಾಗಬಹುದಾಗಿದೆ.ಎಲ್ಲರೂ ಸಮಾನ ಮನೋಭಾವನೆಯಿಂದ ದುಡಿದರೆ ಶಾಂತಿ ಪ್ರಾಪ್ತಿ. ಇಲ್ಲವಾದರೆ ಸಂತಾಪ ಪ್ರಾಪ್ತಿ. ಇದೇ ರೀತಿಯಾಗಿ ಬ್ರಹ್ಮಾಂಡದ ಯಜಮಾನನಾಗಿ ಭಕ್ತಜನ ಸಮೂಹದ ಹಿತಕ್ಕಾಗಿ ಬಳಸಲ್ಪಡುವ ಪಂಚಾಂಗರುದ್ರನ ದ್ರವ್ಯಗುಣವಿಶೇಷವಾದ ತತ್ವ-ಪಂಚಕ ಶಕ್ತಿಗಳು ಕೂಡಾ ಭಕ್ತಜನಮಾನ್ಯರ ನಿಷ್ಕಾಮ ಕರ್ಮದ ಮೂಲಕ ಪುನ: ಸಂಚಯಿಸಲ್ಪಟ್ಟಾಗ ಮಾತ್ರಾ ಸಾನ್ನಿಧ್ಯಶಕ್ತಿವೃಧ್ಧಿಯಾಗಿ ಜನಜೀವನದಲ್ಲಿ ಸಂತೃಪ್ತಿ ಪಡೆಯಲು ಸಾಧ್ಯವಿದೆ. ಇಲ್ಲವಾದರೆ ರೋಗರುಜಿನಾದಿ ಬಾಧೆಗಳು,ಅತಿವೃಷ್ಟಿ-ಅನಾವೃಷ್ಟಿ,ಅಕಾಲಿಕ ಅವಘಡಗಳಿಂದ,ಆಪತ್ತು-ವಿಪತ್ತುಗಳಿಂದ,ಕಷ್ಟ-ನಷ್ಟಗಳಿಂದ ಬಳಲಬೇಕಾಗಿಬರಬಹುದು. ಬಡವ-ಬಲ್ಲಿದನೆಂಬ ಭೇಧವಿಲ್ಲದೆ ಅಯಾ ಊರಿನ ಪ್ರತಿಯೋರ್ವ ಭಕ್ತನೂ ತನ್ನ ಆದಾಯದಲ್ಲಿ ಪ್ರತಿಶತ ಒಂದುಅಂಶ ಅಂದರೆ ಪ್ರತಿ ನೂರು ರೂಪಾಯಿ ಆದಾಯದಲ್ಲಿ ಒಂದು ರೂಪಾಯಿಯನ್ನು ತನ್ನ ಊರಿನ ದೇವಾಲಯದ ಅಭಿವೃಧ್ಧಿ ಕಾರ್ಯಗಳಿಗೆ ಹಾಗೂ ದೈನಂದಿನ ವಿನಿಯೋಗಕ್ಕಾಗಿ ಕಾದಿರಿಸಿ  ದೇವಾಲಯದ ನಿಧಿಗೆ ಅರ್ಪಿಸಬೇಕೆಂದು ಧಾರ್ಮಿಕಸಂಹಿತೆಗಳು ವಿಧಿಸಿದ್ದಿದೆ. ಅವುಗಳು "ಪ್ರತಿಯೋರ್ವ ಭಕ್ತ"ನೆಂಬುದನ್ನು ಬೊಟ್ಟು ಮಾಡಿ ಹೇಳಿರುವುದನ್ನು ಇಲ್ಲಿ ಗಮನಿಸಬೇಕು. ಈ ನಿಯಮವನ್ನು ಸ್ವಯಂ ಭಕ್ತಾದಿಗಳು ಅನುಸರಿಸಿದರೆ ಹೆಚ್ಚಿನ ದೇವಾಲಯಗಳು ಹಂತ ಹಂತವಾಗಿ ಅಭಿವೃಧ್ಧಿಯಾಗಬಲ್ಲವು. ಆದುದರಿಂದ ತನು-ಮನ-ಧನಗಳಿಂದ ಯಥಾಭಕ್ತ್ಯಾ, ಯಥಾಸಾಧ್ಯ, ಯಥಾಯೋಗ್ಯಾ, ಪಂಚಾಂಗರುದ್ರ -ಮಹದೇವ-ಮಹಾದೇವ= ಮಹಾಲಿಂಗೇಶ್ವರ -ಪಂಚಲಿಂಗೇಶ್ವರ ಮಹಾಸ್ವಾಮಿಯ ಸೇವಾ ಕೈಂಕರ್ಯದಲ್ಲಿ  ಭಕ್ತಜನ ಸಮೂಹ ತೊಡಗಿಸಿಕೊಳ್ಳುವುದು ಶ್ರೇಯಸ್ಕರ.


   "ಶಿವಾಯ ನಮ: ಓಂ

    ಶಿವಾಯ ನಮ: ಓಂ
    ಶುಭಂ ಕುರುಕುರು
    ಶಿವಾಯ ನಮ: ಓಂ"    ಈ ಚತುರ್ವಿಂಶ್ತ್ಯಾತ್ಮಕ ಅಕ್ಷರ ಸಮೂಹದ ಶಿವತಾರಕ ಮಹಾಮಂತ್ರದ ಸ್ಮರಣೆ ಭಕ್ತಜನಮಾನ್ಯರ ನುಡಿಮನಗಳಲ್ಲಿರಲಿ. ಈ ಮಹಾ ಮಂತ್ರದ ಸ್ಮರಣೆ ಸರ್ವರನ್ನೂ ರಕ್ಷಿಸಲಿ.

                                                          || ಶಿವಾರ್ಪಣಮಸ್ತು ||


                || ಸದ್ಗುರು ಶ್ರೀ ಶ್ರೀಮಜ್ಜಗದ್ಗುರು ಶಂಕರಾಚಾರ್ಯ ಶ್ರೀ ಶ್ರೀ ಶ್ರೀ ರಾಘವೇಶ್ವರ ಭಾರತೀ


                              ಮಹಾ ಸ್ವಾಮಿಗಳವರ ದಿವ್ಯ ಚರಣಾರವಿಂದಗಳಿಗಿದು ಅರ್ಪಿತ||

                                                                                                                       
                                                                                        ದಿನಾಂಕ: ೧೩-೧೦- ೨೦೧೨

  ಽಽಽಽಽಽಽಽಽಽಽಽಽಽಽಽಽಽಽಽಽಽಽಽಽಽಽಽಽಽಽಽಽಽಽಽಽಽಽಽಽಽಽಽಽಽಽಽಽಽಽಽಽಽಽಽಽಽಽಽಽಽಽಽ

                                                                  
                                                           ಜೈ ಶ್ರೀ ರಾಮ್
  ********************************************************************************

3 comments:

  1. ಮಾಹಿತಿಪೂರ್ಣ ಲೇಖನ ಪೆರ್ನಜೆ ಅಣ್ಣ. ತುಂಬಾ ಧನ್ಯವಾದಂಗ. ಮುಂದೆಯೂ ಹೀಂಗೇ ಉತ್ತಮ ವಿಚಾರಂಗ ಬರಲಿ ಹೇಳಿ ಅಪೇಕ್ಷೆ.

    ReplyDelete
  2. ಧನ್ಯವಾದಂಗೊ ಈಶ್ವರಣ್ಣ!

    ReplyDelete
  3. ಬಹಳ ೊಳ್ಳೆಯ ತಾಣ...ಮಾಹಿತಿಭರಿತ.. ಧನ್ಯವಾದ ಪೆರ್ನಜೆ ಸರ್.. ಕಿರಣನ ಜಾಡು ಹುಡುಕಿ,,ಬಂದುದಕ್ಕೆ ಈ ಲಾಭ...

    ReplyDelete