Wednesday 17 October 2012




                                ದೇವಾಲಯಗಳಿಗೊಂದು ಆಚಾರ ಸಂಹಿತೆ

                              ~~~~~~~~~~~~~~~~~~~~~~~~~~~~~~~
                                          [ಸಂಗ್ರಹಿಸಲ್ಪಟ್ಟ ಲೇಖನ]
                                 ++++++++++++++++++++++++++


 ದಕ್ಷಿಣದಲ್ಲಿ ಹಿಂದೂ ಮಹಾಸಾಗರ;ಉತ್ತರದಲ್ಲಿ ಹಿಮಾಲಯ ಪರ್ವತ ಶ್ರೇಣಿ;ಈ ಮಧ್ಯದಲ್ಲಿರುವ ಭವ್ಯ ಪುರಾತನ ಸಂಸ್ಕೃತಿಯ ತಪೋಭೂಮಿ ಭಾರತ. ಸಹಸ್ರಾರು ಯೋಜನ ಪರ್ಯಂತ ಹಬ್ಬಿರುವ ಧರ್ಮ ಪ್ರಧಾನ ಪುಣ್ಯ ನಾಡಿದು ಭಾರತ. ದಾನ,ಯಜ್ಞ, ತಪಾರಾಧನೆ, ವಿಶ್ವಕ್ಕೆ ಭಾರತದ ಮಹಾನ್ ಕೊಡುಗೆ.ಇದರಿಂದಾಗಿ ಸ್ವರ್ಗ ಸದೃಶ ಮಹಾಪುಣ್ಯ ಭೂಮಿ ನಮ್ಮ ಈ ಭಾರತ. ಪುರಾಣಜ್ಞರು ನಿರೂಪಿಸಿದಂತೆ "ದೇಶೋಯಂ ಭಾರತಂ ವರ್ಷಂ ಭೂರೇಷಾ ಕರ್ಮಿಣಾಂನೃಣಾಮ್ |ಯೋಜನಾದಿ ಸಹಸ್ರಾಣಿ ವಿಸ್ತಾರೇಚೈವ ಕಥ್ಯತೇ||" ಎಂಬುದು ಚಿರ ನೂತನ ಸತ್ಯ. ಹೌದು; ಕಾಯಕಕ್ಕೆ ಪ್ರಾಧಾನ್ಯ ನೀಡಿ ಅದರ ಫಲವನ್ನು ಅನುಭವಿಸುವುದು ಈ ನಾಡಿನ ವೈಶಿಷ್ಟ್ಯ. "ಶ್ರೇಷ್ಟ ತದ್ಭಾರತಂ ವರ್ಷಂ ಸರ್ವ ವರ್ಷೇಷು ಸಮ್ಮತಂ| ಫಲಾರ್ಥಿನ: ಕಾಮಯಂತೇ ಕರ್ಮ ಭೂಷುಜ ನಿಂಬುದಾ||" ಎಂದು ಪದ್ಮ ಪುರಾಣದಲ್ಲಿ ಹೇಳಿದೆ.

          ಇಂತಹಾ ದಿವ್ಯ-ಭವ್ಯತೆಯ ಪುಣ್ಯನಾಡಿನಲ್ಲಿ ಜನಿಸಿ ತಮ್ಮ ಉದಾತ್ತ ಕರ್ಮಗಳಿಂದ  ಆದರ್ಶನೀಯರಾದ ಪೂಜ್ಯ ಋಷಿ-ಮುನಿ,ಸಿಧ್ಧ-ಸಾಧ್ಯ ಮಹಾನ್ ಶ್ರೇಷ್ಟರು ತಮ್ಮ ಮುಂದಿನ ಜನಾಂಗದ ಧಾರ್ಮಿಕ ಒಳಿತಿಗಾಗಿ ಮತ್ತು ಉನ್ನತಿಗಾಗಿ ಕಂಡುಕೊಡ ಮಾರ್ಗ ಆರಾಧನಾ ಮಾರ್ಗ. ಕುಲಪರಂಪರೆಯತೆ ಆರಾಧಿಸಲು ಮನೆಗಳಲ್ಲಿ ಪೂಜಾಗೃಹಗಳನ್ನು ರೂಪಿಸಿಕೊಳ್ಳಲು ಮೇಲ್ಪಂಕ್ತಿ ಹಾಕಿ, ಸಾಮಾಜಿಕ ಐಕ್ಯತೆಯ ರಕ್ಷಣೆಗಾಗಿ ಊರ ಕೇಂದ್ರದ ಪ್ರಶಸ್ತ ಸ್ಥಳದಲ್ಲಿ ದೇವಾಲಯಗಳನ್ನು ನಿರ್ಮಿಸಿ ಅಲ್ಲಿ ಆರಾಧನಾ ವಿಧಿ-ವಿಧಾನಗಳನ್ನು ರೂಪಿಸಿ ಊರಿನ ಸಮಸ್ತ ಆಸ್ತಿಕ ಭಕ್ತಾದಿಗಳನ್ನು ಅನುಗ್ರಹಿಸಲು ದೇವತಾ ಸಾನಿಧ್ಯವನ್ನು ಪ್ರತಿಷ್ಟಾಪಿಸಿದರು.ಅಂತಹಾ ಅನೇಕಾನೇಕ ದೇವಾಲಯಗಳ ನೆಲೆವೀಡು ನಮ್ಮೀ ಪಾವನ ಭಾರತನಾಡು.

          ಈ ರೀತಿ ಉದಿಸಿದ ದೇವಾಲಯಗಳು ನಮ್ಮ ಭವ್ಯ ಹಿಂದೂ ಸಂಸ್ಕೃತಿಯಲ್ಲಿ ಆರಾಧನಾ ಪ್ರತೀಕವಾಗಿ ಮಹತ್ತರ ಪಾತ್ರ ವಹಿಸುವ ಕೇಂದ್ರ ಬಿಂದುಗಳು.ಪ್ರಕೃತಿಯನ್ನು ತಾಯಿಯಾಗಿಯೂ,ಪರಮಾತ್ಮನನ್ನು ತಂದೆಯಾಗಿಯೂ ಕಲ್ಪಿಸಿಕೊಂಡ ಪುರಾತನ ಶ್ರೇಷ್ಟರು ಇವರೀರ್ವರ ಮಿಲನ ಕ್ಷೇತ್ರವಾಗಿಯೂ ದೇವಾಲಯಗಳನ್ನು ಗುರುತಿಸಿದರು.ದೇವಾಲಯವು ಅಮೃತ ಕಲಶ.ಆದರೆ ಕಲಶವೇ ಅಮೃತವಲ್ಲ.ಅಮೃತ ತುಂಬಿರುವುದರಿಂದ ಕಲಶಕ್ಕೆ ಮಹತ್ವ. ತಾವು ಶ್ರಮಿಸಿ ಮುಂದೆ ತನ್ನ ಸಂತತಿಗಾಗಿರಲಿ, ಅದರಿಂದ ಆ ಸಂತತಿ ಸುಖವಾಗಿ ಚಿರಕಾಲ ಅವಿಛ್ಛಿನ್ನವಾಗಿ ಬೆಳೆದು ಬಾಳಲಿ ಎಂಬ ದೂರ ದೃಷ್ಟಿಯಿಂದ ಹಿರಿಯರು ಸಂಪತ್ತು ಶೇಖರಿಸಿ ಇಟ್ಟಿರುವ ನಿದರ್ಶನ ನಾವು ಕಾಣಬಹುದಾಗಿದೆ.ಅದೇ ರೀತಿ ನಮ್ಮ ಪೂರ್ವಜರಾದ ಋಷಿ,ಮುನಿ,ಸಿಧ್ಧ-ಸಾಧ್ಯರು ತಮ್ಮ ದೈವೀಸಂಪತ್ತನ್ನು ಮುಂದಿನ ಜನಾಂಗಕ್ಕೆ ಶೇಖರಿಸಿ ಇಟ್ಟಿರುವ ಜಾಗವೇ ದೇವಾಲಯಗಳು.

         ಆಲಯವೊಂದು ಪರಿಪೂರ್ಣವೆನಿಸಲು ಪ್ರಶಸ್ತವಾದ ಭೂಮಿ, ಅದರ ಮೇಲೆ ಭದ್ರವಾದ ಅಡಿಪಾಯ , ಆ  ಅಡಿಪಾಯದ ಮೇಲೆ ಗೋಡೆ,ಆ ಗೋಡೆಗಳನ್ನಾಧರಿಸಿ ಮಾಡು ಇರುವಂತೆ ದೇವ ಸಾನ್ನಿಧ್ಯವಿರಬೇಕಾದ ದೇವಾಲಯಗಳಿಗೆ ನಂಬಿ ಆರಾಧಿಸುವ ಭಕ್ತಜನಸಮೂಹ,ನಿಸ್ವಾರ್ಥತಾ ಮನೋಭಾವನೆಯ ಧರ್ಮದರ್ಶಿ[ಆಢಳಿತ]ಮಂಡಳಿ,ಶಾಸ್ತ್ರವೇತ್ತ ಅರ್ಚಕ-ತಂತ್ರಿವರೇಣ್ಯರು ಇರಬೇಕು.ಇವರೆಲ್ಲರ ತ್ಯಾಗ ಮನೋಭಾವದ ಪ್ರತೀಕವಾಗಿ ದೇವತಾ ಸಾನ್ನಿಧ್ಯ ಶಕ್ತಿ ವೃಧ್ಧಿಯಾಗಿ ಬೆಳಗುತ್ತದೆ. ಪ್ರತಿಯೊಂದು ಮನೆಗೆ ಮನೆಯವರದ್ದೇ ಆದ ರೀತಿ,ರಿವಾಜು,ಕಟ್ಟುಪಾಡು[ನೀತಿ ಸಂಹಿತೆ] ಇರುವಂತೆ ದೇವಾಲಯಗಳಿಗೂ ಪ್ರಾಚೀನ ಪರಂಪರೆಯಿಂದ ಆಚರಿಸಿಕೊಂಡು ಬಂದ ರೀತಿ,ರಿವಾಜು,ಕಟ್ಟುಪಾಡು[ನೀತಿಸಂಹಿತೆ]ಗಳಿವೆ.ದೇವಾಲಯಗಳು ಅಸ್ಥಿತ್ವಕ್ಕೆ ಬರುವಾಗಲೇ ಅವುಗಳನ್ನು ಸ್ಥಾಪಿಸಿ ಲೋಕಾರ್ಪಣ ಮಾಡಿದ ಮಹಾತ್ಮರು ರೂಪಿಸಿ ಜ್ಯಾರಿಗೊಳಿಸಿದ ಅಂತಹಾ ರೀತಿ,ರಿವಾಜು,ಕಟ್ಟುಪಾಡು[ನೀತಿ ಸಂಹಿತೆ]ಗಳು ಅವಿಛ್ಛಿನ್ನವಾಗಿ ಸಾಗಿ ಬಂದಿವೆ ಎಂದರೆ ತಪ್ಪಾಗಲಾರದು. ನಾವು ಬೇರೆಯವರ ಮನೆಗೆ ಹೋದಾಗ ಆ ಮನೆಯವರ ಕಟ್ಟುಪಾಡುಗಳನ್ನು ಗೌರವಿಸಬೇಕಾದುದು ಎಷ್ಟು ಮುಖ್ಯವೋ ಅದೇ ರೀತಿ ದೇವಾಲಯಗಳಿಗೆ ಸಂಬಂಧಪಟ್ಟಂತೆ ,ಆ  ದೇವಾಲಯದಲ್ಲಿ ದೇವತಾ ಸಾನ್ನಿಧ್ಯವನ್ನು ಕಲ್ಪಿಸಿ.ಸಾನಿಧ್ಯ ಶಕ್ತಿಯನ್ನು ವೃಧ್ಧಿಗೊಳಿಸಿ ಆರಾಧಿದ ಸಂಸ್ಥಾಪಕ ಶ್ರೇಷ್ಟರು ಮುಂದಿನ ಜನಾಂಗಕ್ಕಾಗಿ, ಜನಾಂಗದ ಶ್ರೇಯೋಭಿವೃಧ್ಧಿಗಾಗಿ ರೂಪಿಸಿದ್ದಂತಹಾ, ತಲತಲಾಂತರಗಳಿಂದ ಆಚರಿಸಿಕೊಂಡುಬಂದಂತಹಾ ಕಟ್ಟುಪಾಡು,ರೀತಿ,ರಿವಾಜುಗಳನ್ನು[ನೀತಿಸಂಹಿತೆಯನ್ನು]ಭಕ್ತಜನಮಾನ್ಯರು,ಧರ್ಮದರ್ಶಿ[ಆಢಳಿತ] ಮಂಡಳಿ,ಅರ್ಚಕತಂತ್ರಿವರೇಣ್ಯರು,ಪರಿಚಾರಕ ವರ್ಗದವರು ಕರ್ತವ್ಯಸಂಹಿತೆಯೊಂದಿಗೆ ಪರಿಪಾಲನೆ ಮಾಡುವುದರಿಂದ ಆ ದೇವಾಲಯದಲ್ಲಿ ದೇವತಾ ಸಾನ್ನಿಧ್ಯ ವೃಧ್ಧಿಯಾಗಿ ಲೋಕಹಿತ ಸಾಧ್ಯವಾಗಬಹುದಾಗಿದೆ.ಯಾವುದಾದರೊಂದು ಮನೆಯವರ ರೀತಿ-ನೀತಿ;ರಿವಾಜು-ಕಟ್ಟುಪಾಡುಗಳನ್ನು ಗೌರವಿಸಿ ಪಾಲಿಸಲು ನಮಗೆ ಅಸಾಧ್ಯವೆಂದಾದಲ್ಲಿ ಆ ಮನೆಯವರ ಸಂಪರ್ಕದಿಂದ ನಾವು ದೂರವುಳಿಯುವಂತೆ ದೇವಾಲಯಗಳಲ್ಲಿ ತಲತಲಾಂತರಗಳಿಂದ ಪಾಲಿಸಿಸುತ್ತಾ ಅವಿಛ್ಛಿನ್ನವಾಗಿ ಸಾಗಿ ಬಂದಿರುವಂತಹಾ ಕಟ್ಟುಪಾಡುಗಳು ನಮಗೆ ಸಹನೀಯವಲ್ಲವಾದಲ್ಲಿ ನಾವು ಅಂತಹ ದೇವಾಲಯಗಳಿಂದ ದೂರವಿರುವುದು ಭೂಷಣವೆನಿಸುವುದು ಎಂಬುದು ಈ ಸಂಗ್ರಾಹನ ಅಭಿಮತ. ಇತ್ತೀಚೆಗಿನ ದಿನಗಳಲ್ಲಿ ಕೆಲವು ಮಾಧ್ಯಮಗಳಲ್ಲಿ,ಸಾರ್ವಜನಿಕ ವೇದಿಕೆಗಳಲ್ಲಿ,ಅಂತರ್ಜಾಲ ಮಾಧ್ಯಮಗಳಲ್ಲಿ ದೇವಾಲಯಗಳ ಪದ್ದತಿಗಳ ಕುರಿತಾಗಿ ಬಂದಿರುವ ಟೀಕೆ,ಟಿಪ್ಪಣಿಗಳ ಕುರಿತಾಗಿ ಈ ವಿಚಾರವನ್ನು ಇಲ್ಲಿ ಉಲ್ಲೇಖಿಸಬೇಕಾಯಿತು. ವಿಷಯಾಂತರಕ್ಕೆ ಕ್ಷಮೆಯಿರಲಿ.

        ಪ್ರಸ್ತುತ ಎಲ್ಲಾ ದೇವಾಲಯಗಳಿಗೆ ಅನ್ವಯಿಸುವಂತಹ ಕರ್ತವ್ಯ ಹಾಗೂ ನೀತಿಸಂಹಿತೆಯನ್ನು ಅರಿತುಕೊಳ್ಳುವ ಬಯಕೆಯ ಪೂರೈಕೆಯೇ ಈ ಸಂಗ್ರಹಕಾರನ ಉದ್ದೇಶ. ಕೆಲವೊಂದು ದೇವಾಲಯಗಳಲ್ಲಿ ಆಯಾ ದೇವಾಲಯಗಳ ಸಂಸ್ಥಾಪಕಶ್ರೇಷ್ಟರ ಆಶಯಕ್ಕನುಗುಣವಾದ ಪ್ರತ್ಯೇಕ ಕೆಲವು ಕಟ್ಟುಪಾಡುಗಳಿರಬಹುದಾದರೂ ಇಲ್ಲಿ ಸಂಗ್ರಹಿಸಲ್ಪಟ್ಟಿರುವ ವಿಚಾರಗಳು ಎಲ್ಲಾ ದೇವಾಲಯಗಳಿಗೂ ಶಾಸ್ತ್ರಕಾರರು ನಿರೂಪಿಸಿದ ನೀತಿಸಂಹಿತೆಯಾಗಿದೆ.ದೇವತಾ ಸಾನ್ನಿಧ್ಯವೃಧ್ಧಿಗೆ ಕಾರಣೀಭೂತವಾಗುವಂತಹಾ ಈ ನೀತಿಸಂಹಿತೆಯ ಪರಿಪಾಲನೆಯಿಂದ ಲೋಕಹಿತವಾಗಬಲ್ಲುದೆಂದು ಅಗಮ ಶಾಸ್ತ್ರಕಾರರು ಸಾರಿದ್ದಾರೆ. ಯಾವುದೇ ದೇವಾಲಯದಗರ್ಭಗುಡಿಯನ್ನು ಪ್ರದಕ್ಷಿಸಿದ ಮಾತ್ರದಲ್ಲಿ ಮೂಲತ:ಆ ದೇವಾಲಯ ಯಾವ ವರ್ಗದವರಿಂದ ಸೃಷ್ಟಿಸಲ್ಪಟ್ಟು ದೇವತಾಪ್ರತಿಷ್ಠೆ ಜರಗಿಸಲ್ಪಟ್ಟಿದೆ ಎಂಬುದು ಅರಿವಾಗುವಂತೆ ಅದರ ರಚನೆಯಿರುತ್ತದೆ.ಅವರ ಆಶಯಗಳಿಗುಣವಾದ ಆಚಾರಸಂಹಿತೆ ಆ ದೇವಾಲಯದಲ್ಲಿ ಪಾಲಿಸಲ್ಪಡುತ್ತದೆ."ಸೋಮಸೂತ್ರ"ಲಕ್ಷಣದ ಮುಖೇನ ಶಾಸ್ತ್ರಕಾರರು ನಿರೂಪಿಸಿದಂತೆ "ಬ್ರಾಹ್ಮಣವರ್ಗ"ದವರಿಂದ ಪ್ರತಿಷ್ಠಾಪಿಸಲ್ಪಟ್ಟಿದ್ದಲ್ಲಿ "ಗೋ ಮುಖ"ಸೋಮಸೂತ್ರವೂ, "ಕ್ಷತ್ರಿಯ"ವರ್ಗದವರಿಂದ ಪ್ರತಿಷ್ಠಾಪಿಸಲ್ಪಟ್ಟಿದ್ದಲ್ಲಿ "ಸಿಂಹಮುಖ"ದ ಸೋಮಸೂತ್ರವೂ,"ವೈಶ್ಯವರ್ಗ"ದವರಿಂದ ಪ್ರತಿಷ್ಠಾಪಿಸಲ್ಪಟ್ಟಿದ್ದಲ್ಲಿ "ಗಜಮುಖ"ದ ಸೋಮಸೂತ್ರವೂ,"ಶೂದ್ರವರ್ಗ"ದವರಿಂದ ಪ್ರತಿಷ್ಠಾಪಿಸಲ್ಪಟ್ಟಿದ್ದಲ್ಲಿ ಮೊಸಳೆ ಮುಖದ "ಸೋಮಸೂತ್ರ"ವೂ ಇರಬೇಕಾಗಿದೆ. ಆಗಮಶಾಸ್ತ್ರಕಾರು ದೇವಾಲಯಗಳಲ್ಲಿ ಯಾರ‍್ಯಾರು ಹೇಗಿರಬೇಕು,ಅವರ ಕರ್ತವ್ಯಗಳೇನು,ಪದ್ದತಿಗಳೇನು ಎಂಬುದನ್ನು ಗ್ರಂಥಗಳಲ್ಲಿ ವಿಸ್ತಾರವಾಗಿ  ತಿಳಿಸಿದ್ದು ಅವುಗಳಲ್ಲಿ ಪ್ರಾಮುಖ್ಯವೆನಿಸಿದ್ದನ್ನು ಆಯ್ದು ಇಲ್ಲಿ ನಿರೂಪಿಸುತ್ತಿದ್ದೇನೆ.

        ಕುಟುಂಬಕ್ಕೋರ್ವ ಪುರೋಹಿತರಿದ್ದಂತೆ ದೇವಾಲಯಗಳಲ್ಲಿ ತಂತ್ರಿವರೇಣ್ಯರದ್ದು ಪ್ರಧಾನ ಪಾತ್ರ. ದೇವತಾ ಸಾನ್ನಿಧ್ಯ ಪ್ರತಿಷ್ಠಾ ಮಹಾಕಾರ್ಯ ಇವರ ಹೊಣೆಗಾರಿಕೆ.ಪುರಾತನ ಕಾಲದಿಂದ ಪಾಲಿಸಿಕೊಂಡು ಬಂದ ಆಲಯಪದ್ದತಿಗೆ ವ್ಯತ್ಯಸ್ತವಾಗದಂತೆ ನಡೆದುಕೊಳ್ಳಲು ಭಕ್ತರಿಗೆ,ಧರ್ಮದರ್ಶಿಮಂಡಳಿಗೆ,ಅರ್ಚಕರಾದಿಯಾಗಿ ಪರಿಚಾರಕ ಭೃತ್ಯವರ್ಗಕ್ಕೆ ಎಚ್ಚರಿಕೆ ನೀಡುವುದರ ಮುಖೇನ ದೇವತಾ ಸಾನ್ನಿಧ್ಯಶಕ್ತಿಯ ವಿಕಸನಕ್ಕೆ ಇವರು ಮಾರ್ಗದರ್ಶಕರಾಗಿರುತ್ತಾರೆ.ಇವರುಗಳ ಕರ್ತವ್ಯದ ಬಗ್ಗೆ "ತಂತ್ರಸಮುಚ್ಚಯ"ದಲ್ಲಿ ವಿವರವಾಗಿ ತಿಳಿಸಲ್ಪಟ್ಟಿದ್ದು ಅದರ ಸಾರಾಂಶ ಹೀಗಿದೆ.

        ದೇವತಾಪ್ರತಿಷ್ಠಾ ಕರ್ತರಾದ ತಂತ್ರಿಗಳು ಕೂರ್ಮಾಸನದಲ್ಲಿ ಸುಖಾಸೀನರಾಗಿ ಆತ್ಮಪೂಜಾದಿವಿಧಿಗಳನ್ನು ಪೂರೈಸಿ,ಗುರು ಗಣಪತಿಯರಿಗೆ ವಂದಿಸಿ,ಬ್ರಾಹ್ಮಣಶ್ರೇಷ್ಠರುಗಳನ್ನು ಗೊ,ವಸ್ತ್ರಾದಿ ಸುವರ್ಣ ದಾನಗಳಿಂದ ತೃಪ್ತಿಪಡಿಸಿ ದೈವಜ್ಞರುಗಳಿಂದ ನಿಗದಿ ಪಡಿಸಲ್ಪಟ್ಟಿರುವ ದೋಷವಿರಹಿತವಾಗಿರುವ ಶ್ರೇಷ್ಠ ಲಗ್ನಾಂಶದಲ್ಲಿ ದೇವತಾ ಸಾನ್ನಿಧ್ಯವನ್ನು ಪ್ರತಿಷ್ಠಾಪಿಸಬೇಕು.ಆ ಮೇಲೆ ಪ್ರತಿಷ್ಠಾ ಬ್ರಹ್ಮಕಲಶಾದಿ ಅಭಿಷೇಕಾನಂತರದೇವರ ನಿತ್ಯ ನೈಮಿತ್ತಿಕಾದಿ ಉತ್ಸವಗಳನ್ನು ಘೋಷಣೆ ಮಾಡಬೇಕು.ನಂತರ ಪ್ರತಿವರ್ಷ ಈ ಉತ್ಸವಾದಿಗಳನ್ನು ದೇವಾಲಯದಲ್ಲಿ ಆಚರಿಸುವ ವ್ಯವಸ್ಥೆಮಾಡಬೇಕು.ಪರ್ವದಿನಾದಿಗಳನ್ನು,ನಿತ್ಯ ಆರಾಧನಾ ಕಾರ್ಯಗಳನ್ನು ವಿಧಿವತ್ತಾಗಿ ನಡೆಯಿಸಿಕೊಂಡುಬರಲು ಧರ್ಮದರ್ಶಿ ಮಂಡಳಿಗೆ,ಅರ್ಚಕರಿಗೆ ಮಾರ್ಗದರ್ಶನ ನೀಡಬೇಕು. ನಂತರ ಪ್ರಾಚೀನ ಕಾಲದಿಂದಲೂ ದೇವಾಲಯದಲ್ಲಿ ಪಾಲಿಸಿಕೊಂಡುಬಂದ ರೀತಿ,ರಿವಾಜು,ಕಟ್ಟುಪಾಡುಗಳನ್ನು ಭಕ್ತಜನಮಾನ್ಯರುಗಳು ಪಾಲಿಸಿಕೊಂಡು ಬರಲು ನಿರ್ದೇಶನ ನೀಡಬೇಕು. ಈ ವ್ಯವಸ್ಥೆಯನ್ನು ಮಾಡುವುದರಿಂದ ಗರ್ಭಗುಡಿಯಲ್ಲಿ ಪ್ರತಿಷ್ಠಾಪಿಸಲ್ಪಟ್ಟ ಪರಮಾತ್ಮನು ಸಂತೃಪ್ತಿಹೊಂದಿ ಸಂಪತ್ಪ್ರದನಾಗಿ ಅನುಗ್ರಹಿಸುವಂತಾಗುವನು.ತನ್ನ ಭಕ್ತರನ್ನು ಅನುಗ್ರಹಿಸಲೋಸುಗವಾಗಿಯೇ "ಅಜ್ಞಾನಿನಾಂ ಭಾವನಾರ್ಥಾಯ ಪ್ರತಿಮಾ ಪರಿಕಲ್ಪಿತಾ:"ಎಂಬುದನ್ನು ಭಕ್ತಜನಸಮೂಹಕ್ಕೆ ಅರಿವು ಮೂಡಿಸುವ ಮಹಾನ್ ಕಾರ್ಯ ತಂತ್ರಿವರೇಣ್ಯರದ್ದು. ತಂತ್ರಿಗಳ ಮುಖೇನ ವಿಗ್ರಹದಲ್ಲಿ ತನ್ನ ಮಹಾ ಸನ್ನಿಧಾನವನ್ನು ಹೊಂದಿ ದೇವರು ಭಕ್ತಜನಸಮೂಹದ ಆರಾಧನಾಶಕ್ತಿ ಮುಖಾಂತರಸಾನ್ನಿಧ್ಯ ಶಕ್ತಿಯನ್ನು ವೃಧ್ಧಿಸಿಕೊಂಡು ಶರಣಾಗತಸಮೂಹಕ್ಕೆ ಶ್ರೇಯಸ್ಸನ್ನು ಕರುಣಿಸಬಹುದಾಗಿದೆ.ದೇವತಾ ಸಾನ್ನಿಧ್ಯಕ್ಕೆ ಚ್ಯುತಿ ಬರುವ ಅಪಚಾರಗಳೇನಾದರೂಭಕ್ತರಿಂದಾಗಲೀ,ಅರ್ಚಕರಿಂದಾಗಲೀ,ಆಢಳಿತ,ಪರಿಚಾರಕ.ಭರ್ತ್ಯರಿಂದಾಗಲೀ, ಚೋರರಿಂದಾಗಲೀ ಸಂಭವಿಸಿದ್ದರೆ ಅದನ್ನು ತಿಳಿದು ಪ್ರಾಯಶ್ಚಿತ್ತ ಕರ್ಮಾದಿಗಳಿಂದದೋಷಗಳನ್ನು ದೂರಗೊಳಿಸಿ, ತನ್ಮೂಲಕ ದೇವತಾ ಸಾನ್ನಿಧ್ಯಶಕ್ತಿಯನ್ನು ವೃಧ್ಧಿಗೊಳಿಸಿ,ಅರ್ಚಕರಿಗೂ,ಆಢಳಿತದವರಿಗೂ,ಭಕ್ತಜನ ಸಮೂಹಕಕ್ಕೂ,ಪರಿಚಾರಕ ಭೃತ್ಯವರ್ಗಕ್ಕೂ ಆಚಾರದ ಬಗ್ಗೆ ತಿಳಿ ಹೇಳುವುದು ತಂತ್ರಸಮುಚ್ಚಯದಲ್ಲಿ ನಿರೂಪಿಸಲ್ಪಟ್ಟಂತೆ ತಂತ್ರಿವರೇಣ್ಯರುಗಳ ಕರ್ತವ್ಯಗಳ ಸಾರಾಂಶ.

         ಈ ರೀತಿಯಾಗಿ ತಂತ್ರಿವರೇಣ್ಯರಿಂದ ಬಿಂಬದಲ್ಲಿ ಪ್ರತಿಷ್ಠಾಪಿಸಲ್ಪಟ್ಟ ಸಾನ್ನಿಧ್ಯ ಶಕ್ತಿಯನ್ನು ಅರ್ಚನಾದಿ ವಿಧಿಮುಖೇನ ವೃಧ್ಧಿಗೊಳಿಸಿ ಭಕ್ತಜನ ಸಮೂಹಕ್ಕೆ ಇಷ್ಟಾರ್ಥದಾಯಕನ  ಅನುಗ್ರಹ ದೊರಕಿಸಿ ಕೊಡುವ ಕರ್ತವ್ಯ  ಅರ್ಚಕರದು.ವಿವಿಧ ಶಾಸ್ತಕಾರರುಗಳಿಂದ,ರೂಪಿಸಲ್ಪಟ್ಟ
ವೈಖಾನಸ,ಪಾಂಚರಾತ್ರಗಳೇ ಮೊದಲಾದ ಆಗಮ ಗ್ರಂಥಗಳಲ್ಲಿ
 ಆಲಯಗಳ ಅರ್ಚಕರ ಕರ್ತವ್ಯ ವಿಧಿಗಳ ಬಗ್ಗೆ ವಿಸ್ತಾರವಾಗಿ ಹೇಳಲ್ಪಟ್ಟಿದೆ.ಇವುಗಳಲ್ಲಿ ಹೇಳಿರುವ ಮುಖ್ಯವಿಚಾರಗಳನ್ನು ಮಾತ್ರಾ ಇಲ್ಲಿ ನಿರೂಪಿಸಬಯಸುತ್ತೇನೆ. "ಅರ್ಚಕಸ್ಯ ಹರಿ: ಸಾಕ್ಷಾತ್ ಚರ ರೂಪೇ ನ: ಸಂಶಯ:" ಅಂಂದರೆ ಅರ್ಚಕನು ಸ್ವಯಂ ಭಗವಾನನಾಗಿ ಅಹಂ ಬ್ರಹ್ಮಾಸ್ಮಿ ಎಂಬ ತಾದಾತ್ಮ್ಯ ಭಾವದಿಂದ ಆರಾಧನಾಕರ್ಮವನ್ನು ನಿರ್ವಹಿಸಿದಲ್ಲಿ ಅಂತಹ ಅರ್ಚಕರುಗಳನ್ನು ಹೊಂದಿರುವ ದೇವಾಲಯಗಳು ನೆಲೆಸಿರುವ ನಾಡು ಧನ್ಯವೆನಿಸುತ್ತದೆ ಎನ್ನುತ್ತವೆ ಶಾಸ್ತ್ರಗಳು."ಬ್ರಾಹ್ಮಣಂ ಯೋನಿಜಂ ಶುಧ್ಧಂ ನಿಯತ ಬ್ರಹ್ಮವಾದಿನಾಂ|ವಿನಯಾದಿ ಗುಣೈರ್ಯುಕ್ತ: ಧರ್ಮ ಶೃತಿ ಪರಾಯಣ:||"" ಎಂಬುದಾಗಿ ಅನಿರುಧ್ಧ ಸಂಹಿತೆಯ ಆಧ್ಯಾಯ ೨ ರ ೧೨ ನೇ ಶ್ಲೋಕ ಹೇಳುತ್ತಿದೆ. "ಆದೌತ್ ಬ್ರಾಹ್ಮಣೋ ವಿದ್ವಾನ್ ಪಾಂಚರಾತ್ರ ಪರಾಯಣ:|ಗೃಹಸ್ಥೋ ಬ್ರಹ್ಮಚಾರೀಚ ವಾನಪ್ರಸ್ಥೋಥವಾಭವೇತ್||"ಎಂಬುದಾಗಿ ಪದ್ಮ ಸಂಹಿತೆಯಲ್ಲಿ ಅರ್ಚನಾಧಿಕಾರಿಯ ಬಗ್ಗೆ ಹೇಳಿದೆ.ಹೆಚ್ಚಿನ ಎಲ್ಲಾ ಆಗಮ ಸಂಹಿತೆಗಳಲ್ಲಿ ಅರ್ಚಕರ ಬಗ್ಗೆ " ಆತನು ಶಮ-ದಮ-ಶಾಂತನಿದ್ದು ಜಿತೇಂದ್ರಿಯನಾಗಿ ಧರ್ಮನಿರತನಿರಬೇಕು.ದಾನಿಯೂ,ಕರ್ಮನಿಷ್ಟನೂ ಆಗಿರುವುದರೊಂದಿಗೆ ಮಧುರ ಭಾಷಿಕನಾಗಿ,ಯೋಗ್ಯ ನಡೆ-ನುಡಿಯುಳ್ಳವನಾಗಿ,ವೇದವೇದಾಂಗಾದಿ ಸರ್ವ ಶಾಸ್ತ್ರ ಸಂಪನ್ನನಿರಬೇಕು.ಅಧ್ಯಯನ,ಅಧ್ಯಾಪನ,ಲೌಕಿಕ,ವೈದಿಕಶಾಸ್ತ್ರಗಳ ಅನುಭವಿಯೂ,ನಿರಹಂಕಾರಿಯೂ ಆಗಿರಬೇಕು.ಅಗ್ನಿಹೋತ್ರಿಯೂ,ಕುಶಾಗ್ರಮತಿಯೂ,ಸತ್ಯಸಂಪನ್ನನೂ,ದೀಕ್ಷಿತನೂ ಆಗಿದ್ದು ಸಂಗೀತ,ಸಾಹಿತ್ಯ,ಜ್ಯೋತಿಷ್ಯ ಇತ್ಯಾದಿ ಶಾಸ್ತ್ರಗಳಲ್ಲಿ ಪರಿಣತನಾಗಿರಬೇಕು. "ಆತ್ಮಾನಾಂ ಕಿಂಕರತ್ವೇನ ದೇವಾಯ ವಿನಿವೇದಯೇತ್"ಎಂಬಂತೆ ಶೋಭಿಸುತ್ತಿರಬೇಕು ಎಂದುಹೇಳಿದೆ.ಸಂಕ್ಷಿಪ್ತವಾಗಿ ಹೇಳುವುದಾದರೆ "ತದ್ಭ್ರುತ್ಯ ಭೃತ್ಯ ಪರಿಚಾರಿಕ ಭ್ರೃತ್ಯ ಭೃತ್ಯಸ್ಯ ಭೃತ್ಯ ಇತಿಮಾಂ" ಇತ್ಯೇವ ಲಕ್ಷಣ ಸಂಯುಕ್ತಂ ಅರ್ಚಕಂ ವರಯೇತ್ ತತ:||" ಹಣಕ್ಕಾಗಿ,ಪ್ರತಿಷ್ಠೆಗಾಗಿ ತೋರಿಕೆಗಾಗಿ,ಆರಾಧಿಸದೆ "ಆತ್ಮಾರ್ಥಂ ಪೂಜಯೇತ್ ದೇವಂ"ಎಂಬಂತೆ ತನ್ನ ಆತ್ಮ ಉಧ್ಧಾರಕ್ಕಾಗಿಯೂ,ರಾಷ್ಟ್ರದ ಮಂಗಲಕ್ಕಾಗಿಯೂ,ಭಕ್ತರಒಳಿತಿಗಾಗಿಯೂ,ತಾನು ಪೂಜಿಸುತ್ತಿರುವೆನೆಂಬ ಮನೋಭೂಮಿಕೆ ಅರ್ಚಕದ್ದಿರಬೇಕು."ಪ್ರತಿಮಾಯಾಶ್ಚಯೇ ದೋಷಾಹ್ಯರ್ಚಕಸ್ಯ ತಪೋಬಲಾತ್|ಸರ್ವತ್ರೇಶ್ವರ ಚಿತ್ತಸ್ಯನಾಶಂ ಯಾಂತಿಕ್ಷಣಾತ್ಕಿಲಂ||"{ಶುಕ್ರ ನೀತಿ} ಅಂದರೆ ಒಂದು ವೇಳೆ ಪ್ರತಿಮೆ,ಬಿಂಬ,ವಿಗ್ರಹಗಳಲ್ಲಿ ದೋಷವಿದ್ದಲ್ಲಿ ಅರ್ಚಕರ ತಪೋ ಬಲದಿಂದ ನಾಶವಾಗುವುದು.ಆದ ಕಾರಣ ಅರ್ಚಕನು ಅವಶ್ಯವಾಗಿ ತಪಸ್ವಿಯಾಗಿರಲೇಬೇಕು.

      ಆಲಯ ನಿತ್ಯಾರ್ಚನ ಸಂಹಿತೆಯಲ್ಲಿ"ದೃಷ್ಟ್ವಾರಣ್ಯೇ ಮಹಾವ್ಯಾಘ್ರಂ ಭೀತೋಭವತಿ ಮಾನವ:|ಅರ್ಚಕಂ ಮಂತ್ರಹೀನಂತು ತಥಾ ಭೀತೋ ಜನಾರ್ಧನ:| ಆಗಮ್ಯಮಾನಂ ಮತ್ತೇಭಂ ವಿಹ್ವಲಾಂಗೋ ಯಥಾ ನರ:| ಮಂತ್ರಹೀನಂ ತಥಾ ಪಶ್ಯನರ್ಚಕಂ ವಿಹ್ವಲೋ ಹರಿ:||"ಎಂದು ಹೇಳಿರುತ್ತದೆ.ಅಂದರೆ ಕಾಡಿನಲ್ಲಿ ಹುಲಿಯನ್ನು ಕಂಡ ಮಾನವನಂತೆ,ಮದಿಸಿದ ಆನೆಯನ್ನು ಕಂಡು ದಿಕ್ಕೆಟ್ಟವನಂತೆ,ಸಿಂಹದ ನೆರಳನ್ನು ಕಂಡುಬೆವರಿದ ಆನೆಯಂತೆ ಮಂತ್ರಹೀನನಾದ ಅರ್ಚಕನನ್ನು ಕಂಡು ಪರಮಾತ್ಮ ಭಯಭೀತಗೊಳ್ಳುತ್ತಾನೆ ಎಂಬುದು ಭಾವಾರ್ಥ. ಇದರಿಂದಾಗಿಯೇ ಹೇಳುತ್ತಾರೆ "ಅರ್ಚಕಸ್ಯ ಪ್ರಭಾವೇನ ಶಿಲಾ ಭವತಿ ಶಂಕರ:".

      ದೇವಾಲಯಗಳಲ್ಲಿ ಅರ್ಚಕರ ಹಿರಿಮೆಗರಿಮೆಗಳಿಗೆ ಸಮಾನವಾದ ಪಾತ್ರ ಧರ್ಮದರ್ಶಿ ಸಮಿತಿ ಅಥವಾ ಆಢಳಿತಮಂಡಳಿಯದ್ದು.ಅರ್ಚಕರು ಹಾಗೂ ಧರ್ಮದರ್ಶಿ ಮಂಡಳಿ ದೇವಾಲಯಕ್ಕೆ ಕಣುಗಳಿದ್ದಂತೆ.ಧರ್ಮಕರ್ತರಬಗ್ಗೆ ಹೇಳುತ್ತಾ ಶಾಸ್ತ್ರಗಳು ಅವರು ಸದಾಚಾರಿಗಳು,ಶ್ರೋತ್ರೀಯ ಬ್ರಹ್ಮಜ್ಞಾನಿಗಳು, ಸತ್ಯವಾದಿಗಳು,ಪಾಪಬೀರುಗಳು,ಶಾಸ್ತ್ರಗಳಬಗ್ಗೆ ಪರಿಣತಿಯುಳ್ಳವರು,ಆಸ್ತಿಕರೂ ಆಗಿದ್ದು ಧರ್ಮನಿರತರಿರಬೇಕೆಂದು ಹೇಳಿದೆ. ಮುಂದುವರಿಸುತ್ತಾ ಅವರು "ಪರದಾರಾ ಧನಾಕಾಂಕ್ಷಾ ವರ್ಜಂತೋ ವೃದ್ಧಯೇವಚ" ಅಂದರೆ ಪರವಧು,ಪರಧನಗಳಬಗ್ಗೆ ನಿರ್ಲಿಪ್ತನಾಗಿ ಪಂಚಸಂಸ್ಕಾರಿಯಾಗಿ,ದೀನರಲ್ಲಿ ಕೃಪೆಯುಳ್ಳವನಾಗಿ ಉತ್ತಮ ವಂಶದಲ್ಲಿ ಜನಿಸಿದ್ದು ಭಕ್ತಶ್ರೇಷ್ಠನಾಗಿರಬೇಕು.ಪಂಡಿತನಾಗಿದ್ದು ಕಾರ್ಯಸಾಧಕತ್ವವನ್ನು ಹೊಂದಿ, ದಕ್ಷನೂ,ಧೈರ್ಯಶಾಲಿಯೂ, ವಿವೇಕಿಯೂ ಆಗಿರುವ ಸಜ್ಜನನಿರಬೇಕು.ಹಸ್ತ,ಕ್ರಿಯಾ,ಮನೋಶುದ್ಧಿಯುಳ್ಳವನಿರಬೇಕು.ಆಢಳಿತದ ವಿಚಾರದಲ್ಲಿ ಎಚ್ಚರಿಕೆಯಲ್ಲಿದ್ದು, ಕಾಲಕಾಲಕ್ಕೆ ನಿತ್ಯನೈಮಿತ್ತಿಕಾದಿಗಳನ್ನು ನಡೆಯಿಸುವ ಹೊಣೆಯುಳ್ಳವನಾಗಿರಬೇಕು.ಭಕ್ತರ,ಸೇವಾಸಕ್ತರ,ನೌಕರರ ಬಗ್ಗೆ ಆದರಣೀಯ ಭಾವನೆ ಹೊಂದಿರಬೇಕು.ಪೂಜಾ ಉತ್ಸವಾದಿ ಕಾಲಗಳಲ್ಲಿ ಸ್ವಯಂ ಹಾಜರಿರಲು ಬಿಡುವುಳ್ಳವರಿರಬೇಕು.ಹೋಣೆಗಾರಿಕೆಯಲ್ಲಿ ಮುಂದಿದ್ದು ಫಲಾನುಭವದಲ್ಲಿ ಹಿಂದಿರುವವನಾಗಿದ್ದು ದೇವಾಲಯದ ಪ್ರಗತಿಯ ಬಗೆಗೆ ಸದಾ ಕಳಕಳಿ ಹೊಂದಿರಬೇಕು.ಆಢಳಿತಮಂಡಳಿ ಅಥವಾ ಧರ್ಮದರ್ಶಿ ಮಂಡಳಿ ತಮ್ಮ ಕರ್ತವ್ಯದಲ್ಲಿ ವಿಮುಖವಾದಲ್ಲಿ ಶಿಲೆಶಿಲೆಯಾಗಿ ಅಪರಿಹಾರ್ಯವಾದ ಮಹಾದೋಷ, ದೇವತಾಶಾಪಕ್ಕೆ ಈಡಾಗುವುದರೊಂದಿಗೆ ಅವರ ಸಂತತಿ ನಾಶವಾಗುತ್ತದೆಯೆಂದು ಶಾಸ್ತ್ರಗಳು ಸಾರುತ್ತಿವೆ.ಒಂದು ದೇವಾಲಯಕ್ಕೆ ಒಳ್ಳೆಯ ಅರ್ಚಕನು ಸಿಗುವುದು ಎಷ್ಟು ದುರ್ಲಭವೋ ಅಷ್ಟೇ ಕಷ್ಟ ಉತ್ತಮ ಆಢಳಿತಮಂಡಳಿ ದೊರಕುವುದು ಎಂಬುದು ಹಲವಾರು ದೇವಾಲಯಗಳಲ್ಲಿನ ಕಲಹಗಳ ಸುದ್ದಿಗಳ ಅವಲೋಕನದಿಂದ ತೀರ್ಮಾನಿಸಬಹುದಾಗಿದೆ ಎಂಬುದಿಲ್ಲಿ ಉಲ್ಲೇಖಿಸಬಹುದಾದ ವಿಚಾರ.


     ದೇವಾಲಯಕ್ಕೆ ಬರುವ ಭಕ್ತಾದಿಗಳು ಹೇಗಿರಬೇಕು,ಅವರುಗಳ ಕರ್ತವ್ಯಗಳೇನು?,ಅವರ ಯಾವ್ಯಾವ ಕಾರ್ಯಕ್ಕೆ ಏನು ಫಲಕಾದಿದೆ ಎಂಬುದನ್ನೂ ಶಾಸ್ತ್ರಗಳು ವಿಶದವಾಗಿ ತಿಳಿಯಪಡಿಸಿವೆ.ಅವುಗಳ ಕುರಿತು ಮನನ ಮಾಡಿಕೊಳ್ಳೋಣ.ದೇವಾಲಯಕ್ಕೆ ಬರುವ ಭಕ್ತಾದಿಗಳು ತ್ರಿಕರಣ{ಕಾಯಾ-ವಾಚಾ-ಮನಸ್ಸು}ಶುದ್ಧರಿದ್ದು ದೇವರಲ್ಲಿ ಶ್ರದ್ಧಾ ಭಕ್ತಿಯುಳ್ಳವರಿರಬೇಕು.ದೇವಾಲಯದ ಸಂಪ್ರದಾಯಗಳನ್ನು ಗೌರವಿಸುವಂತಹರಿರಬೇಕು.ದೇವರಲ್ಲಿ ಪೂರ್ಣನಂಬಿಕೆಯಿದ್ದು ಅರ್ಪಣಾಮನೋಭಾವನೆಯುಳ್ಳವನಿರಬೇಕು.ಪಾಪ-ಪುಣ್ಯಗಳ ಅರಿವು,ಪುನರ್ಜನ್ಮದಲ್ಲಿ ನಂಬಿಕೆ,ದಾನ ಧರ್ಮಗಳಲ್ಲಿ ಆಸಕ್ತಿ,ದೇವಾಲಯದ ಕಾರ್ಯಗಳಲ್ಲಿ ಪಾಲುಗೊಳ್ಳಲು ತೆರೆದ ಮನಸ್ಸು ಭಕ್ತನಿಗಿರಬೇಕು.ಆತ್ತಿತ್ತ ಓಡಾಡುವುದು,ಹರಟೆಕೊಚ್ಚುವುದು,ಲಲ್ಲೆ ಹೊಡೆಯುವುದು,ಕೀಟಲೆ,ನಿಂದನೆ ಮಾಡುವುದು, ಆತ್ಮಪ್ರಶಂಸೆ,ಬೂಟಾಟಿಕೆ,ಅತಿಯಾದ ಅಲಂಕಾರ,ಅಂಗಾಂಗಪ್ರದರ್ಶನ,ಹಾವಭಾವಪ್ರಕಟಣೆ,ಇವೆಲ್ಲವೂ ಭಕ್ತರಿಗೆ ಸಲ್ಲದ ಗುಣಗಳಾಗಿವೆ.ದೇವಾಲಯದ ಆವರಣದೊಳಗೆ ದೇವರ ಹೊರತಾಗಿ ಇತರರಿಗೆ ವಂದಿಸುವುದು,ಗುಡಿಯೊಳಗೆ ವಸ್ತ್ರ ಹೊದ್ದುಕೊಂಡು ಬರುವುದು,ಅಥವಾ ವಸ್ತ್ರ ಹೊದ್ದುಕೊಂಡು ನಮಸ್ಕರಿಸುವುದು ನಿಷಿದ್ಧಕಾರ್ಯಗಳು."ಸಪ್ತ ಜನ್ಮ ಭವೆತ್ಕುಷ್ಠ ಶ್ವಾನಯೋನೀ ಶತಂ ವ್ರಜೇತ್"ಎಂಬುದಾಗಿ ಇಂತಹಾ ಅಕಾರ್ಯಗಳಿಗೆ ಶಾಸ್ತ್ರಗಳಲ್ಲಿ ಫಲಹೇಳಿದೆ. ಜಾತಿ,ಮತ,ಕುಲ;ಬಡವ-ಬಲ್ಲಿದ;ನಮ್ಮವ-ಅನ್ಯರವ;ಧರ್ಮಕರ್ತ,ಅಧಿಕಾರಿ,ಹಣವಂತ;ದಾನಿ,ಪಂಡಿತ ಇತ್ಯಾದಿ ಭೇದಗಳಾಗಲೀ,’ನಾನು’ಎಂಬ ಅಹಂ ಆಗಲೀ ಸಲ್ಲದ ಕಾರ್ಯಗಳು.ದೇವಾಲಯಗಳಲ್ಲಿ ಎಲ್ಲರಿಗೂ ತೆರೆದಬಾಗಿಲು.ದೇವಾಲಯಕ್ಕೆ ಬರುವವರು ತ್ರಿಕರಣ ಶುದ್ಧರಾಗಿ ತಮ್ಮ ಕುಲ ಪದ್ಧತಿಯಂತೆ ವಿಭೂತಿ,ಚಂದನ,ಗಂಧ,ಕುಂಕುಮಾದಿಗಳನ್ನು ಧರಿಸಿರಬೇಕು. ಪಾದರಕ್ಷೆಗಳನ್ನು ಧರಿಸಿರಬಾರದು."ರಿಕ್ತ ಹಸ್ತೇ ನಗಂತವ್ಯ ದೇವತಾ ಗುರುಸನ್ನಿಧೌ"ಎಂಬುದನ್ನು ಪಾಲನೆಮಾಡಬೇಕು.ದೇವಾಲಯಗಳ ಕಟ್ಟುಪಾಡುಗಳ ಬಗ್ಗೆ ಗೌರವವಿದ್ದು,ಅದನ್ನು ಪಾಲಿಸಲು ಬದ್ಧನಿರಬೇಕು.ಕಂಬಳಿ,ಶಾಲು,ಅಂಗಿ ಹೊದ್ದುಕೊಂಡು ನಮಸ್ಕರಿಸಿದರೆ ಐದಾವರ್ತಿ ಚಂಡಾಲನಾಗಿ ಜನ್ಮವೆತ್ತುತ್ತಾನೆ ಎಂದು ಶಾಸ್ತ್ರಗಳಲ್ಲಿ ಹೇಳಿದೆ. ಗರ್ಭಮಂದಿರದ ಮುಂದೆ,ಸಮೀಪ,ಹಿಂದೆ,ಎಡಭಾಗ,ಜಪ,ಹೋಮಸ್ಥಳಗಳ ಸಮೀಪದಲ್ಲಿ ನಮಸ್ಕರಿಸಕೂಡದು ಎಂಬ ನಿಯಮವಿದೆ. "ಅಗ್ರೇತು ಮೃತ್ಯು| ಪೃಷ್ಠಭಾಗೇ ನಿರರ್ಥಕಂ|ವಾಮಭಾಗೇ ವಿಚಾರಂದ್ಯಾತ್|ದಕ್ಷಿಣೇ ಪ್ರಣವಂ ಕುರು||" ’ಬಲಭಾಗದಲ್ಲಿ ನಮಸ್ಕಾರ ಮಾಡು’ಎನ್ನುತ್ತವೆ ಶಾಸ್ತ್ರಗಳು.ದೇವಾಲಯಗಳಲ್ಲಿ ಶುಚಿತ್ವಕ್ಕೆ ಮಹತ್ವ ನೀಡಬೇಕು. ನಿಷಿದ್ಧ ಆಹಾರ-ಪಾನೀಯಗಳ ಸೇವನೆ ಮಾಡಿ ದೇವತಾ ದರ್ಶನಸಲ್ಲದು.


       ಇದೇ ರೀತಿಯಾಗಿ ದೇವಾಲಯಗಳಲ್ಲಿ ನಿದ್ರಿಸುವುದು,ಕಾಡುಹರಟೆ,ಕೋಪ-ದು:ಖಪ್ರದರ್ಶನ,ಕಲಹ,ಅನ್ಯವಿಚಾರಗಳ ಚರ್ಚೆ,ಮೈ ಮುರಿಯುವುದು,ಆಕಳಿಸುವುದು,ತಾಂಬೂಲ ಚರ್ವಣ,ಹೊಗೆಬತ್ತಿ ಸೇದುವುದು,ಪರಸ್ತ್ರೀಯರತ್ತ ನೋಟ,ನಿಷಿದ್ಧವಸ್ತುಗಳ ಮಾರಾಟ,ಹಿಂಸೆ,ನಿಷ್ಠುರ ನುಡಿ,ಅಟ್ಟಹಾಸ,ಸ್ವಪ್ರತಿಷ್ಠೆ,ಪರದೂಷಣೆ,ನಿಷಿದ್ಧ ಆಹಾರ-ಪಾನೀಯಗಳ ಸೇವನೆಯಂತಹಾ ಕಾರ್ಯಗಳು ಘನಘೋರ ಪಾತಕಗಳಿಗೆ ಸಮನಾಗಿ ಸಪ್ತಜನ್ಮ ಅಪರಿಹಾರ್ಯವಾದ ದೋಷಗಳೆಂದು ಶಾಸ್ತ್ರಗಳು ಹೇಳಿವೆ.ದೇವತಾ ಸಾನ್ನಿದ್ಧ್ಯಕ್ಕೆ ಬಂದವರನ್ನು ತೆಗಳುವುದು,ನಿಂದಿಸುವುದು,ದೇವತಾಕಾರ್ಯಗಳಲ್ಲಿ ಯಥಾಸಾಧ್ಯ ಭಾಗವಹಿಸುವಂತಹರವರನ್ನು ತಡೆಯುವುದು ಕುಲನಾಶಕ್ಕೆ ಕಾರಣವಾಗುತ್ತವೆಯೆಂದು ಶಾಸ್ತ್ರಗಳು ಎಚ್ಚರಿಸಿವೆ. ದೇವಾಲಯಗಳಲ್ಲಿ ವಸ್ತ್ರ ಆಭರಣಾದಿಗಳನ್ನು ಕದ್ದರೆ, ಯಮಪಾಶದ ಭಾದೆ, ಮತ್ತು ನರಕ ಯಾತನೆ, ವಾಹನಗಳನ್ನು ಅಪಹರಿಸಿದರೆ, ಹಾಳುಗೆಡವಿದರೆ ನರಕ ಜ್ವಾಲೆಯ ಶಿಕ್ಷೆ ಮತ್ತು ಪಿಶಾಚಿಯಾಗಿ ಅಲೆದು ಕೊನೆಗೆ ಗಾರ್ಧಭ ಜನ್ಮ, ಹೂವು, ಗಂದ ಇತ್ಯಾದಿಗಳನ್ನು ಕದ್ದರೆ ಯಮಯಾತನೆ ಅನುಭವಿಸಿ ಇಲಿಜನ್ಮ, ದೇವಾಲಯದಲ್ಲಿ ವ್ಯಾಯಾಮ,ಅಭ್ಯಂಗ ಮಾಡುವುದು,ದೇವರ ತೀರ್ಥದ ಹೊರತಾಗಿ ನಿಷೇಧಿತ ಪಾನೀಯಗಳ ಸೇವನೆಮಾಡುವುದರಿಂದ ಕುಲನಾಶವಾಗುತ್ತದೆ ಎಂದು ಶಾಸ್ತ್ರಕಾರರು ಸಾರಿರುವರು. ದೇವಾಲಯಕ್ಕೆ ಸಂಬಂಧಿಸಿದ ಪತ್ರ,ಪುಷ್ಪ,ಫಲ,ತೋಯ{ನೀರು},ನೆಲ,ಧನ,ಅನ್ನವನ್ನು ಸ್ವಾರ್ಥಕ್ಕಾಗಿ ಬಳಸಿಕೊಂಡವ ಇಪ್ಪತ್ತೊಂದು ಜನ್ಮಗಳ ರೌರವನರಕಕ್ಕೆ ಭಾಜನನಾಗುತ್ತಾನೆಂದು ಶಾಸ್ತ್ರಗಳು ಎಚ್ಚರಿಸಿವೆ."ಅನ್ಯೇಷ್ವಪಚಾರೇಷು ಸ್ಥೂಲ ಸೂಕ್ಷ್ಮೇಷು ಮಾನವಾ:| ಕೃತಿನ: ಪ್ರೇತ್ಯ ನರಕೇ ಪಶ್ಯಂತೇ ದು:ಖ ಭಾಗಿನ:" ಎಂದು ಋಷಿ,ಮುನಿಗಳು ತೀರ್ಮಾನಿಸಿರುತ್ತಾರೆ.ದೇವಾಲಯದ ನವೀಕರಣ ಕಾರ್ಯಗಳಿಗೆ ಅಡ್ಡಿಆತಂಕಗಳನ್ನು ಒಡ್ಡುವವರು ಜನ್ಮಾಂತರ ಸಹಸ್ರ ಪಾಪಯೋನಿಗಳಲ್ಲಿ ಜನ್ಮವೆತ್ತಿ ಕುಲನಾಶದೊಡನೆ ಅಪರಿಹಾರ್ಯವಾದ ಮಹಾದೋಷಗಳಿಗೆ ಭಾಜನರಾಗುತ್ತಾರೆ ಎಂದು ಹೇಳುತ್ತಾ ಕಲ್ಪಾಂತ ಪರ್ಯಂತ ಕ್ಷುದ್ರ ಜಂತುವಾಗಿ ಜನ್ಮವೆತ್ತುತ್ತಾರೆಂದು ಧರ್ಮ ಶಾಸ್ತ್ರಗಳು ಬೊಟ್ಟು ಮಾಡಿ ಹೇಳಿವೆ. ದೇವಾಲಯಗಳಲ್ಲಿ ಮಾಡಬಾರದ ಕಾರ್ಯಗಳಬಗ್ಗೆ ಒಂದು ಬೃಹತ್ ತಖ್ತೆಯನ್ನೇ ಮಾಡಬಹುದಾಗಿದ್ದು ಅವುಗಳ ಪೈಕಿ ಪ್ರಾಮುಖ್ಯವೆನಿಸಿದ ಅಕಾರ್ಯಗಳ ಬಗ್ಗೆ ಮಾತ್ರಾ ಇಲ್ಲಿ ನಮೂದಿಸಲಾಗಿದ್ದು ಇವುಗಳು ಸಾರ್ವಕಾಲಿಕವಾಗಿ ಎಲ್ಲಾ ದೇವಾಲಯಗಳಲ್ಲೂ ಸರ್ವಭಕ್ತಾದಿಗಳೂ ಆಚರಿಸಲ್ಪಡಲೇಬೇಕಾದವುಗಳೆಂದು ಸಂಹಿತೆಗಳು ಹೇಳಿವೆ.


          ಮುಂದುವರಿಸುತ್ತಾ ದೇವಾಲಯಗಳ ಆಚಾರ್ಯರುಗಳನ್ನು, ಅರ್ಚಕರನ್ನು ಗೌರವಿಸದಿರುವುದು,ಸಮೀಪದ ಆಲಯಗಳಿಗೆ ವಾಹನಗಳಲ್ಲಿ ತೆರಳುವುದು,ಪಾದರಕ್ಷೆಯೊಡನೆ ಗುಡಿಗಳ ಆವರಣ ಪ್ರವೇಶ,ಉತ್ಸವಗಳಲ್ಲಿ ನಮಸ್ಕರಿಸದಿರುವಿಕೆ, ಒಂದೇ ಕೈಯಿಂದ ನಮಸ್ಕರಿಸುವುದು,ದೇವತಾ ಸಾನ್ನಿದ್ಧ್ಯದಲ್ಲಿ ಅನ್ಯವ್ಯಕ್ತಿಗಳಿಗೆ ಸಲ್ಲದಗೌರವನೀಡುವುದು,ಗುಡಿಯೊಳಗೆ ಆತ್ಮ ಪ್ರಶಂಸೆ, ಅಶುಚಿಯಾದ ಕೈಗಳಿಂದ ನಮಸ್ಕಾರ,ಪೂಜಾ ವೇಳೆಯಲ್ಲಿ ದೇವರ ಹೊರತಾಗಿ ಅನ್ಯತ್ರ ನೋಟ,ದೇವರ ಎದುರು ಮೊಣಕಾಲು ಕಟ್ಟಿಕೂರುವುದು, ದೇವರ ಸಮೀಪ ಮಲಗುವುದು,ಇಲ್ಲವೇ ಕಾಲು ಚಾಚಿ ಕೂರುವುದು,ದೇವರ ಹತ್ತಿರ ಅಥವಾ ಎದುರು ಪ್ರಸಾದ ಸೇವನೆ,ಗುಡಿಯಲ್ಲಿ ಕಾಡುಹರಟೆ,ಅಶ್ಲೀಲ ಸಂಭಾಷಣೆ,ಗಟ್ಟಿಯಾಗಿ ಕಿರುಚುವುದು,ಅಳುವುದು,ಕೋಪ,ತಾಪ,ಅತಿಮುದ್ದು,ಕಲಹ,ದ್ವೇಷಸಾಧನೆ,ದೇವತಾಕಾರ್ಯಗಳನ್ನು ಮಾಡುವಾಗ ಅಡ್ಡಿಮಾಡುವುದು,ಒಬ್ಬರ ಮೇಲೆ ಕೃಪೆ,ಇನ್ನೊಬ್ಬರ ಬಗ್ಗೆ ದ್ವೇಷ, ಮಹಿಳೆಯರೊಡನೆ ಅನಾವಶ್ಯಕ ಪಟ್ಟಾಂಗ,ಆಡಬಾರದ ಕೀಳುನುಡಿ ನುಡಿಯುವುದು,ಬೆರಳು ,ಉಗುರು ಕಚ್ಚುವುದು,ಶಕ್ತಿಯಿದ್ದವರಿಂದ ಅತಿ ಕಡಿಮೆ ಸೇವೆ, ಅಶಕ್ತರಿಂದ ಶಕ್ತಿ ಮೀರಿದ ಸೇವೆ, ಅಪಕ್ವ ಪದಾರ್ಥಗಳ ಸೇವನೆ ಮತ್ತು ಸಮರ್ಪಣೆ, ದೇವರಿಗೆ ನಿವೇದಿಸುವ ಮೊದಲು ಪದಾರ್ಥಗಳ ಸ್ವೀಕಾರ, ಬಳಸಿದ ವಸ್ತುಗಳ ನಿವೇದನೆ, ಸೇವೆಗಳಲ್ಲಿ- ಆಡಂಬರ ಕಾರ್ಯಗಳಲ್ಲಿ ಭಾಗಿಗಳಾಗಲು ಉತ್ಸಾಹ, ಅತ್ತಿತ್ತ ಓಡಾಡುವುದು,ಹರಟೆ ಕೊಚ್ಚುವುದು,ಲಲ್ಲೆ ಹೊಡೆಯುವುದು,ಕೀಟಲೆ,ನಿಂದನೆ,ಕ್ಷುದ್ರದೇವತೆಗಳ ಸ್ತುತಿ,ಕಸಕಡ್ಡಿ ಹರಡುವಿಕೆ,ಪ್ರಸಾದ ತುಳಿಯುವಿಕೆ,ದೇವಾಲಯದ ಧರ್ಮದರ್ಶಿ ಮಂಡಳಿಯ ಎಲ್ಲಾ ಸದಸ್ಯರು ಉತ್ಸವಾದಿ ಸಮಸ್ತಕಾರ್ಯಗಳ ವೇಳೆ ಉಪಸ್ಥಿತರಿದ್ದು ಕಾರ್ಯಕ್ರಮಗಳ ಸುಗಮ ನಿರ್ವಹಣೆಗೆ ಗಮನ ಕೊಡದಿರುವುದು ದೇವಾಲಯಕ್ಕೆ ಬಂದ ಭಕ್ತಾದಿಗಳಿಗೆ ಪ್ರಸಾದ ವಿತರಣೆಗೆ ಮೊದಲು ಪ್ರಸಾದ ಸ್ವೀಕರಿಸುವುದು,ದೇವಾಲಯಕ್ಕೆ ಯಾ ದೇವರಿಗೆ ಸಂಬಂಧಿಸಿದಂತೆ ಯಾವುದಾದರೂ ಸೇವಾಕೈಂಕರ್ಯವನ್ನು ಸಂಕಲ್ಪಿಸಿ ಯಾ ವಾಗ್ದಾನ ಮಾಡಿ ನಂತರ ಮರೆತು ಬಿಡುವುದು ಅಥವಾ ಅನುಸರಿಸದಿರುವುದು ಪಂಚ ಮಹಾಪಾತಕ,ಉಪಪಾತಕಗಳ ಸಾಲಿಗೆ ಸೇರುತ್ತವೆ ಎಂದು ಬಹುತೇಕ ಧರ್ಮಗ್ರಂಥಗಳು ಪದೇಪದೇ ಭಕ್ತರನ್ನು ಎಚ್ಚರಿಸಿವೆ ಎಂಬುದು ಗಮನಾರ್ಹ.

        ಹಾಗೇನೇ ದೇವಾಲಯಗಳಲ್ಲಿ ಗುಡಿಸಿ ಸಾರಿಸಿದರೆ ಪಾಪವಿಮುಕ್ತಿ, ಸ್ವರ್ಗ ಪ್ರಾಪ್ತಿ, ದೇವಾಲಯಗಳಲ್ಲಿ ತೋಟ, ಪುಷ್ಪೋದ್ಯಾನ ನಿರ್ಮಿಸಿದಲ್ಲಿ ಇಷ್ಟಾರ್ಥ ಫಲ ಪ್ರಾಪ್ತಿ, ದೀಪ ಸೇಗೆ ನರಕೋದ್ಧರಣ ಜನ್ಮ ಪ್ರಾಪ್ತಿಯಾಗಿ ದು:ಖವಿಮುಕ್ತಿ, ತುಳಸಿ,ಪುಷ್ಪ, ಪತ್ರ ಸೇವೆಗೆ ಗೌರವ ಪ್ರಾಪ್ತಿ,ಅಭಿಷೇಕ ಸೇವೆಗೆ ವರುಣ ಲೋಕ ಸುಖ ಪ್ರಾಪ್ತಿ, ಭೂದಾನಕ್ಕೆ ಸ್ವರ್ಗಲೋಕ,ಬಾವಿ,ಕೊಳ ನಿರ್ಮಿಸಿದವರಿಗೆ ಅರಿಷ್ಠ ನಿವಾರಣೆಯಾಗಿ ಸಕಲ ಸಮೃದ್ಧಿ, ದೇವಾಲಯಗಳ ನವೀಕರಣಕ್ಕೆ ವೈಕುಂಠ ಲೋಕ ವಾಸ ಪ್ರಾಪ್ತಿ, ದೇವಳಗಳಿಗೆ ಧನ,ಕನಕ,ಧೂಪ,ತೈಲ,ತಂಡುಲ,ನಾರೀಕೇಳ,ಅಗರು ಚಂದನಾದಿಗಳನ್ನು ಯಥಾವತ್ ಪೂರೈಸುವವರಿಗೆ,ದೇವಾಲಯದ ಉತ್ಸವಾದಿಗಳ ಸಮಯದಲ್ಲಿ ನಿಷ್ಕಾಮರಾಗಿ ಶ್ರಮಿಸುವ ಭಕ್ತರಿಗೆ ಶಾಶ್ವತವಾದ ಉತ್ತಮಲೋಕ ಪ್ರಾಪ್ತಿಯಾಗಿ ಮೋಕ್ಷಎಂಬುದಾಗಿ ಎಂದು ಸಂಹಿತೆಗಳಲ್ಲಿ ಉಲ್ಲೇಖಿಸಲಾಗಿದೆ. ಅದೇ ರೀತಿ ಸಂಗೀತಸೇವೆ,ವಾದ್ಯ ಸೇವೆ,ವಸ್ತ್ರಾದಿ ಅರ್ಪಣೆ,ಆಭರಣ,ಧೂಪ,ದೀಪ,ತೈಲ,ಭಕ್ಷ್ಯ,ಭೋಜ್ಯ,ಪಾನೀಯ,ವಾಹನಗಳ ಪೂರೈಕೆ ಯಾ ದಾನಕ್ಕೆ ಅತಿಶಯವಾದ ಶುಭ ಫಲಗಳನ್ನು ಶಾಸ್ತ್ರಗಳುಹೇಳಿವೆ. ದೇವಾಲಯಗಳಲ್ಲಿ ಪೂಜಾ ಉತ್ಸವಗಳ ಕಾಲದಲ್ಲಿ ಶಂಖ,ಗಂಟೆ,ಜಾಗಟೆ,ನಗಾರಿ,ತಾಳ, ಮೃದಂಗಾದಿಗಳನ್ನು ಬಾರಿಸುವವರಿಗೆ,ಮಂಗಲಾರತಿಯನ್ನು ಅಲ್ಲಿ ಸೇರಿದ ಭಕ್ತರಿಗೆ ಒಡ್ಡುವವರಿಗೆ"ಸಪ್ತ ಜನ್ಮ ಕೃತಂ ಪಾಪಂ ಕ್ಷಣ ಮಾತ್ರ ವಿನಶ್ಯತಿ"ಎಂದಿವೆ ಧರ್ಮ ಶಾಸ್ತ್ರಗಳು.


         ದೇವಾಲಯಗಳಿಗೆ ಬೇಕಾದ ಆನೆ,ಕುದುರೆ,ಗರುಡ,ಶೇಷವಾಹನ,ಛತ್ರಿ,ಛಾಮರ,ಪಾದುಕೆ ಕನ್ನಡಿಯಾದಿಯಾಗಿ ಉಪಚಾರವಸ್ತುಗಳು,ದ್ವಜ,ಪತಾಕೆ,ತೋರಣಾದಿ ಅಲಂಕಾರಿಕ ವಸ್ತುಗಳು,ಭೇರ‍ಿ,ಗಂಟೆ,ಜಾಗಟೆ,ಧೂಪ,ದೀಪ,ನೈವೇದ್ಯ ಪಾತ್ರಗಳೇ ಮೊದಲಾದ ಆರಾಧನಾ ಪಾತ್ರಗಳು,ವಿವಿಧ ಆರತಿಗಳು,ತ್ರಿಪಾದಪೀಠ,ಕಾಲುಮಣೆ ಇತ್ಯಾದಿ ಆಸನಗಳು,ಪೂಜಾದ್ರವ್ಯ,ಅಲಂಕಾರಿಕ ವಸ್ತುಗಳ ಸಂಗ್ರಹ ಮತ್ತು ಜೋಪಾನಕ್ಕಾಗಿ ಕವಾಟು,ಭಕ್ತಾದಿಗಳ ಕಾಣಿಕೆ ಶೇಖರಿಸುವ ಹುಂಡಿ,ದೇವದಂಡ, ಪಲ್ಲಕ್ಕಿಇತ್ಯಾದಿಯಾಗಿ ಮಾರ್ಕಾಡೇಯಸಂಹಿತೆಯಲ್ಲಿ ಹೇಳಿದ ವಸ್ತುಗಳನ್ನು ಯಥಾಶಕ್ಯ,ಯಥಾಭಕ್ತ್ಯಾ ಯಾವಾತನು ಪೂರೈಸುತ್ತಾನೋ ಭೂಲೋಕದಲ್ಲಿ ಅವನ ಕುಟುಂಬಸಮಸ್ತರು ಉತ್ತರೋತ್ತರ ಅಭಿವೃದ್ಧಿಹೊಂದುವುದರೊಂದಿಗೆ ಕೊನೆಯಲ್ಲಿ ದೇವಲೋಕ ಸುಖವಾಸ ಪ್ರಾಪ್ತಿಯಾಗುತ್ತದೆಯೆಂದು ಗ್ರಂಥಗಳಲ್ಲಿ ಹೇಳಿದ್ದಿದೆ.

         ಒಟ್ಟಿನಲ್ಲಿ ದೇವಾಲಯಗಳಿಗೆ ಬಂದವರಿಗೆ ಶಾಂತಿಯೆಂಬ ತೀರ್ಥವೂ,ಸಮಾಧಾನವೆಂಬ ಪ್ರಸಾದವೂ, ದೊರಕುವಂತಾಗಬೇಕಾದುದು ಅತೀ ಅವಶ್ಯ.ಇದಕ್ಕಾಗಿ ಪ್ರಶಾಂತವಾದ, ಭಕ್ತಿಸಂಪನ್ನ ವಾತಾವರಣವಿರಬೇಕಾದುದು ಮುಖ್ಯ. ದೇವಾಲಯಗಳು ಮಾನವನ ಏಕಾಗ್ರತೆಯ ತಾಣಗಳಾಗಬೇಕು. ಗುಡಿಗೆ ಬಂದ ಭಕ್ತರಿಗೆ ಯಾವ ರೀತಿಯಲ್ಲೂ ಅಪಚಾರವಾಗಬಾರದು.ಭಕ್ತರಿಂದಲೂ ದೇವಾಲಯಗಳ ಕಟ್ಟುಪಾಡುಗಳ ಉಲ್ಲಂಘನೆಯಂತಹಾ ಅಪಚಾರವಾಗಬಾರದು.ದೇವಾಲಯಗಳಲ್ಲಿ ನೆಮ್ಮದಿಯ ಕಡಲು ಕದಡಬಾರದು.ಜ್ಞಾನಿ-ಅಜ್ಞಾನಿ; ಶಕ್ತ-ಅಶಕ್ತ; ಪಂಡಿತ-ಪಾಮರ; ಆ ಜಾತಿ-ಈ ಜಾತಿ ಇತ್ಯಾದಿ ತಾರತಮ್ಯಗಳಿಗೆ ಹೊರತಾದ ವಾತಾವರಣ ತುಂಬಿ ದು:ಖ-ದುಮ್ಮಾನಗಳು ದೂರವಾಗಿ ಆಶೆ-ಆಕಾಂಕ್ಷೆಗಳು ಕೈಗೂಡಿ ಸುಖ ಸದ್ಗತಿಗಳ ಪ್ರಾಪ್ತಿಗಾಗಿ ದೇವರ ಬಗ್ಗೆ ಚಿಂತನೆ,ಸೇವೆ, ಆರಾಧನೆಗಳಿಗಾಗಿ ದೇವಾಲಯಗಳು ಎದ್ದುನಿಲ್ಲಬೇಕು. ಅಲ್ಲಿ ದೇವತಾ ಸಾನ್ನಿಧ್ಯ ಬೆಳಗಬೇಕು. ಹಾಗಾಗಲು ದೇವಾಲಯಗಳಿಗೆ ಆಚಾರ ಸಂಹಿತೆಯಿರಬೇಕು.

         ನಮ್ಮ ಧರ್ಮ ಸಂಸ್ಕೃತಿಗಳೆಂಬ ದೀಪವನ್ನು ಜ್ವಲಂತವಾಗಿರಿಸಲು ಸಮಾಜದ ಐಕ್ಯತೆಯ ರಕ್ಷಣೆಗಾಗಿ,ಸಮಾಜದ ಸರ್ವತೋಮುಖ ಏಳಿಗೆಗಾಗಿ ದೇವಾಲಯಗಳು ಕೇಂದ್ರಬಿಂದುಗಳಾಗಿ ಬಿಂಬಿಸುವಂತಾಗಲು ಇಂದಿನ ದಿನಗಳಲ್ಲಿ ಅರ್ಚಕರುಗಳೂ, ಧರ್ಮದರ್ಶಿ ಮಂಡಳಿ ಸದಸ್ಯರುಗಳೂ,ಭಕ್ತಜನ ಸಮೂಹವೂ ಸ್ವಾರ್ಥತೆಯ ಆವರಣದಿಂದ ಹೊರಬಂದು ದೇವತಾ ಸಾನಿದ್ಧ್ಯ ಬೆಳಗಲು ಕರ್ತವ್ಯ ಪರಾಯಣರಾಗಲಿ. ಆ ದಿನಗಳು ನಾಡಿನೆಲ್ಲೆಡೆ ಬಹುಬೇಗನೆ ಬರಲೆಂದು ಸರ್ವೇಶ್ವರನಲ್ಲಿ ನಮ್ಮ ಪ್ರಾರ್ಥನೆಯಾಗಲಿ.


                                                ಸತ್ಯಮ್      ಶಿವಮ್       ಸುಂದರಮ್

1 comment:

  1. ತುಂಬಾ ವಿಷಯಂಗ ಇದ್ದು ನಿಂಗಳ ಈ ಬರಹಲ್ಲಿ. ತುಂಬಾ ತಿಳುವಳಿಕೆ ಸಿಕ್ಕಿದ ಹಾಂಗೆ ಆತು. ಧನ್ಯವಾದ ಪೆರ್ನಜೆ ಅಣ್ಣಾ :)

    ReplyDelete